ಕಲ್ಲಿದ್ದಲು ಹಗರಣ| ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗೆ ಜೈಲು ಶಿಕ್ಷೆ

coal
  • ಎಚ್‌ ಸಿ ಗುಪ್ತಾ ಮತ್ತು ಕೆ ಎಸ್‌ ಕ್ರೋಫಾ ಅವರಿಗೆ ಜೈಲು ಶಿಕ್ಷೆ, ದಂಡ
  • ಜಿಐಎಲ್‌ನ ಮಾಜಿ ನಿರ್ದೇಶಕಿ ಸೀಮಾ ಗುಪ್ತಾ ಪ್ರಕರಣದಿಂದ ಖುಲಾಸೆ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌ ಸಿ ಗುಪ್ತಾ ಅವರಿಗೆ ಮೂರು ವರ್ಷಗಳ ಕಾಲ ಜೈಲು, 1 ಲಕ್ಷ ರೂ ದಂಡ ಮತ್ತು ಮಾಜಿ ಜಂಟಿ ಕಾರ್ಯದರ್ಶಿ ಕೆ ಎಸ್ ಕ್ರೋಫಾ ಅವರಿಗೆ ಎರಡು ವರ್ಷ ಜೈಲು, 50 ಸಾವಿರ ರೂ ದಂಡ ವಿಧಿಸಿ ದೆಹಲಿಯ ವಿಶೇಷ ನ್ಯಾಯಾಲಯ ಆದೇಶಿಸಿದೆ.‌

ಲೋಹರಾ ಈಸ್ಟ್ ಕಲ್ಲಿದ್ದಲು ಬ್ಲಾಕ್ ಅನ್ನು ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ (ಜಿಐಎಲ್‌) ಹಂಚಿಕೆ ಮಾಡುವ ಸಲುವಾಗಿ ಸರ್ಕಾರವನ್ನು ವಂಚಿಸಲು ಇವರು ಸಂಚು ರೂಪಿಸಿದ್ದರು ಎಂಬುದು ಸಾಬೀತಾಗಿದೆ. 

ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಸ್ಥಾಪಿಸಲಾದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಈ ಆದೇಶ ಹೊರಡಿಸಿದ್ದಾರೆ. ಜತೆಗೆ ಜಿಐಎಲ್‌ಗೆ 2 ಲಕ್ಷ ರೂ. ಮತ್ತು ಮೂರನೇ ಆರೋಪಿ ಮುಖೇಶ್ ಗುಪ್ತಾಗೆ 2 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. 

ಜಿಐಎಲ್‌ನ ಮಾಜಿ ನಿರ್ದೇಶಕಿ ಸೀಮಾ ಗುಪ್ತಾ ಮತ್ತು ಮಹಾರಾಷ್ಟ್ರದ ಭೂವಿಜ್ಞಾನ ಮತ್ತು ಗಣಿಗಾರಿಕೆಯ ಮಾಜಿ ನಿರ್ದೇಶಕ ವಿಶ್ವಾಸ್ ಸಾವಖಂಡೆ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಆಗಸ್ಟ್ 4, 2022ರಂದು ಶಿಕ್ಷೆಯ ಪ್ರಮಾಣದ ಕುರಿತ ವಾದಗಳನ್ನು ನ್ಯಾಯಾಲಯ ಆಲಿಸಿತ್ತು.

ಈ ಸುದ್ದಿ ಓದಿದ್ದೀರಾ?: ರೈಲ್ವೆ ಅಪಘಾತ | ಕಳೆದ ಏಳು ವರ್ಷಗಳಲ್ಲಿ 5,210ಕ್ಕೂ ಅಧಿಕ ಮಂದಿ ಸಾವು

ಅಂದಿನ ಸಂಸದರಾದ ಪ್ರಕಾಶ್ ಜಾವ್ಡೇಕರ್, ಹನ್ಸ್ ರಾಜ್ ಅಹಿರ್ ಹಾಗೂ ರಾಜಕೀಯ ನಾಯಕ ಮತ್ತು ವಕೀಲ ಭೂಪೇಂದ್ರ ಯಾದವ್ ಅವರು 2006ರಿಂದ 2009ರ ಅವಧಿಯಲ್ಲಿ ಕಲ್ಲಿದ್ದಲು ಉಚಿತ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾರ್ಚ್ 2012ರಲ್ಲಿ ವಿಜಿಲೆನ್ಸ್‌ ಕಮಿಷನರ್‌ಗೆ ದೂರು ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್