‌ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆ ನೀಡದಂತೆ ತಡೆಯಲು ಸಾಧ್ಯವಿಲ್ಲ | ಸುಪ್ರೀಂ ಕೋರ್ಟ್

  • ಕೆಲವು ಯೋಜನೆಗಳಿಂದ ಜನರು ಗೌರವಯುತ ಜೀವನ ನಡೆಸಬಹುದು
  • ಅಂಥ ಯೋಜನೆಗಳ ಲಾಭ ಪಡೆಯುವುದು ಜನರ ಹಕ್ಕು: ಸುಪ್ರೀಂ ಕೋರ್ಟ್

"ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆ ನೀಡುವುದನ್ನು ತಡೆಯಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಲ್ಲದೆ, "ಸಾರ್ವತ್ರಿಕ ಆರೋಗ್ಯ ಸೇವೆ, ಕುಡಿಯುವ ನೀರು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಡುವುದಾಗಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ʼಉಚಿತ ಕೊಡುಗೆಗಳುʼ ಎಂದು ಪರಿಗಣಿಸಬಹುದೇ ಎಂಬ ಚರ್ಚೆಯೂ ಅಗತ್ಯವಿದೆ" ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಉಚಿತ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದ ಪಕ್ಷಗಳ ಮಾನ್ಯತೆ ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠವು ನಡೆಸಿತು.

"ಈ ವೇಳೆ ಭರವಸೆ ಯಾವುದು, ಉಚಿತ ಕೊಡುಗೆಗಳು ಯಾವುವು ಎಂಬುದರ ಕುರಿತು ಚರ್ಚೆಯ ಅಗತ್ಯವಿದೆ. ಸಮರ್ಪಕವಾದ ಭರವಸೆಗಳು ಏನನ್ನು ಒಳಗೊಂಡಿರುತ್ತವೆ ಎಂಬ ಪ್ರಶ್ನೆಯೂ ಉದ್ಭವಿಸಿದೆ" ಎಂದು ನ್ಯಾಯಪೀಠ ಹೇಳಿತು. 

"ಕೆಲವು ಯೋಜನೆಗಳಿಂದ ಜನರು ಗೌರವಯುತ ಜೀವನ ನಡೆಸಬಹುದಾಗಿದೆ. ಅಂಥ ಯೋಜನೆಗಳ ಲಾಭ ಪಡೆಯುವುದು ಜನರ ಹಕ್ಕು. ನರೇಗಾದಂತಹ ಯೋಜನೆಗಳು ಜನರ ಜೀವನೋಪಾಯಕ್ಕೆ ಅನುಕೂಲವಾಗುತ್ತಿವೆ. ಹೀಗಾಗಿ, ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲಲು ಕೇವಲ ಉಚಿತ ಕೊಡುಗೆಗಳೇ ಕಾರಣ ಎಂದು ನನಗೆ ಅನಿಸುತ್ತಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮಹಿಳೆ ಪ್ರಚೋದನಕಾರಿ ಉಡುಗೆ ಧರಿಸಿದ್ದರಿಂದ ಲೈಂಗಿಕ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ: ಕೇರಳ ಕೋರ್ಟ್

"ಕೆಲವರು ಚುನಾವಣೆ ಸಮಯದಲ್ಲಿ  ಹೆಚ್ಚಿನ ಭರವಸೆಗಳನ್ನು ನೀಡಿಯೂ ಗೆಲ್ಲುವುದಿಲ್ಲ. ಈ ಹಿನ್ನೆಲೆಯಲ್ಲಿ, ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲಿ, ವಿಸ್ತೃತ ಚರ್ಚೆಯೂ ನಡೆಯಲಿ. ನಂತರವಷ್ಟೇ ನಾವು ಒಂದು ತೀರ್ಮಾನಕ್ಕೆ ಬರಲು ಸಾಧ್ಯ" ಎಂದು ಹೇಳಿರುವ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್‌ 22ಕ್ಕೆ ಮುಂದೂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್