ಭತ್ತಕ್ಕೆ ರಾಜ್ಯಗಳು ಶಿಫಾರಸು ಮಾಡಿರುವುದಕ್ಕಿಂತ ಕಡಿಮೆ ಎಂಎಸ್‌ಪಿ ಘೋಷಿಸಿದ ಕೇಂದ್ರ ಸರ್ಕಾರ

  • ಕ್ವಿಂಟಾಲ್‌ಗೆ ₹2040 ಕನಿಷ್ಠ ಬೆಂಬಲ ಬೆಲೆ ಘೋಷಣೆ
  • ಕ್ವಿಂಟಾಲ್‌ಗೆ ₹4513 ಶಿಫಾರಸು ಮಾಡಿದ್ದ ತೆಲಂಗಾಣ

ಕೇಂದ್ರ ಸರ್ಕಾರಕ್ಕೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ₹2000 ದಿಂದ ₹4513 ನಡುವೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕೆಂದು ಶಿಫಾರಸು ಮಾಡಿದ್ದವು. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಾತ್ರವೇ ₹2000 ಎಂಎಸ್‌ಪಿ ಶಿಫಾರಸು ಮಾಡಿತ್ತು. ಉಳಿದ ರಾಜ್ಯಗಳು ಶಿಫಾರಸು ಮಾಡಿರುವುದಕ್ಕಿಂತ ಕಡಿಮೆ ಎಂಎಸ್‌ಪಿಯನ್ನು ಕೇಂದ್ರ ಸರ್ಕಾರ ಇದೀಗ ಘೋಷಿಸಿದೆ.

ಕೇಂದ್ರ ಸರ್ಕಾರವು ಜೂನ್ 8ರಂದು 2022-23ರ ಖಾರಿಫ್ ಮಾರುಕಟ್ಟೆಯಲ್ಲಿ ಸಾಮಾನ್ಯ ಭತ್ತದ ಮೇಲೆ ಪ್ರತಿ ಕ್ವಿಂಟಾಲ್‌ಗೆ ₹2040 ಮತ್ತು ಎ ಗ್ರೇಡ್‌ ಭತ್ತ ಪ್ರತಿ ಕ್ವಿಂಟಾಲ್‌ಗೆ ₹2060 ಕನಿಷ್ಠ ಬೆಂಬಲ ಬೆಲೆ ಘೋಷಿಸಿತ್ತು. 

ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ವರದಿ ಆಧರಿಸಿ ಸರ್ಕಾರವು ವಿವಿಧ ಬೆಳೆಗಳಿಗೆ ಎಂಎಸ್‌ಪಿ ಘೋಷಿಸುತ್ತದೆ. 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭತ್ತ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಪ್ರತಿ ಕ್ವಿಂಟಾಲ್‌ಗೆ ₹2000 ದಿಂದ ₹4513 ಘೋಷಿಸಲಾಗಿದೆ.

ಆಂಧ್ರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಛತ್ತಿಸ್‌ಗಢ, ಗುಜರಾತ್‌, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳಕ್ಕೆ ಕನಿಷ್ಠ ಬೆಂಬಲ ಬೆಲೆ ಶಿಫಾರಸ್ಸು ಮಾಡಲಾಗಿದೆ. ಇವುಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರ ಸರ್ಕಾರವು ಘೋಷಿಸಿದ್ದಕ್ಕಿಂತ ಕಡಿಮೆ ಎಂಎಸ್‌ಪಿ ಶಿಫಾರಸು ಮಾಡಿತ್ತು. ಆದರೆ ತೆಲಂಗಾಣ ಅತಿಹೆಚ್ಚು ಪ್ರತಿ ಕ್ವಿಂಟಾಲ್‌ಗೆ ₹4513 ಶಿಫಾರಸು ಮಾಡಿತ್ತು.

ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು 2022- 23ರ ಭತ್ತದ ಎಂಎಸ್‌ಪಿ ಬೆಲೆಯನ್ನು ಶಿಫಾರಸು ಮಾಡಿರಲಿಲ್ಲ.

ಈ ಸುದ್ದಿ ಓದಿದ್ದೀರಾ ? ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಎಲ್ಲ ಆಹಾರ ಧಾನ್ಯಗಳ ಪೈಕಿ ಖಾರಿಫ್‌ ಋತುವಿನ ಭತ್ತ ಮೂರನೆಯ ಒಂದು ಭಾಗದಷ್ಟು ಬೆಳೆಯಲಾಗುತ್ತದೆ. ದೇಶದ ಆಹಾರ ಧಾನ್ಯದ ಬುಟ್ಟಿಗೆ ಇದು ಸುಮಾರು ಶೇ. 40ರಷ್ಟು ಕೊಡುಗೆ ನೀಡುತ್ತದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಬಿಹಾರ ಮತ್ತು ಅಸ್ಸಾಂ ಪ್ರಮುಖ ಭತ್ತ ಬೆಳೆಯುವ ರಾಜ್ಯಗಳಾಗಿವೆ. 

ಕೃಷಿ ಸಚಿವಾಲಯದ ಪ್ರಕಾರ, ಸುಮಾರು 126.22 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ 278.79 ದಶಲಕ್ಷ ಟನ್ ಪ್ರದೇಶದಲ್ಲಿ ಬೆಳೆದ ಬೆಳೆಯಲ್ಲಿ 43.82 ದಶಲಕ್ಷ ಹೆಕ್ಟೇರ್‌ನಲ್ಲಿ 112.44 ದಶಲಕ್ಷ ಟನ್ ಭತ್ತ (ಖಾರಿಫ್ ಮತ್ತು ರಬಿ ಸೇರಿದಂತೆ) ಬೆಳೆಯಲಾಗಿದೆ. "2022 ಮೇ 29ರವರೆಗೆ 810.05 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಭತ್ತವನ್ನು ಸಂಗ್ರಹಿಸಲಾಗಿದೆ. ಒಟ್ಟು 1.17 ಕೋಟಿ ರೈತರು ₹1,58,770.64 ಕೋಟಿ ಎಂಎಸ್‌ಪಿ ಪಡೆದಿದ್ದಾರೆ" ಎಂದು ಮೇ 30ರಂದು ಕೇಂದ್ರ ಆಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಜೂನ್ 8 ರಂದು ಭತ್ತ ಸೇರಿದಂತೆ ಎಲ್ಲಾ ಖಾರಿಫ್ ಬೆಳೆಗಳಿಗೆ ಕೇಂದ್ರವು ಎಂಎಸ್‌ಪಿ ಘೋಷಿಸಿದೆ. 2021-22ರಲ್ಲಿ ಪ್ರತಿ ಕ್ವಿಂಟಾಲ್‌ಗೆ ₹1,940 ಇದ್ದ ಭತ್ತದ ಎಂಎಸ್‌ಪಿಯನ್ನು ಈ ವರ್ಷ ಶೇ. 5.15 ರಷ್ಟು ಹೆಚ್ಚಿಸಲಾಗಿದೆ. ವಾಸ್ತವದಲ್ಲಿ 2018-19ರಿಂದ ಕ್ವಿಂಟಾಲ್‌ಗೆ ₹100 ಏರಿಕೆಯಾಗಿದೆ. ಗ್ರೇಡ್ ಎ ಭತ್ತದ ಎಂಎಸ್‌ಪಿ 2021-22ರಲ್ಲಿ ಪ್ರತಿ ಕ್ವಿಂಟಾಲ್‌ಗೆ ₹1,960 ಇದ್ದು, 2022-23ರಲ್ಲಿ ಶೇ. 5.1 ರಷ್ಟು ಹೆಚ್ಚಾಗಿದೆ.

ಬಹುತೇಕ ರಾಜ್ಯಗಳು ಭತ್ತದಂತೆಯೇ ಇತರ ಖಾರಿಫ್ ಬೆಳೆಗಳಿಗೂ ಹೆಚ್ಚಿನ ಎಂಎಸ್‌ಪಿ ಶಿಫಾರಸು ಮಾಡಿವೆ. ಉದಾಹರಣೆಗೆ, ಆಂಧ್ರಪ್ರದೇಶ (ಕ್ವಿಂಟಾಲ್‌ಗೆ ₹3,334), ಗುಜರಾತ್ (₹5,000), ಕರ್ನಾಟಕ (₹5,651), ಮಹಾರಾಷ್ಟ್ರ (₹4,331) ಹಾಗೂ ತೆಲಂಗಾಣ (₹7,712) ರಾಜ್ಯಗಳು ಕೇಂದ್ರ ಸರ್ಕಾರ ಜೋಳಕ್ಕೆ ನೀಡಿರುವ ಎಂಎಸ್‌ಪಿ ದರಕ್ಕಿಂತ ಹೆಚ್ಚು ಶಿಫಾರಸು ಮಾಡಿದ್ದವು. 

ನಿಮಗೆ ಏನು ಅನ್ನಿಸ್ತು?
0 ವೋಟ್