ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

  • 14 ಮುಂಗಾರು ಬೆಳೆಗಳ ಎಂಎಸ್‌ಪಿ ದರ ಹೆಚ್ಚಳ
  • ಬಿತ್ತನೆಗೂ ಮೊದಲೇ ಎಂಎಸ್‌ಪಿ ದರ ನಿಗದಿ 

ಮುಂಗಾರು ಬೆಳೆಗಳಿಗೆ(ಖಾರಿಫ್ ಕ್ರಾಪ್‌) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದರವನ್ನು  ಕೇಂದ್ರ ಸರ್ಕಾರವು ಬುಧವಾರ ಹೆಚ್ಚಿಸಿದೆ. 2022-23ರ ಇಳುವರಿ ವರ್ಷಕ್ಕೆ ಅನ್ವಯವಾಗುವಂತೆ ಎಂಎಸ್‌ಪಿ ದರವು 4ರಿಂದ 9ರಷ್ಟು ಏರಿಕೆಯಾಗಿದೆ.

ಪರಿಷ್ಕೃತ ಎಂಎಸ್‌ಪಿ ದರದ ಪ್ರಕಾರ, ಪ್ರತಿ ಭತ್ತದ ಕ್ವಿಂಟಲ್‌ಗೆ 100 ರೂಪಾಯಿ ಹೆಚ್ಚಳವಾಗಿದ್ದು, ಖರೀದಿ ದರವನ್ನು 2040 ರೂ.ಗೆ ನಿಗದಿಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ, ಎಲ್ಲ 14 ಖಾರಿಫ್ ಬೆಳೆಗಳ ಎಂಎಸ್‌ಪಿ ದರವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ. 

ಮುಂಗಾರು ಬೆಳೆಗಳಿಗೆ ಎಂಎಸ್‌ಪಿ ದರ ಹೆಚ್ಚಳವು ದೇಶದ ಕೋಟ್ಯಂತರ ರೈತರಿಗೆ ಅನುಕೂಲ ಆಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಸಾವಯವ ಭತ್ತದ ಗೋದಾಮಿಗೆ ಪನಗುಡಿ ರೈತರಿಂದ ಒತ್ತಾಯ

"ಮುಂಗಾರು ಬೆಳೆಗಳ ಎಂಎಸ್‌ಪಿ ದರ ಪ್ರತಿ ಕ್ವಿಂಟಲ್‌ಗೆ 92 ರೂಪಾಯಿಂದ 523 ರೂ.ವರೆಗೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಿಂದ 85ರಷ್ಟು ಲಾಭ ಸಿಗಲಿದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಟ್ವೀಟ್ ಮಾಡಿದ್ದಾರೆ. 

ಪ್ರತಿ ಕ್ವಿಂಟಲ್‌ 'ಎಳ್ಳು'ಗೆ ಗರಿಷ್ಟ 523 ರೂಪಾಯಿ ಎಂಎಸ್‌ಪಿ ನಿಗದಿಯಾಗಿದ್ದರೆ, ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ ಕನಿಷ್ಟ 92 ರೂ. ಬೆಂಬಲ ಬೆಲೆ ನಿಗದಿಯಾಗಿದೆ. ಸೋಯಾಬಿನ್‌ಗೆ ಶೇ. 9ರಷ್ಟು, ಮತ್ತು ಬಾಜ್ರಾಗೆ ಶೇ. 4ರಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ. 

Image

"ಬೆಳೆಗಳ ಬಿತ್ತನೆಗೂ ಮೊದಲೇ ಎಂಎಸ್‌ಪಿ ಬಗ್ಗೆ ರೈತರಿಗೆ ಮಾಹಿತಿ ನೀಡುವುದರಿಂದ, ಯಾವ ಬೆಳೆಯನ್ನು ಬೆಳೆಯಬೇಕೆಂದು ರೈತರು ನಿರ್ಧರಿಸಲು ಸಹಾಯವಾಗುತ್ತದೆ" ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಎಣ್ಣೆ ಕಾಳುಗಳು ಮತ್ತು ಬೇಳೆ ಕಾಳುಗಳ ಮೇಲೆ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದರ ಪರಿಣಾಮ ದೇಶದ ಆಮದು ಅವಲಂಬನೆಯನ್ನು ಕಡಿಮೆಯಾಗಿದೆ. ಗೋಧಿ, ಭತ್ತ, ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಸಂಗ್ರಹಣೆಯಲ್ಲಿಯೂ ಏರಿಕೆಯಾಗಿದೆ ಎಂದು ಠಾಕೂರ್ ಹೇಳಿದ್ದಾರೆ. 

ಭತ್ತಕ್ಕೆ ಎಂಎಸ್‌ಪಿ ಹೆಚ್ಚಳ

Image

ಭತ್ತವು ಪ್ರಮುಖ ಮುಂಗಾರು ಬೆಳೆಯಾಗಿದ್ದು, ದೇಶದ ಕೆಲವು ಕಡೆ ಭತ್ತದ ಬಿತ್ತನೆ ಈಗಾಗಲೇ ಪ್ರಾರಂಭವಾಗಿದೆ. ಭತ್ತ ಮತ್ತು ಬಾಜ್ರದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 100 ರೂಪಾಯಿ ಹೆಚ್ಚಿಸಲಾಗಿದೆ. 

ಕಳೆದ ವರ್ಷ ಪ್ರತಿ ಕ್ವಿಂಟಾಲ್ ಸಾಮಾನ್ಯ ದರ್ಜೆಯ ಭತ್ತಕ್ಕೆ 1940 ರೂ. ಎಂಎಸ್‌ಪಿ ನಿಗದಿಪಡಿಸಲಾಗಿತ್ತು. ಈ ವರ್ಷ ಪರಿಷ್ಕೃತ ಎಂಎಸ್‌ಪಿಯೊಂದಿಗೆ ಪ್ರತಿ ಕ್ವಿಂಟಲ್‌ಗೆ 2,040 ರೂ. ನಿಗದಿಪಡಿಸಲಾಗಿದೆ. ಉತ್ತಮ ದರ್ಜೆಯ (‘ಎ’ ದರ್ಜೆಯ) ಭತ್ತದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 1,960 ರೂಪಾಯಿಂದ 2,060 ರೂಪಾಯಿಗೆ ಏರಿಕೆ ಮಾಡಲಾಗಿದೆ.

ವಾಣಿಜ್ಯ ಬೆಳೆಗಳ ಮೇಲೆ ಎಂಎಸ್‌ಪಿ ನಿಗದಿ

Image

ವಾಣಿಜ್ಯ ಬೆಳೆಗಳ ಪೈಕಿ, ಹತ್ತಿ ಬೆಳೆಗೆ ಎಂಎಸ್‌ಪಿಯನ್ನು ಹೆಚ್ಚಿಸಲಾಗಿದ್ದು, ಕ್ವಿಂಟಲ್‌ಗೆ 5,726 ರೂಪಾಯಿಂದ 6,080 ರೂ.ಗೆ ಏರಿಸಲಾಗಿದೆ.

ತೊಗರಿ ಬೇಳೆ, ಉದ್ದಿನ ಬೇಳೆ ಮತ್ತು ಕಡಲೆಕಾಯಿ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 300 ರೂಪಾಯಿ ಹೆಚ್ಚಿಸಲಾಗಿದೆ. ತೊಗರಿ ಬೇಳೆ ಮತ್ತು ಉದ್ದಿನ ಬೇಳೆ ಬೆಂಬಲ ಬೆಲೆಯನ್ನು 6,300 ರೂ.ನಿಂದ 6,600 ರೂ.ಗೆ ಮತ್ತು ಹೆಸರು ಕಾಳು ಬೆಂಬಲ ಬೆಲೆಯನ್ನು 7,275 ರೂ.ನಿಂದ 7,755 ರೂಪಾಯಿಗೆ ಏರಿಸಲಾಗಿದೆ. ಸೂರ್ಯಕಾಂತಿ ಬೀಜದ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 6,015 ರೂಪಾಯಿಂದ 6,400 ರೂಪಾಯಿಗೆ ಏರಿಸಲಾಗಿದೆ.

 

ನಿಮಗೆ ಏನು ಅನ್ನಿಸ್ತು?
0 ವೋಟ್