ಆದಿವಾಸಿಗಳ ಅರಣ್ಯ ಹಕ್ಕು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ಹೊಸ ನಿಯಮ

  • ಮುಂಗಾರು ಅಧಿವೇಶನದಲ್ಲಿ ಅನುಮೋದನೆಗೆ ಮುಂದಾದ ಕೇಂದ್ರ ಸರ್ಕಾರ 
  • ಹೊಸ ಅರಣ್ಯ ನಿಯಮಗಳ ವಿರುದ್ಧ ಕಾಂಗ್ರೆಸ್ ವ್ಯಾಪಕ ಟೀಕೆ

‘2006ರ ಅರಣ್ಯ ಹಕ್ಕುಗಳ ಕಾಯ್ದೆ’ಯನ್ನು ದುರ್ಬಲಗೊಳಿಸಿ ಅರಣ್ಯ ಭೂಮಿಯನ್ನು ಆದಿವಾಸಿಗಳ ಪೂರ್ವಾನುಮತಿಯೂ ಇಲ್ಲದೆ ಯೋಜನೆಗಳಿಗಾಗಿ ಕಸಿದುಕೊಳ್ಳುವ ಮತ್ತು ಆದಿವಾಸಿಗಳನ್ನು ಸುಲಭವಾಗಿ ಒಕ್ಕಲೆಬ್ಬಿಸುವ ಹೊಸ ಅರಣ್ಯ ಸಂರಕ್ಷಣಾ ನಿಯಮಗಳು-2022 ಅನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಜುಲೈ 18 ರಿಂದ ಆರಂಭವಾಗುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಹೊಸ ಅರಣ್ಯ ಸಂರಕ್ಷಣಾ ನಿಯಮಗಳ ವಿಷಯ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

Eedina App

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜೂನ್ 28 ರಂದು 2003ರಲ್ಲಿ ಸೂಚಿಸಿದ್ದ ಹಿಂದಿನ ನಿಯಮಗಳನ್ನು ಬದಲಿಸಿ ‘ಹೊಸ ಅರಣ್ಯ ಸಂರಕ್ಷಣಾ ನಿಯಮಗಳು -2022‘ ಅನ್ನು ಸೂಚಿಸಿದೆ. ಮುಂಬರುವ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳ ಅನುಮೋದನೆಗಾಗಿ ಹೊಸ ಅರಣ್ಯ ಸಂರಕ್ಷಣಾ ನಿಯಮಗಳನ್ನು ಇರಿಸಲಾಗುತ್ತದೆ.

ಏನೇನು ಬದಲಾವಣೆ ಮಾಡಲಾಗಿದೆ?

AV Eye Hospital ad

ಪರಿಶಿಷ್ಟ ಪಂಗಡಗಳು ಮತ್ತು ಇತರ ಆದಿವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ -2006 ಅಥವಾ ಅರಣ್ಯ ಹಕ್ಕುಗಳ ಕಾಯಿದೆ - 2006 ಎಂದೇ ಕರೆಯುವ ಕಾಯ್ದೆಯು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು, ದಲಿತ ಮತ್ತು ಇತರ ಕುಟುಂಬಗಳಿಗೆ ವೈಯಕ್ತಿಕ ಮತ್ತು ಸಮುದಾಯಕ್ಕೆ ಭೂಮಿ ಮತ್ತು ಜೀವನೋಪಾಯದ ಹಕ್ಕುಗಳನ್ನು ನೀಡುತ್ತದೆ. ಕಾನೂನಿನ ಅಡಿಯಲ್ಲಿ, ಅರಣ್ಯೇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಅನುಮತಿ ನೀಡುವ ಮೊದಲು ಅರಣ್ಯ ಹಕ್ಕುಗಳ ಕಾಯ್ದೆಯ ಪಾಲನೆ ಕಡ್ಡಾಯವಾಗಿದೆ. 

ಮೂಲಸೌಕರ್ಯ ಯೋಜನೆಗಳಿಗೆ ಅರಣ್ಯ ಇಲಾಖೆ ಅನುಮತಿ ಪಡೆಯಲು ಕಡ್ಡಾಯವಾಗಿ ಅರಣ್ಯ ಹಕ್ಕು ಕಾಯ್ದೆಯನ್ನು ಅನುಸರಣೆ ಮಾಡಬೇಕಿದ್ದ ನಿಯಮವನ್ನು ಹೊಸ ಅರಣ್ಯ ಸಂರಕ್ಷಣೆ ನಿಯಮಗಳು -2022ರ ಪ್ರಕಾರ ಕೈಬಿಡಬಹುದಾಗಿದೆ. ಅರಣ್ಯ ಭೂಮಿಯನ್ನು ಯೋಜನೆಗಳಿಗೆ ಹಸ್ತಾಂತರಿಸುವ ಮೊದಲು ಅರಣ್ಯ ಹಕ್ಕು ಕಾಯ್ದೆಯನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ರಾಜ್ಯಗಳ ಮತ್ತು ಕೇಂದ್ರಾಡಳಿತಗಳ ಮೇಲೆ ಹೊರಿಸುತ್ತದೆ.

ಆದಿವಾಸಿಗಳ ಪೂರ್ವಾನುಮತಿ ಅಗತ್ಯವಿಲ್ಲ

2006ರ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಆದಿವಾಸಿಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಯೋಜನೆಗಳಿಗೆ ಅರಣ್ಯ ಭೂಮಿಯನ್ನು ನೀಡುವಂತಿರಲಿಲ್ಲ. ಹೊಸ ಅರಣ್ಯ ಸಂರಕ್ಷಣಾ ನಿಯಮಗಳ ಅನ್ವಯ ಆದಿವಾಸಿಗಳ ಪೂರ್ವಾನುಮತಿ ಪಡೆಯುವ ಮೊದಲೇ ಯೋಜನೆಗಾಗಿ ಅರಣ್ಯವನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬಹುದಾಗಿದೆ.

ಆದಿವಾಸಿಗಳಿಗೆ ಹಕ್ಕು ಕಿತ್ತುಕೊಳ್ಳಲಿದೆ 

ಹೊಸ ಅರಣ್ಯ ಸಂರಕ್ಷಣಾ ನಿಯಮಗಳು, ಅರಣ್ಯ ಹಕ್ಕು ಕಾಯ್ದೆ -2006 ಅನ್ನು ದುರ್ಬಲಗೊಳಿಸುತ್ತವೆ. ಹೊಸ ನಿಯಮಗಳು ಆದಿವಾಸಿಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಅವರನ್ನು ಸುಲಭವಾಗಿ ಬೇರೆಡೆಗೆ ಸ್ಥಳಾಂತರಿಸಬಹುದಾಗಿದೆ. ಹೊಸ ನಿಯಮಗಳಿಗೆ ಅನುಮೋದನೆ ದೊರೆತರೆ, ಅದು ಆದಿವಾಸಿಗಳ ಪುನರ್ವಸತಿ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ. ಅರಣ್ಯ ಭೂಮಿ ತೆರುವು ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರದ ಹೆಚ್ಚಿನ ಒತ್ತಡವನ್ನು ರಾಜ್ಯಗಳು ಎದುರಿಸಬೇಕಾಗುತ್ತದೆ.

ಕೇಂದ್ರದ ಸ್ಪಷ್ಟನೆ

ಹೊಸ ನಿಯಮಗಳು ಅರಣ್ಯ ಹಕ್ಕು ಕಾಯಿದೆ 2006ರ ನಿಬಂಧನೆಗಳನ್ನು ದುರ್ಬಲಗೊಳಿಸುವುದಿಲ್ಲ ಅಥವಾ ಉಲ್ಲಂಘಿಸುವುದಿಲ್ಲ. ಅನುಮೋದನೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹೊಸ ನಿಯಮಗಳನ್ನು ಘೋಷಿಸಲಾಗಿದೆ. ಯಾವುದೇ ಹಂತದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಸರಣೆಯನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಸುದ್ದಿ ಓದಿದ್ದೀರಾ? ಕಾಡಿನ ಮಕ್ಕಳು ವಿದ್ಯೆ ಕಲಿಯಲು ಹೊರಟಿವೆ, ಪೆನ್ನು ಪುಸ್ತಕ ಕೊಡಿಸುವಿರಾ..?

ಕಾಂಗ್ರೆಸ್ ಕಿಡಿ

ಅರಣ್ಯ ಸಂರಕ್ಷಣೆ ಕಾನೂನು ನಿಯಮಾವಳಿಗಳನ್ನು ಪರಿಷ್ಕರಿಸಿ ಹೊಸ ನಿಯಮಗಳನ್ನು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರದ ನಡೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮೋದಿ ಹಾಗೂ ಅವರ ಮಿತ್ರರ ಸರ್ಕಾರವು ಹೊಸ ಸಂಚು ಹೆಣೆದಿದೆ! ಅರಣ್ಯ ಭೂಮಿಯನ್ನು ಬುಡಕಟ್ಟು ಸಮುದಾಯಗಳಿಂದ ಕಸಿದುಕೊಳ್ಳಲು ಬಿಜೆಪಿ ಹುನ್ನಾರ ನಡೆಸಿದೆ. 2006ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕುಗಳ ಕಾಯಿದೆಯನ್ನು ದುರ್ಬಲಗೊಳಿಸುವಂಥ ಮಾರ್ಪಾಡುಗಳನ್ನು ಕೇಂದ್ರ ಸರ್ಕಾರವು ನೂತನ ನಿಯಮಗಳಲ್ಲಿ ಮಾಡಿದೆ. ಜಲ, ಅರಣ್ಯ, ಭೂಮಿಯ ಹಕ್ಕಿನ ಹೋರಾಟದಲ್ಲಿ ಆದಿವಾಸಿಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ” ಎಂದು ರಾಹುಲ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ''ಆದಿವಾಸಿಗಳು, ಬುಡಕಟ್ಟು ಸಮುದಾಯಗಳ ಹಕ್ಕುಗಳ ರಕ್ಷಣೆಗೆ 2006ರ ಕಾಯಿದೆಯಲ್ಲಿ ಆದ್ಯತೆ ನೀಡಲಾಗಿತ್ತು. ಅವರ ಒಪ್ಪಿಗೆ ಇಲ್ಲದೆಯೇ ಅರಣ್ಯ ಭೂಮಿಯನ್ನು ಪರಿವರ್ತಿಸಿ, ಅಭಿವೃದ್ಧಿ ಕಾರ್ಯ ಅಥವಾ ಉದ್ಯಮಸ್ನೇಹಿ ನೆಪವೊಡ್ಡಿ ಪರವಾನಗಿ ನೀಡಲು ಅವಕಾಶವಿರಲಿಲ್ಲ. ಇದನ್ನು ಕೇಂದ್ರ ಸರ್ಕಾರವು ತನ್ನ ಮಿತ್ರರ ಅನುಕೂಲಕ್ಕಾಗಿ ಬದಲಾಯಿಸಿದೆ” ಎಂದು ಆರೋಪಿಸಿದ್ದಾರೆ.

ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ಕೂಡ ಟ್ವಿಟರ್ ಮೂಲಕವೇ ಪ್ರತಿಕ್ರಿಯಿಸಿದ್ದು, “ಕಾಂಗ್ರೆಸ್ ಆರೋಪಗಳು ದುರುದ್ದೇಶಪೂರಿತವಾಗಿವೆ. ಶೀಘ್ರ ಪರವಾನಗಿಯ ಅನುಕೂಲಕ್ಕೆ ಪ್ರಕ್ರಿಯೆಗಳಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಆದಿವಾಸಿಗಳ ಹಕ್ಕು ರಕ್ಷಣೆಗೆ ನಾವು ಬದ್ಧ” ಎಂದಿದ್ದಾರೆ.

ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, “ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ಬುಡಕಟ್ಟು ಮಹಿಳೆ ಎಂಬ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ವ್ಯರ್ಥ ಪ್ರಯತ್ನ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ. 

ಈ ವಿಷಯ ಕುರಿತು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಪ್ರಕಟಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app