ಲಕ್ನೋ ವಿವಿ ಪ್ರತಿಭಟನೆ | ದಲಿತನೆಂದು ಕಿರುಕುಳ ನೀಡಲಾಗುತ್ತಿದೆ ಎಂದ ಪ್ರಾಧ್ಯಾಪಕ

Lucknow University
  • ಸಾಮಾಜಿಕ ಜಾಲತಾಣದ ಕಾಮೆಂಟ್ ವಿವಾದ
  • ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ ಎಬಿವಿಪಿ

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದದ ಕುರಿತು ನಡೆದ ಚರ್ಚೆಯಲ್ಲಿ ಲಕ್ನೋ ವಿಶ್ವವಿದ್ಯಾಲಯದ ಹಿಂದಿ ಸಹ ಪ್ರಾಧ್ಯಾಪಕ ರವಿಕಾಂತ್ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅಭಿಪ್ರಾಯವನ್ನು ವಿರೋಧಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ಘಟಕ ಎಬಿವಿಪಿ ಸದಸ್ಯರು ಪ್ರಾಧ್ಯಾಪಕರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯದೊಳಗೆ ಪ್ರಾಧ್ಯಾಪಕರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಪ್ರಾಧ್ಯಾಪಕ ರವಿಕಾಂತ್ ಚಂದನ್ ವಿರುದ್ಧ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿ, ಅವರ ಅಭಿಪ್ರಾಯಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ "ದೇಶ್ ಕೆ ಗದ್ದಾರೋನ್ ಕೋ ಗೋಲಿ ಮಾರೋ, ಎಸ್ ***** ಕೋ (ದೇಶದ್ರೋಹಿಗಳನ್ನು ಶೂಟ್ ಮಾಡಿ)" ಎಂದು ವಿದ್ಯಾರ್ಥಿಗಳು ಕೂಗುವುದು ಕಾಣಬಹುದಾಗಿದೆ. ಈ ಹಿಂದೆ ಬಿಜೆಪಿ ಬೆಂಬಲಿಗರು ಮತ್ತು ಕೇಂದ್ರ ಸಚಿವರಿಂದ ಈ ವಿವಾದಾತ್ಮಕ ಘೋಷಣೆ ಕೇಳಿ ಬಂದಿತ್ತು.

ತಾವು ದಲಿತ ಎಂಬ ಕಾರಣಕ್ಕೆ ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ರವಿಕಾಂತ್ ಚಂದನ್ ಅವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ವಾರಣಾಸಿಯಲ್ಲಿ ಮಸೀದಿ ಹೇಗೆ ನಿರ್ಮಾಣವಾಯಿತು" ಎಂಬ ಪುಸ್ತಕದ ಕಥೆ ಉಲ್ಲೇಖಿಸಿ ನಾನು ಹೇಳಿಕೆ ನೀಡಿದ್ದೇನೆ. ಆ ಹೇಳಿಕೆ ಮತ್ತು ಪುಸ್ತಕದ ಉಲ್ಲೇಖವನ್ನು ಸಂಪಾದಿಸಲಾಗಿದೆ ಮತ್ತು ನಾನು ಹಿಂದೂ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದೇನೆ ಎಂದು ಸೂಚಿಸುವ ಕ್ಲಿಪ್ ಹಂಚಿಕೊಳ್ಳಲಾಗಿದೆ. ನನಗೆ ಅಂತಹ ಉದ್ದೇಶ ಇರಲಿಲ್ಲ. ನಾನು ಕೇವಲ ಒಂದು ಕಥೆ ಉಲ್ಲೇಖಿಸುತ್ತಿದ್ದೇನೆ. ಇದರ ಹೊರತಾಗಿಯೂ, ಎಬಿವಿಪಿ ವಿದ್ಯಾರ್ಥಿಗಳು ಮತ್ತು ಹೊರಗಿನವರು ಇಲ್ಲಿಗೆ ಬಂದು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು. ಪೊಲೀಸರ ಸಹಾಯದಿಂದ ನಾನು ವಿದ್ಯಾರ್ಥಿಗಳೊಂದಿಗೆ ಮಾತನಾಡಿದೆ ಮತ್ತು ಸಂಪೂರ್ಣ ಕ್ಲಿಪ್ ಅನ್ನು ನೋಡುವಂತೆ ಕೇಳಿದೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಘಟನೆಯನ್ನು ಪೋಸ್ಟ್ ಮಾಡಿದ್ದೇನೆ. ನಾನು ದಲಿತನಾಗಿದ್ದೇನೆ ಮತ್ತು ಬಾಬಾ ಸಾಹೇಬರ ಸಂವಿಧಾನದ ಮೌಲ್ಯಗಳನ್ನು ಅನುಸರಿಸುತ್ತೇನೆ. ಈ ಸಮುದಾಯದವನಾದ ನನ್ನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಭಾವಿಸುತ್ತೇನೆ" ಎಂದು ರವಿಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಾದದ ಕುರಿತ ಚರ್ಚೆಯಲ್ಲಿ ರವಿಕಾಂತ್ ಅವರು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕೀಯ ನಾಯಕ ಪಟ್ಟಾಭಿ ಸೀತಾರಾಮಯ್ಯ ಅವರ 'ಗರಿಗಳು ಮತ್ತು ಕಲ್ಲುಗಳು' ಎಂಬ ಪುಸ್ತಕದ ವಿವರ ಉಲ್ಲೇಖಿಸಿದ್ದರು. ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಏಕೆ ಕೆಡವಿದರು ಎಂಬ ಕಥೆ ಉಲ್ಲೇಖಿಸಿದ್ದರು. ಕಥೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಪ್ರಾಧ್ಯಾಪಕರು ಬರೆದಿದ್ದರು. ಔರಂಗಜೇಬ್ ವಾರಣಾಸಿಯ ಮೂಲಕ ಹಾದುಹೋಗುವಾಗ ದೇವಾಲಯದ ಸಂಕೀರ್ಣದೊಳಗೆ ನಡೆದ ಅತ್ಯಾಚಾರವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.

"ಅವರಿಗೆ ಕಮ್ಯುನಿಸ್ಟ್ ಮನಸ್ಥಿತಿ ಇದೆ ಮತ್ತು ಇದು ಒಂದು ಖಾಯಿಲೆ. ಅವರು ತಮ್ಮ ಪೋಸ್ಟ್ ಅನ್ನು ಹಿಂದೂ ಸಂಪ್ರದಾಯಗಳ ಬಗ್ಗೆ ಟೀಕಿಸಲು ಬಳಸಿದರು. ಅವರು ನಿನ್ನೆ ಕಾಶಿ ವಿಶ್ವನಾಥ ದೇವಸ್ಥಾನದ ಬಗ್ಗೆ ಕಾಮೆಂಟ್ ಬರೆದಿದ್ದಾರೆ. ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ಮನಸ್ಥಿತಿ ಯಾವುದು?" ಎಂದು ಎಬಿವಿಪಿಯ ವಿದ್ಯಾರ್ಥಿ ನಾಯಕರೊಬ್ಬರು  ಹೇಳಿರುವ ವಿಡಿಯೋ ತುಣುಕು ಕಾಣಿಸುತ್ತಿದೆ.

ಮತ್ತೊಬ್ಬ ಎಬಿವಿಪಿ ನಾಯಕ ಪ್ರಣವ್ ಕಾಂತ್ ಸಿಂಗ್, "ಪ್ರೊಫೆಸರ್ ಅವರನ್ನು ವಜಾಗೊಳಿಸಬೇಕೆಂದು ನಾವು ಬಯಸುತ್ತೇವೆ" ಎಂದು ಹೇಳಿದ್ದಾರೆ. "ಅಂತಹ ವ್ಯಕ್ತಿ ಸಮಾಜದಲ್ಲಿ ವಿಷ ಹರಡುತ್ತಾನೆ ಮತ್ತು ಅದಕ್ಕೆ ನಾವು ಖಂಡಿತಾ ಅವಕಾಶ ನೀಡುವುದಿಲ್ಲ" ಎಂದು ವಿದ್ಯಾರ್ಥಿ ನಾಯಕ ಹೇಳಿದ್ದಾರೆ.

ಲಕ್ನೋ ಪೊಲೀಸರು ಮತ್ತು ವಿಶ್ವವಿದ್ಯಾಲಯದ ಆಡಳಿತವು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರು ಮತ್ತು ಪ್ರಾಧ್ಯಾಪಕರನ್ನು ಪ್ರತ್ಯೇಕವಾಗಿ ಇರಿಸಿತು. ನಂತರ, ಅಧಿಕಾರಿಗಳು ಪ್ರಾಧ್ಯಾಪಕರು ಮತ್ತು ಎಬಿವಿಪಿ ವಿದ್ಯಾರ್ಥಿಗಳ ನಡುವೆ ಮಾತುಕತೆ ಆರಂಭಿಸಿದರು.

ಈ ಸುದ್ದಿಯನ್ನು ಓದಿದ್ದೀರಾ ? ದಾವಣಗೆರೆ | ಇದು ನಮ್ಮ ಸೌಹಾರ್ದ: ಈದ್ಗಾ ಮೈದಾನಕ್ಕೆ ಭೂಮಿ ದಾನ ಮಾಡಿದ ಹಿಂದುಗಳು

ಜ್ಞಾನವಾಪಿ ಮಸೀದಿ ವಿವಾದವೇನು?

ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಹಿಂಭಾಗದಲ್ಲಿರುವ ದೇಗುಲದಲ್ಲಿ ಹಿಂದೂ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ಅರ್ಜಿ ಸಲ್ಲಿಸಿರುವುದು ಉತ್ತರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಮಾ ಶೃಂಗಾರ್ ಗೌರಿಯ ಅನಿರ್ಬಂಧಿತ ಸ್ಥಳಕ್ಕೆ ಮಹಿಳೆಯರು ವರ್ಷಪೂರ್ತಿ ಪ್ರವೇಶ ಬಯಸುತ್ತಿದ್ದಾರೆ. ಈ ಸ್ಥಳವನ್ನು ವರ್ಷಕ್ಕೊಮ್ಮೆ ಆಚರಣೆಗಳು ಮತ್ತು ಪ್ರಾರ್ಥನೆಗಳಿಗಾಗಿ ತೆರೆಯಲಾಗುತ್ತದೆ. ಮಹಿಳೆಯರು ಹಳೆಯ ದೇವಾಲಯದ ಸಂಕೀರ್ಣದಲ್ಲಿ ಇತರ "ಗೋಚರ ಮತ್ತು ಅದೃಶ್ಯ ದೇವತೆಗಳಿಗೆ" ಪ್ರಾರ್ಥನೆ ಸಲ್ಲಿಸಲು ಅನುಮತಿ ಕೇಳಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ಎರಡೂ ಅಕ್ಕ ಪಕ್ಕದಲ್ಲಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್