ಭಾರತದಿಂದ ಅತ್ಯಧಿಕ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವ ಚೀನಾ

RICE
  • ಭಾರತದ ನುಚ್ಚಕ್ಕಿಗೆ ಚೀನಾದಲ್ಲಿ ಹೆಚ್ಚಿದ ಬೇಡಿಕೆ
  • ನೂಡಲ್ಸ್ ಮತ್ತು ವೈನ್ ತಯಾರಿಕೆಗೆ ಬಳಕೆ

ಭಾರತದ ನುಚ್ಚಕ್ಕಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚಿದ್ದು, ಭಾರತದಿಂದ ಆಮದು ಮಾಡಿಕೊಳ್ಳುವ ಅಕ್ಕಿ ಪ್ರಮಾಣ ಪ್ರಸಕ್ತ ವರ್ಷ ಗಣನೀಯವಾಗಿ ಹೆಚ್ಚಿದೆ. 
ನೆರೆಯ ದೇಶ ಚೀನಾ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 16.34 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಭಾರತೀಯ ಅಕ್ಕಿ ಖರೀದಿಸಿದೆ. ಈ ಮೂಲಕ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. 

ಭಾರತ 2021-22ರ ಆರ್ಥಿಕ ವರ್ಷದಲ್ಲಿ 212.10 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಅಕ್ಕಿಯನ್ನು ವಿವಿಧ ದೇಶಗಳಿಗೆ ಇಲ್ಲಿವರೆಗೆ ರಫ್ತುಮಾಡಿದೆ. ಈ ಪೈಕಿ ಶೇ. 7.7ರಷ್ಟು ಅಂದರೆ ಒಟ್ಟು 16.34 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಭಾರತದಿಂದ ಚೀನಾ ಆಮದು ಮಾಡಿಕೊಂಡಿದೆ ಎಂದು ವಾಣಿಜ್ಯ ಮಾಹಿತಿ ವಿಶ್ಲೇಷಣೆ ಮಾಡಿದೆ. 

15.76 ಲಕ್ಷ ಮೆಟ್ರಿಕ್ ಟನ್ ಅಂದರೆ ಶೇ. 97ರಷ್ಟು ನುಚ್ಚಕ್ಕಿ ಖರೀದಿಸಿರುವ ಚೀನಾ ಹೆಚ್ಚಿನ ಬೇಡಿಕೆ ಮುಂದಿಟ್ಟಿದೆ. ಇದರೊಂದಿಗೆ ಅತಿ ಹೆಚ್ಚು ಅಕ್ಕಿ ಖರೀದಿಯೊಂದಿಗೆ ಭಾರತದಿಂದ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಈ ಹಿಂದೆ ಭಾರತೀಯ ಅಕ್ಕಿ ಆಫ್ರಿಕನ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿತ್ತು.

ಭಾರತದಿಂದ 2021-22ರಲ್ಲಿ ಒಟ್ಟು 212.10  ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಬಾಸುಮತಿ ಮತ್ತಿತರ ಅಕ್ಕಿ ರಫ್ತಾಗಿದೆ. 2020-21ರಲ್ಲಿ 177.79 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ನಷ್ಟಿದ್ದ ರಫ್ತುಪ್ರಮಾಣ ಈ ವರ್ಷ ಶೇ. 19.30ರಷ್ಟು ಹೆಚ್ಚಿದೆ.

ಇದೇ ಅವಧಿಯಲ್ಲಿ ಚೀನಾಕ್ಕೆ ಶೇಕಡಾ 392.20ರಷ್ಟು ಅಕ್ಕಿ ರಫ್ತುಹೆಚ್ಚಿದ್ದು, 3.31 ಲಕ್ಷ ಮೆಟ್ರಿಕ್ ಟನ್ನಿಂದ 16.34 ಲಕ್ಷ ಮೆಟ್ರಿಕ್ ಟನ್‌ನಷ್ಟಾಗಿದೆ. 2021-22ರಲ್ಲಿ ಭಾರತದಿಂದ ರಫ್ತಾದ ಒಟ್ಟು ಅಕ್ಕಿಯಲ್ಲಿ 39.48 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಬಾಸುಮತಿ ಅಕ್ಕಿ ರಫ್ತಾಗುತ್ತಿದೆ. 2020-21ರಲ್ಲಿ 46.30 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಬಾಸುಮತಿ ಅಕ್ಕಿ ರಫ್ತಾಗಿದ್ದು, ಈ ವರ್ಷ ಇದರ ರಫ್ತು ಪ್ರಮಾಣದಲ್ಲಿ ಶೇ. 14.73ರಷ್ಟು ಕುಸಿದಿದೆ.

ಈ ಸುದ್ದಿ ಓದಿದ್ದೀರಾ:? ಜಾರ್ಖಂಡ್ | ಮಹುವಾ ಸಂಗ್ರಹಿಸಲು ಕೃಷಿ ಬಲೆ; ಕಾಳ್ಗಿಚ್ಚು ತಪ್ಪಿಸಲು ಅರಣ್ಯಾಧಿಕಾರಿಗಳ ಯೋಜನೆ

2021-22ರಲ್ಲಿ ಭಾರತದಿಂದ 83 ದೇಶಗಳಿಗೆ 38.64 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ನುಚ್ಚಕ್ಕಿ ರಫ್ತು ಮಾಡಲಾಗಿದೆ. ಈ ಪೈಕಿ 15.76 ಲಕ್ಷ ಮೆಟ್ರಿಕ್ ಟನ್ ನಷ್ಟನ್ನು ಚೀನಾ ಖರೀದಿಸಿದೆ. 2020-21 ರಲ್ಲಿ 2.73 ಲಕ್ಷ ಮೆಟ್ರಿಕ್ ಟನ್ ಖರೀದಿಸಿತ್ತು. ಪ್ರಸಕ್ತ ವರ್ಷ ಶೇ. 476.40ರಷ್ಟು ನುಚ್ಚಕ್ಕಿ ಖರೀದಿ ಹೆಚ್ಚಿದೆ.
ಚೀನಾ ದೇಶದಲ್ಲಿ ನೂಡಲ್ಸ್ ಮತ್ತು ವೈನ್ ತಯಾರಿಕೆಗಾಗಿ ಅಕ್ಕಿ ಬಳಸುವುದರಿಂದ ಚೀನಾದಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ ದೇಶದ ನುಚ್ಚಕ್ಕಿ ರಫ್ತು ಪ್ರಮಾಣ ಹೆಚ್ಚಳಕ್ಕೆ ಕಾರಣವೆಂದು ವ್ಯಾಪಾರ ತಜ್ಞರು ಹೇಳಿದ್ದಾರೆ.

Image
broken-rice

ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಸೇಟಿಯಾ "ಚೀನಾ ನುಚ್ಚಕ್ಕಿ ಖರೀದಿಸುವ ಪ್ರಮುಖ ದೇಶ. ವೈನ್ ಮತ್ತು ನೂಡಲ್ಸ್ ಮಾಡಲು ಇದನ್ನು ಬಳಸಲಾಗುತ್ತದೆ." ಎಂದು ತಿಳಿಸಿದ್ದಾರೆ.

ಕೋವಿಡ್ -19ಗೂ ಮುನ್ನ ಭಾರತಕ್ಕೆ ಭೇಟಿ ನೀಡಿದ್ದ ಚೀನಾ ನಿಯೋಗ ದೇಶದ ಹಲವು ಅಕ್ಕಿ ಗಿರಣಿಗಳಿಗೆ ಭೇಟಿ ನೀಡಿತ್ತೆಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬೇಡಿಕೆಯ ಈ ಹೆಚ್ಚಳಕ್ಕೆ ಮತ್ತೊಂದು ಕಾರಣವೆಂದರೆ ಜೋಳದ ಬೆಲೆ ಏರಿಕೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಉಕ್ರೇನ್- ರಷ್ಯಾ ಯುದ್ಧ ಪರಿಣಾಮ ಇತ್ತೀಚಿನ ತಿಂಗಳುಗಳಲ್ಲಿ ಆಹಾರೋತ್ಪನ್ನಗಳ ಬೆಲೆಗಳು ಜಾಗತಿಕವಾಗಿ ಹೆಚ್ಚುತ್ತಿವೆ. ಇಂಥ ಸಮಯದಲ್ಲಿ ನುಚ್ಚಕ್ಕಿ ಬೇಡಿಕೆ ಸಹ ಹೆಚ್ಚಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್