ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಎಟಿಎಂ ಕದ್ದು ₹8.67 ಲಕ್ಷ ಡ್ರಾ

  • ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯ ಎಟಿಎಂ ಕಳವು
  • ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯೇ ಕಳ್ಳತನದ ಆರೋಪಿಗಳು

ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಎಟಿಎಂ ಕಾರ್ಡ್‌ಗಳನ್ನು ಕದ್ದು, ಸುಮಾರು ₹8.67 ಲಕ್ಷ ಹಣವನ್ನು ಡ್ರಾ ಮಾಡಿದ ಆರೋಪದ ಮೇಲೆ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯ ಇಬ್ಬರು ಸ್ವಚ್ಛತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಅತುಲ್‌ ಚ್ಗೊಗೈ (55) ಮತ್ತು ರಾಜ್‌ ಪಾಂಗಿಂಗ್ (31) ಅಸ್ಸಾಂನವರು. ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ವಚ್ಚತೆ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕೋವಿಡ್‌ನಿಂದ ಅದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯ ಎಟಿಎಂ ಕಾರ್ಡ್‌ಗಳನ್ನು ಇಬ್ಬರೂ ಸೇರಿ ಕದ್ದಿದ್ದಾರೆ. ನಂತರ ವಿವಿಧ ಸಂದರ್ಭಗಳಲ್ಲಿ ಅವರ ಅಕೌಂಟ್‌ನಿಂದ ಹಣ ಡ್ರಾ ಮಾಡಿದ್ದಾರೆ. ಮೃತ ಮಹಿಳೆಯ ಪತಿ ಎಂ ಕೃಷ್ಣಸಾಮಿ ಅವರು ಪತ್ನಿಯ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಹಣ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಕಳೆದ ಗುರುವಾರ ಕೃಷ್ಣಸಾಮಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. "ಕೋವಿಡ್‌ನಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಪತ್ನಿ ಯಶೋಧಾ ಅವರು ಚಿಕಿತ್ಸೆಗೆ ಸ್ಪಂದಿಸದೇ 2021ರ ಮೇ 4ರಂದು ನಿಧನರಾದರು. ಚಿಕಿತ್ಸಾ ವೆಚ್ಚಕ್ಕಾಗಿ ಯಶೋದಾ ಅವರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಎರಡು ಎಟಿಎಂಗಳು ಕಳುವಾಗಿದೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಕೃಷ್ಣಸಾಮಿ ಅವರು ಇತ್ತೀಚೆಗೆ ಯಶೋಧರ ಖಾತೆ ಪರಿಶೀಲಿಸಲು ಮತ್ತು ಹಣ ಮರಳಿ ಪಡೆಯಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ ಭೇಟಿ ನೀಡಿದ್ದರು. ಆಗ 2021ರ ಡಿಸೆಂಬರ್ 20ರಿಂದ 2022ರ ಮಾರ್ಚ್ 24ರ ನಡುವೆ ಡೆಬಿಟ್ ಕಾರ್ಡ್ ಬಳಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ₹4,82,710ಗಳನ್ನು ಡ್ರಾ ಮಾಡಲಾಗಿದೆ ಎಂಬುದನ್ನು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಅದೇ ಅವಧಿಯಲ್ಲಿ ಸಿಟಿ ಯೂನಿಯನ್ ಬ್ಯಾಂಕ್ ಖಾತೆಯಿಂದ ₹3.85 ಲಕ್ಷಗಳನ್ನು ಎಟಿಎಂ ಮೂಲಕ ಡ್ರಾ ಮಾಡಿರುವುದಾಗಿ ತಿಳಿದುಬಂದಿದೆ. ಕೃಷ್ಣಸಾಮಿ ಅವರು ಈ ಬಗ್ಗೆ ಆಸ್ಪತ್ರೆ ಆಡಳಿತವನ್ನು ವಿಚಾರಿಸಿದ್ದು, ಕೋವಿಡ್ ವಾರ್ಡ್‌ಗಳನ್ನು ಶುಚಿಗೊಳಿಸುತ್ತಿದ್ದ ಸಿಬ್ಬಂದಿ ಡೆಬಿಟ್ ಕಾರ್ಡ್‌ಗಳನ್ನು ಕದ್ದಿರುವುದು ತಿಳಿದುಬಂದಿದೆ.
 
"ಚಿಕಿತ್ಸೆಯ ಸಮಯದಲ್ಲಿ, ರೋಗಿಯ ಕುಟುಂಬದ ಸದಸ್ಯರನ್ನು ವಾರ್ಡ್‌ನೊಳಗೆ ಬಿಡುತ್ತಿರಲಿಲ್ಲ. ಸ್ವಚ್ಛತಾ ಸಿಬ್ಬಂದಿಗೆ ಮಾತ್ರ ವಾರ್ಡ್‌ಗೆ ಪ್ರವೇಶವಿತ್ತು. ಆ ಅವಕಾಶ ಬಳಸಿಕೊಂಡು ಸಿಬ್ಬಂದಿ ಮೃತ ಮಹಿಳೆಯ ಡೆಬಿಟ್ ಕಾರ್ಡ್‌ಗಳನ್ನು ಕದ್ದಿದ್ದಾರೆ. ಮಹಿಳೆಯು ತನ್ನ ಎಟಿಎಂ ಪಿನ್ ಸಂಖ್ಯೆಗಳನ್ನು ಬರೆದಿಡುತ್ತಿದ್ದರು. ಹಾಗಾಗಿ ಡೆಬಿಟ್ ಕಾರ್ಡ್‌ ಮೂಲಕ ಇಬ್ಬರೂ ಹಣ ಡ್ರಾ ಮಾಡಲು ಸಾಧ್ಯವಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಷ್ಣಸಾಮಿ ದೂರಿನ ಆಧಾರದ ಮೇಲೆ ಪೀಲಮೇಡು ಪೊಲೀಸರು ಐಪಿಸಿ ಸೆಕ್ಷನ್ 379 (ಕಳ್ಳತನಕ್ಕೆ ಶಿಕ್ಷೆ) ಮತ್ತು 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್