ಭ್ರೂಣವನ್ನು ಅಪ್ರಾಪ್ತ ಮಗುವೆಂದು ಪರಿಗಣಿಸಿ ಮರು ಪೌರತ್ವಕ್ಕೆ ಆದೇಶಿಸಿದ ಮದ್ರಾಸ್ ಹೈಕೋರ್ಟ್

MADRAS HIGHCOURT
  • ಪೌರತ್ವ ಕಾಯ್ದೆ ಸೆಕ್ಷನ್ 8 (2) ಪ್ರಕಾರ ಮರು ಪೌರತ್ವಕ್ಕೆ ಅಸ್ತು
  • ಭಾರತೀಯ ಮೂಲದ ಸಿಂಗಾಪುರ್ ನಾಗರಿಕನ ಅರ್ಜಿ ಪರಿಶೀಲಿಸಿದ ನ್ಯಾಯಾಲಯ 

ವಿಶೇಷ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್, ಭಾರತದ ಮರು ಪೌರತ್ವವನ್ನು ನೀಡುವುದಕ್ಕಾಗಿ ತಾಯಿಯ ಗರ್ಭದಲ್ಲಿದ್ದ ಭ್ರೂಣವನ್ನೇ ಅಪ್ರಾಪ್ತ ಮಗುವೆಂದು ಪರಿಗಣಿಸಿದೆ. ಈ ಮೂಲಕ ಸಿಂಗಾಪುರದಲ್ಲಿ ನೆಲೆಸಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮಗ ಮರು ಪೌರತ್ವ ಪಡೆಯಲು ಅರ್ಹನೆಂದು ತೀರ್ಪು ನೀಡಿದೆ.

ಪೌರತ್ವ ಕಾಯ್ದೆ (ಸಿಎ) ಸೆಕ್ಷನ್ 8(2) ರ ಪ್ರಕಾರ ಭಾರತದ ಪೌರತ್ವ ತೊರೆದ ವ್ಯಕ್ತಿಯ ಅಪ್ರಾಪ್ತ ಮಗು ಸಹ ಪೌರತ್ವ ಕಳೆದುಕೊಳ್ಳುತ್ತದೆ. ಆದರೆ ಆ ಮಗು 18 ವರ್ಷ ತುಂಬಿದ ಬಳಿಕ ವರ್ಷದೊಳಗೆ ಪುನಃ ಪೌರತ್ವ ಪಡೆಯಲು ಅರ್ಹವೆಂದು ಹೇಳಲಾಗಿದೆ.

ಭಾರತೀಯ ಮೂಲದ ಸಿಂಗಾಪುರ್ ನಾಗರಿಕ 22 ವರ್ಷದ ಪ್ರಣವ್ ಶ್ರೀನಿವಾಸನ್, ಭಾರತದ ಪೌರತ್ವವನ್ನು ಮರು ಪಡೆಯಲು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. 

ಭಾರತ ತೊರೆದು ಸಿಂಗಾಪುರ್ ತೆರಳಿದ ಪ್ರಣವ್ ಶ್ರೀನಿವಾಸನ್ ಪಾಲಕರು 1998ರ ಡಿಸೆಂಬರ್ 19ರಲ್ಲಿ ಸಿಂಗಾಪುರದ ಪೌರತ್ವ ಪಡೆದಿದ್ದಾರೆ. ದಾಖಲೆ ಪ್ರಕಾರ ಆಗ ಇವರು ಏಳುವರೆ ತಿಂಗಳ ಭ್ರೂಣ. 

ಈ ಸುದ್ದಿ ಓದಿದ್ದೀರಾ:? ಜ್ಞಾನವಾಪಿ ಮಸೀದಿ ಪ್ರಕರಣ | ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ 

2017ರ ಮಾರ್ಚ್ 1ಕ್ಕೆ ಅರ್ಹ ವಯಸ್ಸಿಗೆ ಬಂದ ಪ್ರಣವ್, ತಮ್ಮ ಭಾರತೀಯ ಪೌರತ್ವ ಪುನರಾರಂಭಿಸಲು 2017ರ ಮೇ 5ರಂದು ಸಿಂಗಾಪುರದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇವರ ಅರ್ಜಿಯನ್ನು 2019ರ ಏಪ್ರಿಲ್ 30ರಲ್ಲಿ ಗೃಹ ಸಚಿವಾಲಯ ತಿರಸ್ಕರಿಸಿತ್ತು. ನಂತರ ಪ್ರಣವ್ ಅವರು ಪೌರತ್ವ ಕಾಯ್ದೆಯ ಸೆಕ್ಷನ್ 5 (1) (ಎಫ್)/(ಜಿ)ನಡಿ ಪೌರತ್ವ ಬಯಸಿ ಅರ್ಜಿ ಸಲ್ಲಿಸಿದ್ದರು. 

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಅನಿತಾ ಸುಮಂತ್ ಕೇಂದ್ರ ಗೃಹ ಸಚಿವಾಲಯದ ಆದೇಶ ರದ್ದುಗೊಳಿಸಿ, “ನಿರ್ದಿಷ್ಟ ದಿನಾಂಕ 19.12.1998ಕ್ಕೆ  ಏಳುವರೆ ತಿಂಗಳಾದ ಭ್ರೂಣವೊಂದು ಖಂಡಿತವಾಗಿಯೂ ಮಗುವಿನ ಸ್ಥಿತಿ ಪಡೆದುಕೊಂಡಿರುತ್ತದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೇ, ಈ ಮಾನದಂಡದೊಂದಿಗೆ ಆ ಮಗು (ಭ್ರೂಣ) ಹೆತ್ತವರ ಪೌರತ್ವ ಅಂದರೆ ಭಾರತೀಯ ಪೌರತ್ವ ಪಡೆಯುತ್ತದೆ. ಮೇಲೆ ಹೇಳಿದ ದಿನಾಂಕದಂದು ತ್ಯಜಿಸಿದ ಪೌರತ್ವವನ್ನು ಪುನರಾರಂಭಿಸಲು ಸೆಕ್ಷನ್ 8 (2) ರ ಅಡಿ ಲಭ್ಯವಿರುವ ಅರ್ಹತೆಯನ್ನು ಇವರಿಗೆ ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ವಿವರಿಸಿದ್ದಾರೆ. 

ಭ್ರೂಣವನ್ನು ಅಪ್ರಾಪ್ತ ಮಗುವೆಂದು ಪರಿಗಣಿಸುವುದರೊಂದಿಗೆ, ಜನನ ಪೂರ್ವ ಮತ್ತು ಜನನ ನಂತರದ ವಿಚಾರ ನಗಣ್ಯವೆಂದು ಪರಿಗಣಿಸುವ ಭಾರತೀಯ ಮತ್ತು ಸಾಗರೋತ್ತರ ನ್ಯಾಯಾಲಯಗಳು ಮತ್ತು ಯುಎನ್ ಕನ್ವೆನ್ಷನ್‌ನ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. 

ವಿಶೇಷವಾಗಿ ಸೆಕ್ಷನ್ 8 (2) ರ ನಿಬಂಧನೆಗಳು ಅದರ ತಾಯಿಯ ಗರ್ಭವನ್ನು ಅಪ್ರಾಪ್ತ ಮಗುವೆಂದು ನಿರ್ದಿಷ್ಟವಾಗಿ ಪರಿಗಣಿಸಬೇಕು. ಅರ್ಜಿದಾರರು ತಮ್ಮ ಪೌರತ್ವ ಪುನರಾರಂಭಿಸಲು ಅರ್ಹರಾಗಿದ್ದಾರೆ. ಆದೇಶ ಹೊರಡಿಸಿದ ದಿನಾಂಕದಿಂದ ನಾಲ್ಕು ವಾರಗಳಲ್ಲಿ ಪೌರತ್ವದ ದಾಖಲೆ ನೀಡಬೇಕೆಂದು ನ್ಯಾಯಮೂರ್ತಿ ಅನಿತಾ ಸುಮಂತ್ ನಿರ್ದೇಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್