
- ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಉತ್ಪಾದನೆ ಮೇಲಿದ್ದ ನಿಷೇಧ ರದ್ದು
- ತಯಾರಾದ ಪೌಡರ್ ಮೂರು ಪ್ರಯೋಗಾಲಯಗಳಿಗೆ ಕಳಿಸುವಂತೆ ಸೂಚನೆ
`ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್' ಉತ್ಪಾದನೆಗೆ ಮಹಾರಾಷ್ಟ್ರ ಸರ್ಕಾರ ವಿಧಿಸಿದ್ದ ನಿರ್ಬಂಧವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಆದರೆ, ಅವುಗಳ ಮಾರಾಟದ ಮೇಲಿನ ನಿಷೇಧ ಮುಂದುವರಿಸಿದೆ.
"ಮುಂಬೈನ ಮುಲುಂಡ್ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ತಯಾರಿಸಬಹುದು. ಬಳಿಕ ಆ ಪೌಡರ್ನ ಸ್ಯಾಂಪಲ್ಗಳನ್ನು ಮೂರು ಪ್ರಯೋಗಾಲಯಕ್ಕೆ ಕಳಿಸಬೇಕು" ಎಂದು ಕಂಪನಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಜಾನ್ಸನ್ಸ್ ಬೇಬಿ ಪೌಡರ್ನಲ್ಲಿ ಹಾನಿಕಾರಕ ಅಂಶಗಳಿದ್ದು, ಹೀಗಾಗಿ ತಕ್ಷಣವೇ ಉತ್ಪಾದನೆ ನಿಲ್ಲಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ 2022ರ ಸೆ.15 ರಂದು ಸೂಚನೆ ನೀಡಿ, ಪರವಾನಗಿ ರದ್ದು ಮಾಡಿತ್ತು.
ಇದನ್ನು ಪ್ರಶ್ನಿಸಿ ʼನಿಶಿತ್ ದೇಸಾಯಿ ಅಂಡ್ ಅಸೋಸಿಯೇಟ್ಸ್ ಸಂಸ್ಥೆʼ ಮೂಲಕ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲಾ ಮತ್ತು ಎಸ್ ಜಿ ಡಿಗೆ ಅವರು ವಿಚಾರಣೆ ನಡೆಸಿದರು.
ಈ ವೇಳೆ ಕಂಪನಿ ತಯಾರಿಸುವ ಹೊಸ ಪೌಡರ್ ಸ್ಯಾಂಪಲ್ಗಳನ್ನು ಸಂಗ್ರಹಿಸಿ ನಿಗದಿತ ಅವಧಿ ಒಳಗೆ ಎರಡು ಸರ್ಕಾರಿ ಪ್ರಯೋಗಾಲಯಗಳು ಮತ್ತು ಒಂದು ಖಾಸಗಿ ಪ್ರಯೋಗಾಲಯಕ್ಕೆ ಸಲ್ಲಿಸುವಂತೆ ಪೀಠ ಆದೇಶಿಸಿತು.
ಈ ಸುದ್ದಿ ಓದಿದ್ದೀರಾ?: ಬೀದಿ ನಾಯಿಗಳಿಗೆ ಊಟ | ಬಾಂಬೆ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಈ ಹಿಂದೆ ಮಹಾರಾಷ್ಟ್ರ ಆಹಾರ ಹಾಗೂ ಔಷಧ ಆಡಳಿತವು ಸಂಶೋಧನೆ ನಡೆಸಿ, ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಗುಣಮಟ್ಟದಿಂದ ಕೂಡಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ ಮಹಾರಾಷ್ಟ್ರ ಸರ್ಕಾರವು, ಸೆ.15ರಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಪರವಾನಗಿ ರದ್ದುಗೊಳಿಸಿತ್ತು.