ಬಿಬಿಎಂಪಿ ಮೀಸಲಾತಿ ವಿವಾದ | ಸರ್ಕಾರ ಅಭಿಪ್ರಾಯ ನೀಡುವವರೆಗೂ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತಿಲ್ಲ‌: ಹೈಕೋರ್ಟ್

High Court
  • ಒಬಿಸಿಗೆ ಸೂಕ್ತ ಮೀಸಲಾತಿ ಕಲ್ಪಿಸಲು ಸರ್ಕಾರ ಸಿದ್ಧವಿದೆ
  • ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಚುನಾವಣೆ ನಡೆಯಬೇಕು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡ್‌ಗಳಿಗೆ ಈಗ ನಿಗದಿಪಡಿಸಲಾಗಿರುವ ವಾರ್ಡ್‌ ಮೀಸಲಾತಿಯನ್ನು ಮರುಪರಿಶೀಲಿಸಲು ಸಾಧ್ಯವೇ ಎಂಬುದರ ಕುರಿತು ತನ್ನ ಅಭಿಪ್ರಾಯ ತಿಳಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ‌

ಈಜಿಪುರದ ಕೆ ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು. 

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, "ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೂಕ್ತವಾದ ಮೀಸಲಾತಿ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎರಡು ತಿಂಗಳಲ್ಲಿ ʼಟ್ರಿಪಲ್ ಟೆಸ್ಟ್ʼ ಪ್ರಕಾರವೇ ಒಬಿಸಿಗೆ ವಾರ್ಡ್‌ವಾರು ಮೀಸಲು ಒದಗಿಸುತ್ತೇವೆ" ಎಂದು ವಾದಿಸಿದರು.

ಇದಕ್ಕೆ ಆಕ್ಷೇಪಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲರು, "ಬಿಬಿಎಂಪಿ ಅಧಿಕಾರಾವಧಿ ಮುಗಿದು ಎರಡು ವರ್ಷಗಳಾಗಿವೆ. ಸದ್ಯ ಬಿಬಿಎಂಪಿಯನ್ನು ಆಡಳಿತಾಧಿಕಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯದಂತೆ ಚುನಾವಣೆ ನಡೆಯಬೇಕು. ಒಬಿಸಿ ಮೀಸಲಾತಿ ಕಾರಣಕ್ಕೆ ಚುನಾವಣೆ ನಡೆಸುವುದು ವಿಳಂಬ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್ ಕೂಡಲೇ ಚುನಾವಣೆ ನಡೆಸಲು ಸೂಚನೆ ನೀಡಿದೆ. ಹಾಗಾಗಿ ಹಾಲಿ ನಿಗದಿ ಮಾಡಿರುವ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಅವಕಾಶ ನೀಡಬೇಕು" ಎಂದು ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರು ವಾದಿಸಿ, "ಒಬಿಸಿ ಮೀಸಲು ನಿಗದಿಗೆ ಸಮೀಕ್ಷೆ ನಡೆಸಿಲ್ಲ. ಆಯೋಗ ಸರ್ವೆ ನಡೆಸದೆ ಮೀಸಲು ನೀಡಿದೆ. ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಚುನಾವಣಾ ಆಯೋಗ ʼಟ್ರಿಪಲ್ ಟೆಸ್ಟ್ʼ ಮಾನದಂಡ ಅನುಸರಿಸಿಲ್ಲ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಹಾಗಾಗಿ, ಹೊಸದಾಗಿ ಒಬಿಸಿ ಸರ್ವೆ ನಡೆಸಲು ನಿರ್ದೇಶನ ನೀಡಬೇಕು" ಎಂದು ಕೋರಿದರು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ| ದಕ್ಷಿಣ ವಲಯದಲ್ಲಿ ರೇಬಿಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮ

"ಒಬಿಸಿ ಅಂಕಿಅಂಶಗಳನ್ನು ಒದಗಿಸಿ ಮೀಸಲು ನಿಗದಿಪಡಿಸಲು ಸಾಧ್ಯವೇ? ಹಾಗಾದರೆ ಇದಕ್ಕೆ ಎಷ್ಟು ಕಾಲಾವಕಾಶ ಬೇಕು? ಈ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿ" ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಸರ್ಕಾರ ಅಭಿಪ್ರಾಯ ನೀಡುವವರೆಗೂ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್‌ ತಾಕೀತು ಮಾಡಿದೆ. ಚುನಾವಣೆ ವಿಳಂಬವಾಗಬಾರದು ಮತ್ತು ಸುಪ್ರೀಂ ಕೋರ್ಟ್‌ನ ಆದೇಶದಂತೆ ನಡೆಯಬೇಕು. ಆದಷ್ಟೂ ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್‌ 30ಕ್ಕೆ ಮುಂದೂಡಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್