ಭೀಮಾ ಕೋರೆಗಾಂವ್‌ ಪ್ರಕರಣ | ಐಐಟಿ ಮಾಜಿ ಪ್ರೊಫೆಸರ್‌ ಆನಂದ್‌ ತೇಲ್ತುಂಬ್ಡೆಗೆ ಜಾಮೀನು ಮಂಜೂರು

  • ‌ಆನಂದ್‌ ತೇಲ್ತುಂಬ್ಡೆ ಅವರಿಗೆ ಜಾಮೀನು ಸಿಕ್ಕರೂ ಸಿಗದ ಬಿಡುಗಡೆ ಭಾಗ್ಯ
  • ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲು ಸಮಯ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಬಂಧಿಯಾಗಿದ್ದ ಮಾಜಿ ಐಐಟಿ ಪ್ರೊಫೆಸರ್‌ ಮತ್ತು ದಲಿತ ವಿದ್ವಾಂಸ ಪ್ರೊ.ಆನಂದ್‌ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

2021ರಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಆನಂದ್‌ ತೇಲ್ತುಂಬ್ಡೆ ಅವರು ಸಲ್ಲಿಸಿದ್ದ ಮೇಲ್ಮನವಿಯ‌ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಸ್‌ ಗಡ್ಕರಿ ಮತ್ತು ಮಿಲಿಂದ್‌ ಜಾಧವ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. 

Eedina App

ಆರೋಪಿಗೆ ಒಂದು ಲಕ್ಷ ರೂಪಾಯಿ ಬಾಂಡ್‌ ಮತ್ತು ಇಬ್ಬರು ಶ್ಯೂರಿಟಿ ನೀಡಬೇಕು ಎಂದು ಹೇಳಿ ನ್ಯಾಯಾಲಯವು ಜಾಮೀನು ನೀಡಿದೆ. ಆದರೂ, ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಎನ್‌ಐಎ ಬಾಂಬೆ ಹೈಕೋರ್ಟ್‌ ಒಂದು ವಾರ ಕಾಲಾವಕಾಶ ನೀಡಿದೆ. ಆವರೆಗೆ  ಜಾಮೀನು ಆದೇಶಕ್ಕೆ ತಡೆ ನೀಡಿದೆ.  

"2017ರ ಡಿಸೆಂಬರ್ 31ರಂದು ಮಹಾರಾಷ್ಟ್ರದ ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಮರು ದಿನ ನಗರದ ಹೊರವಲಯದಲ್ಲಿರುವ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು" ಎಂದು ಪೊಲೀಸರು ಆರೋಪಿಸಿದ್ದರು.

AV Eye Hospital ad

"ಆನಂದ್‌ ತೇಲ್ತುಂಬ್ಡೆಯವರು ಈ ಸಮ್ಮೇಳನದ ಸಂಚಾಲಕರಾಗಿದ್ದರು. ಪ್ರಧಾನಿ ಹತ್ಯೆ ಮಾಡಲು ಇವರು ಸಂಚು ರೂಪಿಸಿದ್ದರು" ಎಂದೂ ಎನ್‌ಐಎ ಆರೋಪಿಸಿತ್ತು. "ಪುಣೆ ಪೊಲೀಸರು ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ" ಎಂದು ಹೇಳಿದ್ದರು.

"ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದಾರೆ, ಅದರ ಕಾರ್ಯಸೂಚಿಗಳನ್ನು ಜಾರಿಗೆ ತರಲು ಅವರು ಯತ್ನಿಸುತ್ತಿದ್ದಾರೆ. ಅಲ್ಲದೆ, ನಿಷೇಧಿತ ಸಿಪಿಐ(ಮಾವೋವಾದಿ) ಘಟಕದ ಕಾರ್ಯದರ್ಶಿಯಾಗಿದ್ದ ಸಹೋದರ ಮಿಲಿಂದ್‌ ಜತೆ ತೇಲ್ತುಂಬ್ಡೆ ಸಂಪರ್ಕದಲ್ಲಿದ್ದರು" ಎಂದು ಎನ್‌ಐಎ ಆರೋಪಿಸಿತ್ತು. 

ಆನಂದ್‌ ತೇಲ್ತುಂಬ್ಡೆ ಅವರು, ತಮ್ಮ ಜಾಮೀನು ಅರ್ಜಿಯಲ್ಲಿ ಮಾವೋವಾದಿ ಸಿದ್ಧಾಂತವನ್ನು ಟೀಕಿಸಿದ್ದು, 25 ವರ್ಷಗಳಿಂದ ತನ್ನ ಸಹೋದರ ಮಿಲಿಂದ್‌ನನ್ನು ಸಂಪರ್ಕಿಸಿಲ್ಲ ಎಂದು ಉಲ್ಲೇಖಿಸಿದ್ದರು. 

"ತನ್ನ ವಿರುದ್ಧ ದೇಶದ್ರೋಹದ ಆರೋಪಗಳನ್ನು ಮಾಡಲು ಬಳಸಲಾದ ಸಾಕ್ಷಿಗಳ ಹೇಳಿಕೆಗಳು ಕೂಡ ಸುಳ್ಳು. ತಾನು ಎಲ್ಗಾರ್‌ ಪರಿಷತ್‌ ಸಮ್ಮೇಳನ ನಡೆಯುವ ದಿನದಂದು ಪುಣೆಗೆ ಭೇಟಿ ನೀಡಿದ್ದೆ. ಆದರೆ, ಕಾರ್ಯಕ್ರಮ ಆರಂಭವಾಗುವ ಮುನ್ನವೇ ಹೊರಟು ಹೋದೆ" ಎಂದು ತೇಲ್ತುಂಬ್ಡೆ ಹೇಳಿದ್ದಾರೆ. 

ಅಲ್ಲದೆ, "ಸಹ ಆರೋಪಿ ರೋನಾ ವಿಲ್ಸನ್‌ ಲ್ಯಾಪ್‌ಟಾಪ್‌ನಿಂದ ವಶಪಡಿಸಿಕೊಳ್ಳಲಾಗಿರುವ ಪತ್ರದಲ್ಲಿ, "2018ರ ಏಪ್ರಿಲ್‌ 9 ಮತ್ತು 10ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಮಾನವ ಹಕ್ಕುಗಳ ಸಮಾವೇಶದಲ್ಲಿ ತೇಲ್ತುಂಬ್ಡೆ ಭಾಗವಹಿಸಲಿದ್ದಾರೆ. ಅಲ್ಲಿ ಅವರು ʼದೇಶೀಯ ಅವ್ಯವಸ್ಥೆ; ದಲಿತರ ಸಮಸ್ಯೆʼಗಳ ಕುರಿತು ಉಪನ್ಯಾಸ ಮಾಡಲಿದ್ದಾರೆ" ಎಂದು ಉಲ್ಲೇಖಿಸಲಾಗಿತ್ತು.

"ದಲಿತ ಸಮಸ್ಯೆಗಳಿಗೆ ಸಂಬಂಧಿಸಿದ ದೇಶೀಯ ಅವ್ಯವಸ್ಥೆ ಎಂದರೆ ಅದು ಭೀಮಾ-ಕೋರೆಗಾಂವ್‌ ಘಟನೆ. ತಮ್ಮ ಸಹಚರರಿಗೆ ಉಪದೇಶ ನೀಡಲು ಈ ಘಟನೆಯನ್ನು ಬಳಸಿಕೊಳ್ಳಲು ಆರೋಪಿ ಮುಂದಾಗಿದ್ದ" ಎಂದು ಎನ್‌ಐಎ ಆರೋಪಿಸಿತ್ತು.

"ವಿಲ್ಸನ್‌ ಅವರ ಲ್ಯಾಪ್‌ಟಾಪ್‌ನಿಂದ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಅವರು ಆ ಪತ್ರವನ್ನೂ ಸ್ವೀಕರಿಸಿದ್ದಾರೆ ಅಥವಾ ಆ ಪತ್ರದಲ್ಲಿರುವ ಆದೇಶದ ಪ್ರಕಾರ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ" ಎಂದು ತೇಲ್ತುಂಬ್ಡೆ ಅವರು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಭಾರತ್ ಜೋಡೋ | ಬಾಲಾಪುರದಿಂದ ಯಾತ್ರೆ ಆರಂಭ; ಯಾತ್ರೆಯಲ್ಲಿ ಜೊತೆಗೂಡಿದ ಮಹಾತ್ಮಾ ಗಾಂಧಿ ಮರಿಮೊಮ್ಮಗ

ತೇಲ್ತುಂಬ್ಡೆ ಅವರ ವಿರುದ್ಧ ಐಪಿಸಿಯ ಸೆಕ್ಷನ್‌ಗಳಾದ 121, 121ಎ, 124ಎ, 153ಎ, 505(1)(ಬಿ), 117, 120ಬಿ ಆರ್/ಡಬ್ಲ್ಯೂ 34  ಹಾಗೂ 13,16,17,18,18-ಬಿ,20,38,39 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ವಕೀಲರು, ಉಪನ್ಯಾಸಕರು, ಸಾಮಾಜಿಕ ಕಾರ್ಯಕರ್ತರು ಸೇರಿ ಒಟ್ಟು 16 ಮಂದಿಯನ್ನು ಎನ್‌ಐಎ ಆರೋಪಿಗಳನ್ನಾಗಿಸಿದೆ. ಈ ಪೈಕಿ ಫಾದರ್‌ ಸ್ಟಾನ್‌ ಸ್ವಾಮಿ ಅವರು ಇತ್ತೀಚೆಗೆ ಮೃತಪಟ್ಟಿದ್ದಾರೆ.

ತೇಲ್ತುಂಬ್ಡೆ ಪರ ಹಿರಿಯ ವಕೀಲ ಮಿಹಿರ್‌ ದೇಸಾಯಿ ಮತ್ತು ವಕೀಲ ದೇವಯಾನಿ ಕುಲಕರ್ಣಿ ಪ್ರತಿನಿಧಿಸಿದ್ದು. ಎನ್‌ಐಎ ಪರ ಎಸ್‌ಪಿಪಿ ಸಂದೇಶ್‌ ಪಾಟೀಲ್‌ ಪ್ರತಿನಿಧಿಸಿದ್ದರು. 

ನಿಮಗೆ ಏನು ಅನ್ನಿಸ್ತು?
3 ವೋಟ್
eedina app