ಅತ್ಯಾಚಾರ ಪ್ರಕರಣ | 10 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆ

  • ಆಗಸ್ಟ್‌ 13ರಂದು ಉತ್ತರ ಪ್ರದೇಶದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ
  • ಚಾರ್ಜ್‌ಶೀಟ್‌ ಸಲ್ಲಿಸಿದ 10 ದಿನಗಳಲ್ಲಿ ವಿಚಾರಣೆ ಪೂರ್ಣಗೊಂಡು ಶಿಕ್ಷೆ

ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದ ಆರೋಪಿಗೆ ಉತ್ತರ ಪ್ರದೇಶದ ಪ್ರತಾಪ್‌ಗಢ ಪೋಕ್ಸೋ ನ್ಯಾಯಾಲಯವು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ ಚಾರ್ಜ್‌ಶೀಟ್‌ ಸಲ್ಲಿಸಿದ ಹತ್ತು ದಿನಗಳಲ್ಲಿ ಅತ್ಯಾಚಾರ ಪ್ರಕರಣ ವಿಚಾರಣೆಯನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ.

ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ (ಪೋಕ್ಸೋ ಕಾಯ್ದೆ) ಪಂಕಜ್ ಕುಮಾರ್ ಶ್ರೀವಾಸ್ತವ ಅವರು ಅಪರಾಧಿ ಭೂಪೇಂದ್ರ ಎಂಬುವವನಿಗೆ ಜೀವಾವಧಿ ಶಿಕ್ಷೆ ಘೋಷಿಸಿ, ₹20,000 ದಂಡ ವಿಧಿಸಿದೆ.

ʻʻಆಗಸ್ಟ್ 13ರಂದು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿದ್ದೆವು. ತಕ್ಷಣವೇ ಪ್ರಕರಣದ ಬಗ್ಗೆ ಕಾರ್ಯಾಚರಣೆ ಆರಂಭಿಸಿದ್ದ ನಾವು ತಂಡಗಳನ್ನು ರಚಿಸಿ, ಮಾಹಿತಿದಾರರು ಮತ್ತು ಕಣ್ಗಾವಲು ಪಡೆ ಆಧರಿಸಿ ಭೂಪೇಂದ್ರನನ್ನು ಬಂಧಿಸಿದ್ದೆವುʼʼ ಎಂದು ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಪ್ರತಾಪ್‌ಗಢ ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಅಂತಿಲ್ ತಿಳಿಸಿದ್ದಾರೆ.

ʻʻಘಟನೆ ನಡೆದ ದಿನದಂದೇ ಬಾಲಕಿಯ ವೈದ್ಯಕೀಯ ಪರೀಕ್ಷೆ, ವಿಧಿವಿಜ್ಞಾನ ಪರೀಕ್ಷೆ ಸೇರಿದಂತೆ ನಾನಾ ಬಗೆಯ ಪರೀಕ್ಷೆಗಳನ್ನು ನಡೆಸಿ, ಎಲ್ಲ ಪ್ರಮುಖ ಸಾಕ್ಷ್ಯಾಗಳನ್ನು ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲಾಯಿತು. ನಂತರ ನಿಗದಿತ ಸಮಯದ ಚೌಕಟ್ಟಿನೊಳಗೆ, ಪ್ರಯೋಗಾಲಯದ ಫಲಿತಾಂಶಗಳನ್ನು ಪರಿಶೀಲನೆ ನಡೆಸಲಾಯಿತುʼʼ ಎಂದು ಹೇಳಿದ್ದಾರೆ.

ʻʻವಿಧಿವಿಜ್ಞಾನ ತನಿಖೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ನಂತರ, ಸೆಪ್ಟೆಂಬರ್ 3ರಂದು ಅತ್ಯಾಚಾರ, ಅಪಹರಣ ಹಾಗೂ ಮಹಿಳೆಯ ಮದುವೆಗೆ ಒತ್ತಾಯಿಸುವ ನಿಟ್ಟಿನಲ್ಲಿ ಅಪಹರಣ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) 2012ರ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ನ್ಯಾಯಾಲಯವು ಸೆಪ್ಟೆಂಬರ್ 12ರಂದು ಪ್ರಕರಣದ ವಿಚಾರಣೆ ಪ್ರಾರಂಭಿಸಿತುʼʼ ಎಂದು ಅಧಿಕಾರಿ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಒಬ್ಬ ವ್ಯಕ್ತಿ ಒಂದು ಹುದ್ದೆ | ದೆಹಲಿಗೆ ಗೆಹ್ಲೋಟ್, ಮುಖ್ಯಮಂತ್ರಿ ಸ್ಥಾನಕ್ಕೆ ಪೈಲಟ್; ರಾಹುಲ್‌ ಸಂದೇಶ ಸಾರುವುದೇನು?

"ನಾವು ನಡೆಸಿದ ಎಲ್ಲ ಪರೀಕ್ಷೆಗಳಲ್ಲಿ ಎಂಟು ಸಾಕ್ಷಿಗಳನ್ನು ಪಡೆದುಕೊಂಡಿದ್ದೆವು. ಸೆಪ್ಟೆಂಬರ್ 17ರಂದು ಆರೋಪಿ ಭೂಪೇಂದ್ರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಸೆಪ್ಟೆಂಬರ್ 21ರಂದು ಅವರ ವಿರುದ್ಧ ಆರೋಪಗಳನ್ನು ರೂಪಿಸಿ ಗುರುವಾರ ತೀರ್ಪು ಪ್ರಕಟಿಸಿದೆʼʼ ಎಂದರು.

ಸೆಪ್ಟೆಂಬರ್ 17ರಂದು ಆರೋಪಿಯು ನ್ಯಾಯಾಲಯದಲ್ಲಿ ತನ್ನ ಹೇಳಿಕೆ ದಾಖಲಿಸಲು ಹಾಜರಾದಾಗ, ತಾನು ಅಪ್ರಾಪ್ತ ಎಂದಿದ್ದ. ಅದನ್ನು ಸಾಬೀತುಪಡಿಸಲು ಶೈಕ್ಷಣಿಕ ಪ್ರಮಾಣಪತ್ರ ನೀಡಿದ್ದʼʼ ಎಂದು ಸಂತ್ರಸ್ತೆಯ ಪರವಾಗಿ ವಾದಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ದೇವೇಶ್ ಚಂದ್ರ ತ್ರಿಪಾಠಿ ತಿಳಿಸಿರುವುದಾಗಿ 'ಟೈಮ್ಸ್‌ ಆಫ್‌ ಇಂಡಿಯಾ' ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಆದರೆ ತನಿಖೆಯ ಸಮಯದಲ್ಲಿ, ಆ ಪ್ರಮಾಣಪತ್ರವು ನಕಲಿ ದಾಖಲೆ ಎಂದು ಕಂಡುಬಂದಿದೆ" ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180