ಹರ್ ಘರ್ ತಿರಂಗಾ ಅಭಿಯಾನ ಬಹಿಷ್ಕಾರಕ್ಕೆ ಕರೆ ನೀಡಿದ ವಿವಾದಾತ್ಮಕ ಯತಿ ನರಸಿಂಗಾನಂದ

  •  ಎಲ್ಲ ಹಿಂದೂಗಳ ಮನೆಯಲ್ಲಿ ಭಗವಾಧ್ವಜ ಇರಬೇಕೆಂದ ಯತಿ
  • ರಾಷ್ಟ್ರಧ್ವಜ ನಿರ್ಮಾಣ ಕಂಪನಿ ಮುಸ್ಲಿಮನೊಬ್ಬನ ಒಡೆತನದಲ್ಲಿದೆ

ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹರ್‍ಘರ್ ತಿರಂಗ ಅಭಿಯಾನವನ್ನು ಬಹಿಷ್ಕರಿಸಲು ವಿವಾದಾತ್ಮಕ ಯತಿ ನರಸಿಂಗಾನಂದ ಕರೆ ನೀಡಿದ್ದಾರೆ.

ರಾಷ್ಟ್ರಧ್ವಜ ತಯಾರಿಸುತ್ತಿರುವ ಪಶ್ಚಿಮ ಬಂಗಾಳದ ಕಂಪೆನಿಯು ಮುಸಲ್ಮಾನ ಉದ್ಯಮಿಯೊಬ್ಬನಿಗೆ ಸೇರಿದ್ದು. ಇದರ ಮಾಲಕ ಸಲಾಹುದ್ದೀನ್. ಆದುದರಿಂದ ಹಿಂದೂಗಳು ಯಾರೂ ತ್ರಿವರ್ಣ ಧ್ವಜವನ್ನು ಖರೀದಿಸಬಾರದೆಂದು ಯತಿ ಕರೆ ನೀಡಿದ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

"ಹಿಂದೂಗಳೊಂದಿಗೆ ಒಂದು ಮನವಿ ಇದೆ. ರಾಷ್ಟ್ರಧ್ವಜದ ಅಭಿಯಾನವೊಂದನ್ನು ದೇಶದ ಅತ್ಯಂತ ದೊಡ್ಡ ಪಾರ್ಟಿ ಮಾಡಿಸುತ್ತಿದೆ. ಒಂದು ಕಂಪೆನಿಗೆ ಬಹಳ ಹೆಚ್ಚು ಧ್ವಜಕ್ಕೆ ಆರ್ಡರ್ ನೀಡಲಾಗಿದೆ. ಸಲಾಹುದ್ದೀನ್ ಎಂಬ ಹೆಸರಿನ ಒಬ್ಬ ಮುಸ್ಲಿಂ ಅದರ ಮಾಲಕ. ಹಿಂದೂಗಳು ತಮ್ಮ ಮುಂಬರುವ ಪೀಳಿಗೆಯನ್ನು ಮುಸ್ಲಿಂ ಉಗ್ರಗಾಮಿಗಳಿಂದ ರಕ್ಷಿಸಲು ಬಯಸಿದರೆ ಅವರು ಬಿಜೆಪಿಯ ತ್ರಿವರ್ಣ ಅಭಿಯಾನವನ್ನು ಬಹಿಷ್ಕರಿಸಬೇಕು ಮತ್ತು ಮುಸ್ಲಿಮರು ಆರ್ಥಿಕವಾಗಿ ಲಾಭ ಪಡೆಯುವುದನ್ನು ತಡೆಯಬೇಕು ಎಂದು ಹೇಳಿರುವುದು ವಿಡಿಯೋದಲ್ಲಿದೆ.

ಈ ಧ್ವಜ ಅಭಿಯಾನವನ್ನು ಬಹಿಷ್ಕರಿಸಬೇಕು. ಮನೆಯಲ್ಲಿ ಧ್ವಜ ಕಟ್ಟಬೇಕಿದ್ದರೆ ಯಾವುದಾದರೂ ಹಳೆಯ ಎಲ್ಲಿಯಾದರೂ ಇದ್ದರೆ ತೆಗೆದು ಕಟ್ಟಿ. ಈ ರೀತಿ ಸಲಾಹುದ್ದೀನ್‍ಗೆ ಒಂದು ಪೈಸೆಯೂ ಸಿಗದಂತೆ ನೋಡಿಕೊಳ್ಳಿ. ಇದು ಈ ನಾಯಕರಿಗೆ ಒಂದು ಪಾಠ ಆಗಬೇಕು. ರಾಷ್ಟ್ರಧ್ವಜವನ್ನೇ ಬಹಿಷ್ಕರಿಸಬೇಕು. ಈ ಕೋಟಿಗಳೇ ನಿಮ್ಮನ್ನು ನಾಶಪಡಿಸಿದ್ದು. ಎಲ್ಲ ಹಿಂದುಗಳ ಮನೆಯಲ್ಲಿ ಭಗವಾಧ್ವಜ ಇರಬೇಕಾಗಿದೆ ಎಂದು ನರಸಿಂಗಾನಂದ ಹೇಳಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಪೊಲೀಸರು, ವಿಡಿಯೋವನ್ನು ಪರಿಶೀಲಿಸುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಡಿಯೋವನ್ನು ಈ ತಿಂಗಳ ಆರಂಭದಲ್ಲೇ ಬಿಡುಗಡೆ ಮಾಡಲಾಗಿತ್ತು. ಆದರೆ ಇದು ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದ ಮೂಲಕ ಬೆಳಕಿಗೆ ಬಂದಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

'ಪೊಲೀಸರು ಯತಿ ಅವರ ವಿಡಿಯೋವನ್ನು ಗಮನಿಸುತ್ತಿದ್ದಾರೆ. ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಾಝಿಯಾಬಾದ್‌ ಜಿಲ್ಲೆಯ ಗ್ರಾಮೀಣ ಎಸ್‌ಪಿ ಇರಾಜ್ ರಾಜಾ ಹೇಳಿರುವುದಾಗಿ ವರದಿಯಾಗಿದೆ.

ಸ್ವಾತಂತ್ರ್ಯದ 75ನೇ ವರ್ಷವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್ 13ರಿಂದ ಮತ್ತು 15ರವರೆಗೆ ಆಚರಿಸುವಂತೆ ದೇಶದ ಜನರಿಗೆ ಕರೆ ನೀಡಿತ್ತು.

ನಿಮಗೆ ಏನು ಅನ್ನಿಸ್ತು?
3 ವೋಟ್