
- ರಾಜ್ಯದಲ್ಲಿ ಮೇಘ ಸ್ಫೋಟದಿಂದ ಹಲವೆಡೆ ಧಾರಾಕಾರ ಮಳೆ
- ಮಳೆಯಿಂದ ಭೂಕುಸಿತದಲ್ಲಿ ಮಹಿಳೆ ಸಾವು, ಇಬ್ಬರಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟದಿಂದ ಬುಧವಾರ ಭಾರಿ ಪ್ರವಾಹ ಉಂಟಾಗಿದೆ. ಕುಲು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ನೀರಿನ ರಭಸಕ್ಕೆ ಸಿಲುಕಿ ನಾಲ್ವರು ಕೊಚ್ಚಿ ಹೋಗಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಪ್ರದೇಶದಲ್ಲಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಚಲ್ಲಾಲ್ ಪಂಚಾಯತ್ನ ಚೋಜ್ ಗ್ರಾಮದಲ್ಲಿ ಮಳೆಯಲ್ಲಿ ನಾಲ್ಕರಿಂದ ಆರು ಮಂದಿ ಕೊಚ್ಚಿ ಹೋಗಿದ್ದಾರೆ. ಸುಮಾರು ಐದು ದನಗಳು ಪ್ರವಾಹದಲ್ಲಿ ಸಿಲುಕಿವೆ ಎಂದು ಕುಲು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
#WeatherUpdate | Cloud burst in Himachal Pradesh's Kullu, loss of life feared pic.twitter.com/SdGvgw7qNV
— NDTV (@ndtv) July 6, 2022
ಈ ಸುದ್ದಿ ಓದಿದ್ದೀರಾ? ಶಾಲಾ ಪಠ್ಯಕ್ರಮ ಪರಿಷ್ಕರಣೆ | ಆನ್ಲೈನ್ ಸಮೀಕ್ಷೆಗೆ ಮುಂದಾದ ಕೇಂದ್ರ ಶಿಕ್ಷಣ ಸಚಿವಾಲಯ
ಇಂದು (ಬುಧವಾರ) ಬೆಳಿಗ್ಗೆ ಸುರಿದ ಭಾರಿ ಮಳೆಯಿಂದ ಶಿಮ್ಲಾದಲ್ಲಿ ಭೂಕುಸಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹಲವರು ಕಾಣೆಯಾಗಿದ್ದಾರೆ. ರಕ್ಷಣಾ ತಂಡ ಪತ್ತೆ ಕಾರ್ಯ ಮುಂದುವರಿಸಿದೆ. ಮಂಗಳವಾರ ರಾತ್ರಿಯಿಂದಲೂ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ.
ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಶಿಮ್ಲಾದಲ್ಲಿಯ ಧಲ್ಲಿ ಸುರಂಗ ಬಳಿ ಭೂಕುಸಿತ ಉಂಟಾಗಿ ಒಬ್ಬ ಮೃತಪಟ್ಟಿದ್ದಾರೆ. ಅಲ್ಲಿದ್ದ ಮಹಿಳೆ ಮತ್ತು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಇವರಿಬ್ಬರೂ ವಲಸೆ ಕಾರ್ಮಿಕರು ಎಂದು ಹೇಳಲಾಗಿದೆ.
ಘಟನೆ ನಡೆದಾಗ ತಾವು ರಸ್ತೆ ಬದಿಯ ಶಿಬಿರವೊಂದರಲ್ಲಿ ನಿದ್ರಿಸುತ್ತಿದ್ದೆವು ಎಂದು ವಲಸೆ ಕಾರ್ಮಿಕರು ಹೇಳಿದ್ದಾರೆ. ಗಾಯಗೊಂಡ ಇಬ್ಬರನ್ನೂ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.