ಲಂಕಾ ಬಂದರಿನಲ್ಲಿ ಬೀಡುಬಿಟ್ಟ ಚೀನಿ ನೌಕೆ| ಸಂಶೋಧನೆಗೆ ಅಡ್ಡಿಪಡಿಸದಂತೆ ಭಾರತಕ್ಕೆ ಚೀನಾ ಮನವಿ

ಚೀನಾ ಹಡಗಿನ ಇರುವಿಕೆಯು ಯಾವುದೇ ದೇಶದ ಭದ್ರತೆ ಹಾಗೂ ಅರ್ಥಿಕ ಹಿತಾಸಕ್ತಿಗಳ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಚೀನಾ ವಿದೇಶಾಂಗ ವಕ್ತಾರರು ಸ್ಪಷ್ಟಪಡಿಸಿದ್ದರೂ ಖಂಡಾಂತರ ಕ್ಷಿಪಣಿ ಮತ್ತು ಉಪಗ್ರಹಗಳ ಜಾಡುಪತ್ತೆ ಹಚ್ಚುವ ಅತ್ಯಾಧುನಿಕ ತಂತ್ರಜ್ಞಾನದ ನೌಕೆ ಭಾರತದ ಗಡಿಯಂಚಿಗೆ ಬಂದು ನಿಂತಿರುವುದು ಆತಂಕ ಮೂಡಿಸಿದೆ.
China High Tech ship

ಶ್ರೀಲಂಕಾದ ಹಂಬನ್‌ಟೋಟ ಬಂದರಿಗೆ ಮಂಗಳವಾರ (ಆಗಸ್ಟ್ 16) ಪ್ರವೇಶಿಸಿರುವ ತನ್ನ 'ಯುವಾನ್ ವಾಂಗ್ 5' ನೌಕೆಯ ಸಾಗರ ವೈಜ್ಞಾನಿಕ ಸಂಶೋಧನೆಗೆ ಅಡ್ಡಿ ಮಾಡದಂತೆ ಚೀನಾ, ಭಾರತಕ್ಕೆ ಮನವಿ ಮಾಡಿದೆ.

ಯುವಾನ್ ವಾಂಗ್ 5 ಹಡಗಿನ ಸಾಗರ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಸಾಂಪ್ರದಾಯಿಕ ಅಭ್ಯಾಸಕ್ಕೆ ಅನುಗುಣವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವ್ಯಾಂಗ್ ವೆನ್ಬಿನ್ ತಿಳಿಸಿದ್ದಾರೆ.   

ಬೀಜಿಂಗ್‌ನ ವರದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದ ಬಂದರಿನಲ್ಲಿ ಚೀನಾ ಹಡಗಿನ ಇರುವಿಕೆಯು ಯಾವುದೇ ದೇಶದ ಭದ್ರತೆ ಹಾಗೂ ಅರ್ಥಿಕ ಹಿತಾಸಕ್ತಿಗಳ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ. ಆದ್ದರಿಂದ ಮೂರನೇ ದೇಶವು ಸಾಗರ ವೈಜ್ಞಾನಿಕ ಸಂಶೋಧನೆಗೆ ಅಡ್ಡಿಯಾಗಬಾರದು ಎಂದು ಹೇಳಿದ್ದಾರೆ.

ಭಾರತದ ದಕ್ಷಿಣ ಕರಾವಳಿ ತೀರಕ್ಕೆ ಹತ್ತಿರವಾಗಿ ಶ್ರೀಲಂಕಾದ ಬಂದರಿಗೆ ಚೀನಾದ ಅತ್ಯಾಧುನಿಕ ಕಣ್ಗಾವಲು ಮತ್ತು ಸಂಶೋಧನಾ ನೌಕೆಯು ಪ್ರವೇಶಿಸಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು.  

ಮಿಲಿಟರಿ ಉದ್ದೇಶಗಳಿಗೆ ಬಂದರು ಬಳಸಲು ಅನುಮತಿಯಿಲ್ಲ

ಹಂಬನ್‌ಟೋಟದ ದಕ್ಷಿಣ ಬಂದರನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲು ಚೀನಾಕ್ಕೆ ಅನುಮತಿ ನೀಡುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.  

2017 ರಲ್ಲಿ ಸಾಲದ ವಿನಿಮಯವಾಗಿ ಬೀಜಿಂಗ್ 99 ವರ್ಷಗಳ ಗುತ್ತಿಗೆಗೆ ವಹಿಸಿಕೊಂಡ ಹಂಬನ್‌ಟೋಟ ಬಂದರಿನಲ್ಲಿ ಮಂಗಳವಾರ ಅತ್ಯಾಧುನಿಕ ಚೀನಾದ ಸಂಶೋಧನಾ ಹಡಗಿನ ಆಗಮನಕ್ಕೂ ಮುನ್ನ ರನಿಲ್ ವಿಕ್ರಮಸಿಂಘೆ ಈ ಮಾತು ಹೇಳಿದರು.

“ಹಂಬನ್‌ಟೋಟವನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸುವುದನ್ನು ನಾವು ಬಯಸುವುದಿಲ್ಲ" ಎಂದು ರಾನಿಲ್ ವಿಕ್ರಮಸಿಂಘೆ ಕೊಲಂಬೊದ ಅಧ್ಯಕ್ಷರ ಭವನದಲ್ಲಿ ಯೊಮಿಯುರಿ ಶಿಂಬುನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭಾನುವಾರ (ಆಗಸ್ಟ್‌ 13) ಹೇಳಿದ್ದರು.

ಜಪಾನಿನ ಪತ್ರಿಕೆಗೆ ಅವರು ನೀಡಿದ ಹೇಳಿಕೆಯು ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಹೆಚ್ಚುತ್ತಿರುವ ಕಡಲ ಉಪಸ್ಥಿತಿಯ ಬಗ್ಗೆ ಭಾರತ ಮತ್ತು ಅಮೆರಿಕದಲ್ಲಿ ಉಂಟಾಗಿರುವ ಕಳವಳವನ್ನು ನಿವಾರಿಸುವ ಗುರಿಯನ್ನು ಹೊಂದಿತ್ತು.

ಲಂಕೆಯಲ್ಲಿ ಬೀಡುಬಿಟ್ಟ ಚೀನಾ ನೌಕೆ

ಉಪಗ್ರಹಗಳ ಜಾಡು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಚೀನಾದ ಅತ್ಯಾಧುನಿಕ ಕಣ್ಗಾವಲು ಮತ್ತು ಸಂಶೋಧನಾ ನೌಕೆಯು ಶ್ರೀಲಂಕಾ ದಕ್ಷಿಣದ ಹಂಬನ್‌ಟೋಟ ಬಂದರಿನಲ್ಲಿ ಮಂಗಳವಾರ ಬೀಡುಬಿಟ್ಟಿದೆ. 

ಈ ಸುದ್ದಿ ಓದಿದ್ದೀರಾ? ಬಿಲ್ಕೀಸ್ ಬಾನು ಪ್ರಕರಣ| ಅತ್ಯಾಚಾರಿಗಳ ಬಿಡುಗಡೆಯಿಂದ ಭಯ ಹೆಚ್ಚಾಗಿದೆ: ಬಾನು ಪತಿ ರಸೂಲ್ ಪಟೇಲ್

ಈ ಪ್ರದೇಶದಲ್ಲಿನ ಭದ್ರತೆಯ ಬಗ್ಗೆ ಭಾರತ ಮತ್ತು ಅಮೆರಿಕದ ಕಳವಳದ ಮಧ್ಯೆ ಚೀನಾ, ಈ ಅತ್ಯಾಧುನಿಕ ಸಂಶೋಧನಾ ನೌಕೆಯು ಯಾವುದೇ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವುದಿಲ್ಲ. ಮೂರನೇ ದೇಶದ ಆರ್ಥಿಕತೆಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದೆ. 

ನೌಕೆಯು ಶ್ರೀಲಂಕಾದ ಸಂಪೂರ್ಣ ಸಹಕಾರದಿಂದ ಹಿಂದೂ ಮಹಾಸಾಗರದ ಬಂದರಿನಲ್ಲಿ ಲಂಗರು ಹಾಕಿದೆ. ಈ ನೌಕೆಯು ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಸಾಗರದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ನಡೆಸಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಾಂಗ್ ವೆನ್ಬಿನ್ ಸ್ಪಷ್ಟಪಡಿಸಿದ್ದರು. ಆರಂಭದಲ್ಲಿ ಲಂಕಾವು ಚೀನಿ ನೌಕೆಗೆ ಪ್ರವೇಶ ನಿರಾಕರಿಸಿತ್ತು.

ಭಾರತವು ತನ್ನ ರಕ್ಷಣಾ ವ್ಯವಸ್ಥೆಯ ಸೂಕ್ಷ್ಮ ಮಾಹಿತಿಯ ಗೂಢಚಾರಿಕೆಗೆ ಚೀನಿ ನೌಕೆ ಬರುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದ್ದರಿಂದ ಲಂಕಾ ಈ ನಿರ್ಧಾರ ಕೈಗೊಂಡಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್