ವೃತ್ತಿಪರ ಕೋರ್ಸ್‌ಗಳಿಗೆ 75:25 ಅನುಪಾತ ಅನುಸರಿಸಲು ಸಾಧ್ಯವೇ : ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

kea
  • 2020-21ರಲ್ಲಿ ಪಿಯು ವಿದ್ಯಾರ್ಥಿಗಳು ಪಡೆದ ಅಂಕಗಳ ಪರಿಗಣನೆಗೆ ನಕಾರ
  • ಎರಡೂ ಕಡೆಯವರ ನಡುವೆ ಸಮತೋಲನ ಸಾಧಿಸಲು ಈ ನಿರ್ಧಾರ

"2020-21ನೇ ಸಾಲಿನಲ್ಲಿ ಪರೀಕ್ಷೆ ಬರೆಯದೆ, ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿರುವ 75 ಅಂಕ ಮತ್ತು ಪಿಯು ಪರೀಕ್ಷೆಯ್ಲಲಿ ಪಡೆದಿರುವ 25ರಷ್ಟು ಅಂಕಗಳನ್ನು  ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲು ಸಾಧ್ಯವೇ" ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನಿಸಿದೆ. 

2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕ್ರಮ ಪ್ರಶ್ನಿಸಿ ಏಳು ಮಂದಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಅರ್ಜಿದಾರರು ಪಿಯುಸಿಯಲ್ಲಿ ಪಡೆದಿರುವ ಶೇಕಡಾ 50 ಅಂಕಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ 2021ನೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವುದರಿಂದ ಸರ್ಕಾರವು ಅವರ ಮನವಿ ಪರಿಗಣಿಸುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ಇದು 75:25 ಅನುಪಾತದಲ್ಲಿ ಸಾಧ್ಯವೇ?” ಎಂದು ಪೀಠ ಸರ್ಕಾರವನ್ನು ಪ್ರಶ್ನಿಸಿದೆ.

“ಪ್ರಸಕ್ತ ವರ್ಷದಲ್ಲಿ ಪಿಯುಸಿ ಪರೀಕ್ಷೆ ಬರೆದು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸಮನಾಗಿ ಹಿಂದಿನ ವರ್ಷ ಯಾವುದೇ ಪರೀಕ್ಷೆ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಸಮಾನವಾಗಿ ಇಡುವುದು ನ್ಯಾಯಸಮ್ಮತವಲ್ಲ ಎಂದು ಸರ್ಕಾರ ಹೇಳುತ್ತಿದೆ. ಅರ್ಜಿದಾರರು 25 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ, ಎರಡೂ ಕಡೆಯವರ ನಡುವೆ ಸಮತೋಲನ ಸಾಧಿಸಲು ಶೇ. 75:25ರ ಅನುಪಾತದಲ್ಲಿ ಅಂಕಗಳನ್ನು ಪರಿಗಣಿಸಲು ಸಾಧ್ಯವೇ" ಎಂದು ಪೀಠ ಪ್ರಶ್ನಿಸಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರನ್ನು ಕುರಿತು ಪೀಠವು “ಇದೊಂದು ಬಾರಿಗೆ ಶೇ.75:25 ಅನುಪಾತ ಮಾಡಿ. ಹಲವರ ದೃಷ್ಟಿಯಿಂದ ಇದು ನ್ಯಾಯ ಸಮ್ಮತವಲ್ಲ ಎಂಬುದು ಸತ್ಯ. ಆದರೆ, ಏನೂ ಮಾಡಲು ಸಾಧ್ಯವಿಲ್ಲ. ಅರ್ಜಿ ವಜಾ ಮಾಡಿದರೂ ಸಮಸ್ಯೆ ಆಗುತ್ತದೆ. ಸರ್ಕಾರವು ಶೇ.75:25 ಸೂತ್ರಕ್ಕೆ ಒಪ್ಪಿದರೆ ಇದೊಂದು ಮಾದರಿಯಾಗಲಿದ್ದು,  ಶೇ.90ರಷ್ಟು ಸಮಸ್ಯೆಗಳು ಬಗೆಹರಿಯುತ್ತವೆ” ಎಂದರು.

ಈ ಸುದ್ದಿ ಓದಿದ್ದೀರಾ? : ಬಿಹಾರ | ಪಾಟ್ನಾದ ನಡುಬೀದಿಯಲ್ಲಿ ಯುವತಿಗೆ ಗುಂಡೇಟು: ಪ್ರೇಮ ವೈಫಲ್ಯದ ಶಂಕೆ

 ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವುದಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್ ಚಿನ್ನಪ್ಪ ನ್ಯಾಯಾಲಯಕ್ಕೆ ಹೇಳಿದರು. ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು ಪ್ರಕರಣ ಮುಂದೂಡಲು ಕೋರಿದರು. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಆಗಸ್ಟ್‌ 22ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿತು.

ನಿಮಗೆ ಏನು ಅನ್ನಿಸ್ತು?
0 ವೋಟ್