ಮೀನುಗಾರರ ಸಬ್ಸಿಡಿಗೆ ಕತ್ತರಿ; ಒತ್ತಡಕ್ಕೆ ಮಣಿಯದಿರಲು ಮೀನುಗಾರರ ಆಗ್ರಹ

  • ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದದಲ್ಲಿ ಮೀನುಗಾರರಿಗೆ ಸಬ್ಸಿಡಿ ನಿಷೇಧದ ಪ್ರಸ್ತಾಪ
  • ಅಭಿವೃದ್ಧಿ ಹೊಂದಿದ ದೇಶಗಳಿಗಿರುವ ಕಾನೂನು ಭಾರತೀಯರಿಗೆ ಅನ್ವಯಿಸಬಾರದು

ಪ್ರಸ್ತುತ ವಿಶ್ವ ವ್ಯಾಪಾರ ಸಂಸ್ಥೆಯೊಂದಿಗಿನ (ಡಬ್ಲ್ಯೂಟಿಒ) ಒಪ್ಪಂದವು ಮೀನುಗಾರರಿಗೆ ನೀಡುತ್ತಿರುವ ಸಬ್ಸಿಡಿ ನಿಷೇಧಿಸುವುದರಿಂದ ಲಕ್ಷಾಂತರ ಮೀನುಗಾರರು ಮತ್ತವರ ಕುಟುಂಬಗಳು ಬೀದಿಗೆ ಬೀಳಲಿವೆ. ಸರ್ಕಾರಗಳು ಒದಗಿಸಿರುವ ಸಬ್ಸಿಡಿಯಿಂದಾಗಿ ಭಾರತದ ಮೀನುಗಾರರ ಸಮುದಾಯವು ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನೇ ಈಗಲೂ ಅವಲಂಬಿಸಿದೆ. ಆದರೆ ವಿದೇಶಗಳು ಕೈಗಾರಿಕೆಯ ರೀತಿಯಲ್ಲಿ ಮೀನುಗಾರಿಕೆ ನಡೆಸುವಾಗ ಸಬ್ಸಿಡಿ ನೀಡುವ ಅಗತ್ಯವಿರುವುದಲ್ಲಿ. ಅದೇ ಕಾನೂನನ್ನು ಭಾರತಕ್ಕೂ ಅನ್ವಯಿಸುವ ಬಗ್ಗೆ ಮೀನುಗಾರರಲ್ಲಿ ಆತಂಕ ವ್ಯಕ್ತವಾಗಿದೆ.

ವಿಶ್ವ ವ್ಯಾಪಾರ ಸಂಸ್ಥೆಯ 12ನೇ ಸಚಿವರ ಸಭೆ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿ ಭಾನುವಾರದಿಂದ ( ಜೂನ್ 12) ಆರಂಭವಾಗಿದೆ. ಈ ಸಭೆಯಲ್ಲಿ ಡಬ್ಲ್ಯೂಟಿಒನ ಸದಸ್ಯರಾಗಿರುವ ಅಭಿವೃದ್ಧಿ ಹೊಂದಿದ ದೇಶಗಳು ʻಪ್ರಸ್ತಾವಿತ ಮೀನುಗಾರಿಕೆ ಸಬ್ಸಿಡಿ ಒಪ್ಪಂದʼದ ಅಡಿಯಲ್ಲಿ ಮೀನುಗಾರರಿಗೆ ನೀಡಿರುವ ಸಬ್ಸಿಡಿಗಳನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.

ಆದರೆ ಭಾರತದ ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳು ಸಬ್ಸಿಡಿ ರದ್ದನ್ನು ವಿರೋಧಿಸಿವೆ. "ಭಾರತೀಯ ಮೀನುಗಾರರ ಸಬ್ಸಿಡಿ ತೆಗೆಯುವ ಬದಲಿಗೆ ಕೈಗಾರಿಕಾ ಮೀನುಗಾರಿಕೆಗೆ ಮಾತ್ರವೇ ಸಬ್ಸಿಡಿಯಲ್ಲಿ ನಿಯಂತ್ರಣವಿರಬೇಕು. ಜೀವನೋಪಾಯದ ಮೀನುಗಾರಿಕೆಗೆ ಸಬ್ಸಿಡಿ ಅಗತ್ಯವಿದೆ. ಮೀನುಗಾರರಿಗೆ ನೀಡುತ್ತಿರುವ ಸಬ್ಸಿಡಿ ತೆಗೆಯುವುದರಿಂದ ಅವರ ಕುಟುಂಬಗಳಿಗೆ ಸಮಸ್ಯೆಯಾಗಲಿದೆ" ಎಂದು ಮೀನುಗಾರರ ಸಂಘಟನೆಗಳು ಆಗ್ರಹಿಸಿವೆ.

ಭಾರತೀಯ ಮೀನುಗಾರರ ಹಿತಾಸಕ್ತಿ ಕಾಪಾಡಲು, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ರಾಜ್ಯಗಳನ್ನು ಪ್ರತಿನಿಧಿಸುವ 34 ಮೀನುಗಾರರ ಗುಂಪು ಈ ಸಭೆಯಲ್ಲಿ ಭಾಗವಹಿಸಿವೆ.

ಭಾರತೀಯ ನಿಯೋಗದ ನೇತೃತ್ವ ವಹಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, "ಅಭಿವೃದ್ಧಿ ಹೊಂದಿದ ದೇಶಗಳ ಒತ್ತಡಕ್ಕೆ ಮಣಿಯುವುದಿಲ್ಲ. ಮೀನುಗಾರಿಕೆ ಸಬ್ಸಿಡಿ ತೆಗೆಯುವಂತಹ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಭತ್ತಕ್ಕೆ ರಾಜ್ಯಗಳು ಶಿಫಾರಸು ಮಾಡಿರುವುದಕ್ಕಿಂತ ಕಡಿಮೆ ಎಂಎಸ್‌ಪಿ ಘೋಷಿಸಿದ ಕೇಂದ್ರ ಸರ್ಕಾರ

ಭಾರತ ಮಾತ್ರವೇ ತನ್ನ ಮೀನುಗಾರರಿಗೆ ಸಬ್ಸಿಡಿ ನೀಡುತ್ತಿಲ್ಲ. ಚೀನಾ ದೇಶ ಪ್ರತಿ ವರ್ಷ 57 ಸಾವಿರ ಕೋಟಿ (7.3 ಬಿಲಿಯನ್ ಡಾಲರ್), ಯೂರೋಪ್ ಒಕ್ಕೂಟ 29 ಸಾವಿರ ಕೋಟಿ (3.8 ಬಿಲಿಯನ್ ಡಾಲರ್) ಮತ್ತು ಅಮೆರಿಕವು 26 ಸಾವಿರ ಕೋಟಿ (3.4 ಬಿಲಿಯನ್ ಡಾಲರ್)ನಷ್ಟು ಸಬ್ಸಿಡಿಯನ್ನು ಮೀನುಗಾರರಿಗೆ ನೀಡುತ್ತಿವೆ. ಆ ದೇಶಗಳಲ್ಲಿ ಮೀನುಗಾರಿಕೆ ಒಂದು ಕೈಗಾರಿಕೆ ರೂಪದಲ್ಲಿ ಬೆಳೆದಿದ್ದು, ದೊಡ್ಡ ಯಾಂತ್ರಿಕ ದೋಣಿಗಳಲ್ಲಿ ಎಗ್ಗಿಲ್ಲದ ಮೀನುಗಾರಿಕೆ ನಡೆಸಲಾಗುತ್ತಿದೆ. ವಿಶೇಷ ಆರ್ಥಿಕ ವಲಯಗಳನ್ನು ಮೀರಿ ಆಳದ ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸುವ ದೊಡ್ಡ ಮೀನುಗಾರಿಕೆ ಹಡಗುಗಳನ್ನು ಅಲ್ಲಿನ ಮೀನುಗಾರ ಕೈಗಾರಿಕೆಗಳು ಒಳಗೊಂಡಿವೆ.

ಭಾರತವು ಸಣ್ಣ ಮೀನುಗಾರರಿಗೆ 2018ರಲ್ಲಿ ಕೇವಲ 2 ಸಾವಿರ ಕೋಟಿ (227 ಮಿಲಿಯನ್) ಸಬ್ಸಿಡಿ ನೀಡಿದೆ. ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ (ಸಿಎಂಎಫ್‌ಆರ್‌ಇ) 2016ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಸಮುದ್ರ ಮೀನುಗಾರರ ಕುಟುಂಬಗಳ ಸಂಖ್ಯೆ 9 ಲಕ್ಷ. ಸುಮಾರು 29 ಕೋಟಿ ಜನರಿಗೆ ಮೀನುಗಾರಿಕೆಯೇ ಜೀವನೋಪಾಯ. ಇದರಲ್ಲಿ ಸುಮಾರು ಶೇ. 67.3ರಷ್ಟು ಕುಟುಂಬಗಳು ಬಿಪಿಎಲ್‌ ವರ್ಗಕ್ಕೆ ಒಳಪಟ್ಟಿವೆ.

ಮೀನುಗಾರರಿಗೆ ಕೊಡುತ್ತಿದ್ದ ಸಬ್ಸಿಡಿ ನಿಲ್ಲಿಸುವುದರಿಂದ ಲಕ್ಷಾಂತರ ಮೀನುಗಾರರ ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕ ವ್ಯಕ್ತವಾಗಿದೆ. 2019ರಲ್ಲಿ ಭಾರತದಲ್ಲಿ ನಡೆದ ಒಟ್ಟು ಮೀನುಗಾರಿಕೆ ಸುಮಾರು 4.4 ಮಿಲಿಯನ್‌ ಟನ್‌ ಆಗಿದ್ದರೆ, ಅದರಲ್ಲಿ ಸುಮಾರು 3.8 ಮಿಲಿಯನ್‌ ಟನ್‌ಗಳಷ್ಟು ಮೀನು ಸಮುದ್ರದಿಂದ ದೊರೆತಿವೆ. ಭಾರತದಲ್ಲಿ ಸಮುದ್ರ ಮೀನುಗಾರಿಕೆಯು ಲಕ್ಷಾಂತರ ಜನರಿಗೆ ಆಹಾರ ಭದ್ರತೆ ಒದಗಿಸುತ್ತದೆ. ಇಲ್ಲಿ ಯಾವುದೇ ಮೀನುಗಾರಿಕೆ ಕೈಗಾರಿಕೆಯಾಗಿ ಬೆಳೆದಿಲ್ಲ ಎಂಬುದು ಗಮನಿಸಬೇಕಾಗುತ್ತದೆ ಎಂದು ಮೀನುಗಾರ ಸಮುದಾಯ ಒತ್ತಾಯಿಸುತ್ತಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್