ಲಂಚ ಪ್ರಕರಣ| ಜಿಲ್ಲಾಧಿಕಾರಿ ಮಂಜುನಾಥ್‌ ಜಾಮೀನು ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Karanataka High Court
  • ಮಂಜುನಾಥ್‌ ಯಾವುದೇ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ: ಪರ ವಕೀಲರ ವಾದ
  • ಹೆಚ್ಚುವರಿ ಎಫ್‌ ಐಆರ್‌ ವಿಷಯದಲ್ಲಿ ತರಾಟೆಗೆ ತೆಗೆದುಕೊಂಡು ಪೀಠ

ಲಂಚ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರ ಜಾಮೀನು ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಕಾಯ್ದಿರಿಸಿದೆ. ಇನ್ನೆರಡು ದಿನಗಳಲ್ಲಿ ತೀರ್ಪು ಪ್ರಕಟಿಸುವುದಾಗಿಯೂ ಹೇಳಿದೆ.

ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ.

Eedina App

ಅರ್ಜಿದಾರ ಮಂಜುನಾಥ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಚಂದ್ರಮೌಳಿ ಅವರು “ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರು ಯಾವುದೇ ತೆರನಾದ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ. ಜಿಲ್ಲಾಧಿಕಾರಿಯು ಜಿಲ್ಲಾ ದಂಡಾಧಿಕಾರಿಯೂ ಆಗಿದ್ದು, ಭೂ ವಿವಾದಕ್ಕೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಅವರ ಮುಂದಿರುತ್ತವೆ. ಇವುಗಳ ಕುರಿತು ಕ್ರಮವಾಗಿ ಆದೇಶ ಮಾಡಲಾಗುತ್ತದೆ. ದೂರುದಾರ ಅಜಂ ಪಾಷಾ ಅವರ ಪ್ರಕರಣ ಹೀಗಾಗಿ ತಡವಾಗಿದೆ” ಎಂದರು.

ಆಗ ಪೀಠವು, ಭ್ರಷ್ಟಾಚಾರ ನಿಗ್ರಹ ದಳ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಎನ್‌ ಮನಮೋಹನ್‌ ಅವರನ್ನು ಕುರಿತು “ಮಂಜುನಾಥ್‌ ಅವರನ್ನು ಬಂಧಿಸುವುದಕ್ಕೆ ಇರುವ ಆಧಾರವೇನು? ಮಂಜುನಾಥ್‌ ಮತ್ತು ಮೊದಲ ಆರೋಪಿಯಾದ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಹಾಗೂ ಎರಡನೇ ಆರೋಪಿ ಚಂದ್ರುವಿನ ಜೊತೆಗೆ ಅವರ ಸಂಬಂಧವೇನು? ಎಂದು ಪ್ರಶ್ನಿಸಿತು.

AV Eye Hospital ad

ಇದಕ್ಕೆ ಪ್ರತಕ್ರಿಯಿಸಿದ ಮನಮೋಹನ್‌ ಅವರು “ಮೊದಲನೇ ಆರೋಪಿ ಮಹೇಶ್‌ ಅವರಿಗೆ ಜಾಮೀನು ಸಿಕ್ಕಿದೆ. ಮಂಜುನಾಥ್‌ ಅವರ ಜಾಮೀನು ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲಾಗಿದ್ದು, ಮಂಜುನಾಥ್‌ ಅವರು ಇತರೆ ಆರೋಪಿಗಳ ಜೊತೆ ಮೇ 18ರಂದು ಸಮಾಲೋಚನೆ ನಡೆಸಿರುವ ಆಡಿಯೊ ಕ್ಲಿಪ್‌ ಇದೆ. ಈ ಕುರಿತ ತನಿಖೆ ಪ್ರಗತಿಯಲ್ಲಿದೆ” ಎಂದರು.

ಆಗ ಪೀಠವು “ಎರಡನೇ ಆರೋಪಿ ಚಂದ್ರುವನ್ನು ಯಾಕಾಗಿ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಎಂದು ನೇಮಕ ಮಾಡಲಾಗಿತ್ತು? ಹಣ ಸ್ವೀಕರಿಸಲೇ? ಮೊದಲನೇ ಆರೋಪಿ ಏತಕ್ಕಾಗಿ ಜಿಲ್ಲಾಧಿಕಾರಿ ಕೊಠಡಿಗೆ ಹೋಗಿದ್ದರು? ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದೀರಿ. ಮೊದಲನೇ ಆರೋಪಿಗೆ ಜಾಮೀನು ಸಿಕ್ಕಿದ್ದು, ಮಂಜುನಾಥ್‌ ಅವರ ಜಾಮೀನು ಅರ್ಜಿಗೂ ಯಾವುದೇ ಆಕ್ಷೇಪಣೆ ಇಲ್ಲ ಎನ್ನುತ್ತೀರಾ?” ಎಂದು ಎಸಿಬಿ ವಕೀಲರನ್ನು ಮಾರ್ಮಿಕವಾಗಿ ಪ್ರಶ್ನಿಸಿತು.

ಮುಂದುವರಿದು, “ಭೂ ವಿವಾದಕ್ಕೆ ಸಂಬಂಧಿಸಿದ ಕಡತವನ್ನು ಸಿದ್ಧಪಡಿಸಿ ಬಹುದಿನಗಳಿಂದ ಇಟ್ಟುಕೊಂಡು ಹಣಕ್ಕಾಗಿ ಕಾಯುತ್ತಿದ್ದರು ಎಂದು ಊಹಿಸಲು ಪ್ರಾಸಿಕ್ಯೂಷನ್ಸ್‌ಗೆ ಅವಕಾಶವಿದೆ. ಅಲ್ಲಿ ಹಣ ಬಂದಿದೆಯೇ ಎಂಬುದನ್ನು ನೋಡಿಕೊಂಡು ಆದೇಶ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು” ಎಂದು ಪೀಠ ಹೇಳಿತು.‌

ಈ ಸುದ್ದಿ ಓದಿದ್ದೀರಾ?: ಸ್ಮೃತಿ ಇರಾನಿ, ಅವರ ಪುತ್ರಿ ಗೋವಾ ರೆಸ್ಟೋರೆಂಟ್‌ ಮಾಲೀಕರಲ್ಲ: ದೆಹಲಿ ಹೈಕೋರ್ಟ್

“ತನಿಖೆ ನಡೆದಾಗ ಎಲ್ಲವೂ ತಿಳಿಯುತ್ತದೆ. ಇದಕ್ಕಾಗಿಯೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತನಿಖಾ ವರದಿಯನ್ನು ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ತಕ್ಷಣ ತನ್ನಿ ಎಂದರೆ ಅಧಿಕಾರಿಗಳು ಎಲ್ಲಿಂದ ತರಬೇಕು” ಎಂದು ಪೀಠವು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿತು.

ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಚಂದ್ರಮೌಳಿ ಅವರು “ಪೀಠ ಸರಿಯಾಗಿ ಹೇಳಿದೆ. ಕಾನೂನು ಪ್ರಕ್ರಿಯೆ ಪಾಲಿಸಬೇಕಾಗುತ್ತದೆ” ಎಂದರು. ಇದಕ್ಕೆ ನ್ಯಾಯಾಲಯವು “ನಾನು ಯಾವಾಗಲೂ ತಪ್ಪು ಹೇಳಿಲ್ಲ. ನ್ಯಾಯಾಲಯವನ್ನು ಹೊಗಳುವುದು ಬೇಡ. ಹೊಗಳಿಕೆ ನನಗೆ ಇಷ್ಟವಾಗುವುದಿಲ್ಲ. ಹೊಗಳುವುದೇನಾದರೂ ಇದ್ದರೆ ಹೊರಗೆ ಹೋಗಿ. ಎದುರಿಗೆ ಹೊಗಳುವವರನ್ನು ನಾನು ನಂಬುವುದಿಲ್ಲ. ಒಳ್ಳೆಯ ಕೆಲಸ ಮಾಡಿರುವುದು ಕಂಡರೆ ಹೊರಗೆ ಹೋಗಿ ಹೊಗಳಬಹುದು” ಎಂದರು.

ಅಂತಿಮವಾಗಿ ಚಂದ್ರಮೌಳಿ ಅವರು “ಉಪ ತಹಶೀಲ್ದಾರ್‌ ಮಹೇಶ್‌ ಮತ್ತು ಎರಡನೇ ಆರೋಪಿ ಚಂದ್ರು ಅವರಿಗೂ, ಮಂಜುನಾಥ್‌ ಅವರಿಗೂ ಯಾವುದೇ ಸಂಬಂಧವಿಲ್ಲ” ಎಂದರು. ಆಗ ಪೀಠವು “ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಪ್ತ ಸಹಾಯಕ ಎಂಬ ಹುದ್ದೆ ಇರುವುದಿಲ್ಲ. ಆದರೆ, ಅವರನ್ನು ನಿಯೋಜನೆ ಮಾಡಲಾಗಿರುತ್ತದೆ” ಎಂದು ಹೇಳಿ, ಪ್ರಕರಣದ ಕುರಿತ ತೀರ್ಪು ಕಾಯ್ದಿರಿಸಲಾಗಿದೆ ಎಂದಿತು.

ನ್ಯಾಯಾಲಯವನ್ನು ದಾರಿ ತಪ್ಪಿಸಬೇಡಿ

ಎಸಿಬಿಯನ್ನು ನ್ಯಾ. ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಪೀಠ ಪ್ರಶ್ನಿಸಿದ ಬಳಿಕ ಮಂಜುನಾಥ್‌ ಅವರ ವಿರುದ್ಧ ಹೆಚ್ಚುವರಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಹಿರಿಯ ವಕೀಲ ಚಂದ್ರಮೌಳಿ ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಪೀಠವು “ಮಂಜುನಾಥ್‌ ಅವರ ವಿರುದ್ಧ ತನಿಖೆ ನಡೆಸಲು ಎಸಿಬಿಯು ವಿಶೇಷ ನ್ಯಾಯಾಲಯದಲ್ಲಿ ಅನುಮತಿ ಕೋರಿತ್ತು. ಇದು ಹೆಚ್ಚುವರಿ ಎಫ್‌ಐಆರ್‌ ಅಲ್ಲ, ಎರಡನೇ ಎಫ್‌ಐಆರ್‌ ಸಹ ಅಲ್ಲ. ನೀವು ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದವರು. ಯಾವುದು ಹೆಚ್ಚುವರಿ ಎಫ್‌ಐಆರ್‌ ಎಂಬುದು ನಿಮಗೆ ಗೊತ್ತಿದೆ. ನೀವು ನಮಗೆ ಕತೆ ಹೇಳುತ್ತೀರಾ? ನ್ಯಾಯಾಲಯವನ್ನು ದಾರಿ ತಪ್ಪಿಸಬೇಡಿ. ಹೆಚ್ಚುವರಿ ಮಾಹಿತಿ ಸಿಕ್ಕಿದ್ದರಿಂದ ಮಂಜುನಾಥ್‌ ಅವರ ತನಿಖೆಗೆ ತನಿಖಾಧಿಕಾರಿಯು ಅನುಮತಿ ಕೋರಿದ್ದಾರೆ. ಎರಡನೇ ಎಫ್‌ಐಆರ್‌ ಎಲ್ಲಿಂದ ಬಂತು?” ಎಂದು ತರಾಟೆಗೆ ತೆಗೆದುಕೊಂಡಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app