ಮಹಾರಾಷ್ಟ್ರ | ಪುರಸಭೆಯ ಸೆಕ್ಯುರಿಟಿ ಗಾರ್ಡ್‌ ಹುದ್ದೆಗೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 30 ಮಂದಿ ನೇಮಕ

  • ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೆ ಉದ್ಯೋಗ ನೀಡಿದ ಪಿಸಿಎಂಸಿ
  • ಗ್ರೀನ್‌ ಮಾರ್ಷಲ್‌ ಮತ್ತು ಸೆಕ್ಯುರಿಟಿ ಗಾರ್ಡ್‌ಗಳಾಗಿ ನೇಮಕಗೊಂಡ 30 ಮಂದಿ

ಗ್ರೀನ್‌ ಮಾರ್ಷಲ್‌ ಮತ್ತು ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 30 ಮಂದಿಯನ್ನು ಮಹಾರಾಷ್ಟ್ರದ ಪಿಂಪ್ರಿ ಚಿಂಚಿವಾಡ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಪಿಸಿಎಂಸಿ) ಸಂಸ್ಥೆಯು ನೇಮಕ ಮಾಡಿದೆ. ಈ ಮೂಲಕ ಈ ಸಮುದಾಯದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ ರಾಜ್ಯದ ಮೊದಲ ನಾಗರಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳಲ್ಲಿ ಒಂದಾದ ಈ ಸಮುದಾಯದ ಬಹುಪಾಲು ಜನರು ಶಿಕ್ಷಣ ಮತ್ತು ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಉದ್ಯೋಗವಿಲ್ಲದೇ ಈ ಸಮುದಾಯದ ಹಲವರು ಭಿಕ್ಷಾಟನೆಯನ್ನೇ ವೃತ್ತಿಯಾಗಿಸಿಕೊಂಡಿರುವ ನಿದರ್ಶನಗಳು ದೇಶದೆಲ್ಲೆಡೆ ಕಾಣಸಿಗುತ್ತವೆ.

ಎಲ್ಲ ಬಗೆಯ ಅವಕಾಶಗಳಿಂದ ವಂಚಿತರಾಗಿರುವ ಈ ಸಮುದಾಯದವರು ಗೌರವಯುತ ಜೀವನ ನಡೆಸಲು ಮತ್ತು ಘನತೆಯಿಂದ ಬದುಕುವಂತೆ ಮಾಡುವ ನಿಟ್ಟಿನಲ್ಲಿ ಪಿಂಪ್ರಿ ಚಿಂಚಿವಾಡ್‌ ಪುರಸಭೆಯ ಆಯುಕ್ತ ರಾಜೇಶ್‌ ಪಾಟೀಲ್‌ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು 'ಎನ್‌ಡಿಟಿವಿ' ವರದಿಯಲ್ಲಿ ಉಲ್ಲೇಖಿಸಿದೆ.

ʻʻಸಮಾಜದಲ್ಲಿ ಅತಿ ಹೆಚ್ಚು ನಿಂದನೆ, ಶೋಷಣೆಗೆ ಒಳಗಾಗಿರುವ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವರನ್ನು ಮುಖ್ಯವಾಹಿನಿಗೆ ತರಲು ಮತ್ತು  ಗೌರವಯುತ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಎಲ್ಲ ಅಗತ್ಯಗಳನ್ನು ಒದಗಿಸುವ ಸಲುವಾಗಿ ನಾವು ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಪ್ರಸ್ತುತ 30 ರಿಂದ 35 ಮಂದಿ ಲಿಂಗತ್ವ ಅಲ್ಪಸಂಖ್ಯಾತರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡಿದ್ದೇವೆ. ಅವರಲ್ಲಿ ಕೆಲವರು ಗ್ರೀನ್‌ ಮಾರ್ಷಲ್‌ ಸ್ಕ್ವಾಡ್‌ಗಳಾಗಿ ಮತ್ತು ಉಳಿದವರು ನಾಗರಿಕ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಕೆಲವರಿಗೆ ನಾಗರಿಕ ಉದ್ಯಾನಗಳ ನಿರ್ವಹಣೆ ಕೆಲವನ್ನು ಕೊಡಲಾಗಿದೆʼʼ ಎಂದು ಪಾಟೀಲ್‌ ಅವರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ | ಏಳನೇ ಸ್ಥಾನಕ್ಕೆ ಅಣ್ಣು ರಾಣಿ ತೃಪ್ತಿ

ʻʻಜುಲೈ 1ರಂದು ನೇಮಕಗೊಂಡಿರುವ ಸಮುದಾಯದವರೆಲ್ಲರೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಈ ಅವಕಾಶವು ಆ ಸಮುದಾಯದವರಿಗೆ ತಮ್ಮದೇ ಆದ ಗುರುತನ್ನು ಸೃಷ್ಟಿಸಿಕೊಳ್ಳಲು ಮತ್ತು ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆʼʼ ಎಂದು ಅವರು ವಿವರಿಸಿದರು.

ʻʻಈ ಉದ್ಯೋಗವು ಗುತ್ತಿಗೆ ಆಧಾರಿತವಾಗಿದ್ದು, ಉಳಿದ ಎಲ್ಲ ಸೆಕ್ಯುರಿಟಿ ಗಾರ್ಡ್‌ ಮತ್ತು ಗ್ರೀನ್‌ ಮಾರ್ಷಲ್‌ಗಳಂತೆ ಇವರು ಕನಿಷ್ಠ ವೇತನವನ್ನು ಪಡೆಯಲಿದ್ದಾರೆ. ಇದಲ್ಲದೇ, ಸ್ವಸಹಾಯ ಸಂಘಗಳನ್ನು (ಎಸ್‌ಎಚ್‌ಜಿ) ರೂಪಿಸಿ, ಆರ್ಥಿಕ ಜೀವನೋಪಾಯ ಒದಗಿಸುವ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರನ್ನು ಸಬಲೀಕರಣಗೊಳಿಸುವ ಯೋಜನೆಯನ್ನು ಹೊಂದಿದ್ದೇವೆʼʼ ಎಂದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪೈಕಿ ಒಬ್ಬರಾದ ಶೈನಾ ರಾಯ್‌, ಪಿಸಿಎಂಸಿಯ ಯಶ್ವಂತ್‌ರಾವ್‌ ಚವ್ವಾಣ್‌ ಮೆಮೊರಿಯಲ್‌ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ʻʻನಾನು ಟ್ರಾಫಿಕ್‌ ಸಿಗ್ನಲ್‌ ಮತ್ತು ಅಂಗಡಿಗಳಲ್ಲಿ ಭಿಕ್ಷೆ ಬೇಡುತ್ತಿದ್ದೆ. ಹೀಗೆ ಒಂದು ದಿನ ರೂಪಾ ತಕ್ಸಲ್‌ ಅವರನ್ನು ಭೇಟಿಯಾದೆ. ಅವರಿಂದ ಸ್ಫೂರ್ತಿ ಪಡೆದ ನಾನು, ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ಪ್ರಸ್ತುತ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದೇನೆʼʼ ಎಂದು ಶೈನಾ ರಾಯ್ ಸಂತಸ ವ್ಯಕ್ತಪಡಿಸಿದರು.

ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅವರು ಪ್ರಸ್ತುತ 16 ಸಾವಿರ ರೂ ಸಂಬಳ ಪಡೆಯುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್