ಬೆಂಗಳೂರು | ರಸ್ತೆ ಗುಂಡಿಗಳಿಂದ ಆಗುವ ಅನಾಹುತಗಳಿಗೆ ಪಾಲಿಕೆಯೇ ಪರಿಹಾರ ನೀಡಬೇಕು: ಹೈಕೋರ್ಟ್

bengaluru
  • 401 ಕಿಲೋ ಮೀಟರ್‌ ಉದ್ದದ ರಸ್ತೆ ಗುಂಡಿಗಳಿಂದ ಕೂಡಿದೆ
  • ಮೆಟ್ರೋ ಸೇರಿ ಇತರೆ ಸಂಸ್ಥೆಗಳೂ ರಸ್ತೆ ಹಾಳಾಗಲು ಕಾರಣ

"ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ವಾಹನ ಸವಾರರು ಅಪಘಾತಕ್ಕೀಡಾದರೆ ಪಾಲಿಕೆಯೇ ಪರಿಹಾರ ನೀಡಬೇಕು, ಅಧಿಕಾರಿಗಳೇ ಅದರ ಹೊಣೆ ಹೊರಬೇಕು" ಎಂದು ಹೈಕೋರ್ಟ್‌ ಮೌಖಿಕವಾಗಿ ಆದೇಶಿಸಿದೆ. 

ನಗರದ ರಸ್ತೆ ಗುಂಡಿಗಳ ದುಃಸ್ಥಿತಿ ಕುರಿತು 2015ರಲ್ಲಿ ಕೋರಮಂಗಲದ ವಿಜಯ್‌ ಮೆನನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಮತ್ತು ನ್ಯಾಯಮೂರ್ತಿ ಪಿ ಎಂ ನವಾಜ್‌ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. 

‌ಪಾಲಿಕೆ ಪರ ವಕೀಲ ವಿ ಶ್ರೀನಿಧಿ ಅವರು ನ್ಯಾಯಾಲಯಕ್ಕೆ ಮೆಮೋವೊಂದನ್ನು ಸಲ್ಲಿಸಿ, "ಜುಲೈ 27 ರಂದು ಪಡೆದಿರುವ ಮಾಹಿತಿಯಂತೆ ಬೆಂಗಳೂರಿನಲ್ಲಿ 108 ಪ್ರಮುಖ ರಸ್ತೆಗಳ ಒಟ್ಟು 401 ಕಿಲೋ ಮೀಟರ್‌ ಉದ್ದದ ರಸ್ತೆಯು ಗುಂಡಿಗಳಿಂದ ಕೂಡಿದೆ. 362 ಪ್ರಮುಖ ರಸ್ತೆಗಳ 943.74 ಕಿ ಮೀ ಉದ್ದದ ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ. ಪಾಲಿಕೆ ಗುಂಡಿಗಳನ್ನು ಮುಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದೆ" ಎಂದು ನ್ಯಾಯಪೀಠಕ್ಕೆ ವಿವರಿಸಿದರು. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮಳೆಗೆ ಹೈರಾಣಾದ ರಾಜಧಾನಿ ಜನತೆ: ಇನ್ನೂ ಎರಡು ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, " ರಸ್ತೆಗಳ ಗುಂಡಿ ಮುಚ್ಚುವುದೇ ನಿರಂತರ ಪ್ರಕ್ರಿಯೆ ಆಗಿದೆ. ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸದ ಹೊರತು ಈ ಸಮಸ್ಯೆ ಬಗೆಹರಿಯಲ್ಲ. ಕಾನೂನು ಪ್ರಕಾರ ಪಾಲಿಕೆಯೇ ಎಲ್ಲ ಜವಾಬ್ದಾರಿ ಹೊರಬೇಕು. ಇನ್ನು ಮುಂದೆ ರಸ್ತೆ ಗುಂಡಿಗಳಿಂದ ಜನರು ಗಾಯಗೊಂಡರೆ ಅವರಿಗೆ ಪಾಲಿಕೆಯೇ ಪರಿಹಾರ ನೀಡಬೇಕು. ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು. ಈ ಕುರಿತು ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಹೇಳಿತು. 

ಈ ವೇಳೆ ಪಾಲಿಕೆ ಪರ ವಕೀಲರು, "ಮೆಟ್ರೋ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳೂ ರಸ್ತೆ ಹಾಳಾಗಲು ಕಾರಣ. ಅವರ ಮೇಲೂ ಸಮಾನ ಹೊಣೆಗಾರಿಕೆ ಹೊರಿಸಬೇಕು" ಎಂದು ಒತ್ತಾಯಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್