ಚಿಕ್ಕಮಗಳೂರು | ಅಧಿಕಾರಿಗಳ ಭರವಸೆ: ನಿವೇಶನ ರಹಿತರ ಅನಿರ್ದಿಷ್ಟ ಧರಣಿ ವಾಪಸ್

chikkamagalore
  • ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುತ್ತಿತ್ತು
  • ಸ್ಥಳಕ್ಕೆ ಭೇಟಿ ನೀಡಿ ಗಡಿ ಗುರುತಿಗೆ ಮುಂದಾದ ಅಧಿಕಾರಿಗಳು 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ವಸತಿ ಹೋರಾಟ ಸಮಿತಿ ತಾಲೂಕು ಕಚೇರಿ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಸಿಪಿಐಎಂಎಲ್ ರೆಡ್ ಸ್ಟಾರ್ ಜಿಲ್ಲಾ ಅಧ್ಯಕ್ಷ ಶೇಖರ, ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಒಟ್ಟು 7 ಎಕ್ಕರೆ ಜಾಗವನ್ನು ಅಂಬೇಡ್ಕರ್ ಭವನ, ಹಾಸ್ಟೆಲ್, ರಸ್ತೆ, ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಂತೆ ಸರ್ಕಾರದಿಂದ ನೀಡಲಾಗಿತ್ತು. ಇದರಲ್ಲಿ ಸರ್ವೇ ನಂಬರ್ 7ರಲ್ಲಿ ನಿವೇಶನಕ್ಕಾಗಿ 3 ಎಕರೆ 30 ಗುಂಟೆ ಜಾಗವನ್ನು ನಿಗದಪಡಿಸಲಾಗಿತ್ತು” ಎಂದು ವಿವರಿಸಿದ್ದಾರೆ.

“ಕಂದಾಯ ಇಲಾಖೆ, ತಾಲೂಕು ಆಡಳಿತ ಅಧಿಕಾರಿಗಳು ನಿವೇಶನ ರಹಿತರಿಗೆ ಮಂಜೂರಾಗಿರುವ ಸರ್ಕಾರಿ ಜಾಗವನ್ನು ಗಡಿ ಗುರುತು ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಂತಹ ವಸತಿ ಹೋರಾಟ ಸಮಿತಿಯಿಂದ ಬುಧವಾರ ಧರಣಿ ನಡೆಸಲಾಗುತ್ತಿತ್ತು. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಗಡಿ ಗುರುತು ಮಾಡಲು ಮುಂದಾದರು” ಎಂದರು.

“ಸೋಮವಾರದೊಳಗೆ ಗಡಿ ಗುರುತು ಮಾಡಿ ಸಮಸ್ಯೆ ಬಗೆಹರಿಸಲು ಭರವಸೆ ನೀಡಿದ್ದಾರೆ. ಅದಕ್ಕೆ ವಸತಿ ಹೋರಾಟಗಾರರ ಸಮಿತಿಯಿಂದ ಧರಣಿ ಹಿಂಪಡೆಯಲಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕಬ್ಬಲಿಗರಿಗೆ ಮೀಸಲಾತಿ ಪ್ರಮಾಣ ಪತ್ರ; ವಾಲ್ಮೀಕಿ ಸಮಾಜದವರಿಂದ ವಿರೋಧ

ಧರಣಿಯಲ್ಲಿ ವಸತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಿ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ ರುದ್ರಯ್ಯ, ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸ್ಥಳಿಯರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180