- ಉತ್ತರ ಪ್ರದೇಶದ ಸಚಿವ ಜಿತಿನ್ ತಿರುಗೇಟು
- ನೆಟ್ಟಿಗರಿಂದ ಟೀಕೆಗೆ ಗುರಿಯಾದ ಸುಬ್ರಮಣಿಯನ್
ತಮಿಳುನಾಡಿನಲ್ಲಿ ಹಠಾತ್ ಕೋವಿಡ್ ಹೆಚ್ಚಳಕ್ಕೆ ಉತ್ತರ ಭಾರತದಿಂದ ಬರುವ ವಿದ್ಯಾರ್ಥಿಗಳೇ ಕಾರಣ ಎಂದು ಆರೋಗ್ಯ ಸಚಿವ ಮ ಸುಬ್ರಮಣಿಯನ್ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಆತಂಕಕಾರಿ ಪರಿಸ್ಥಿತಿ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
"ಪರೀಕ್ಷೆಗೆ ಒಳಪಟ್ಟ ಶೇ. 91ರಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಡಪಟ್ಟಿದೆ. ಅವರಲ್ಲಿ ಒಮಿಕ್ರಾನ್ ಬಿಎ2 ಸೋಂಕು ಪತ್ತೆಯಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಅವರು ತಿಳಿಸಿದ್ದಾರೆ.
ಉತ್ತರ ಭಾರತದ ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎನ್ನುವ ಅವರ ಹೇಳಿಕೆಯು ಟೀಕೆಗೆ ಗುರಿಯಾಗಿದೆ.
ಸಚಿವ ಸುಬ್ರಮಣಿಯನ್ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಮಲೈ, “ಡಿಎಂಕೆ ಸರ್ಕಾರದ ಸಚಿವರು ತಮ್ಮಲ್ಲಿ ಯಾರಿಗೆ ಬುದ್ದಿ ಕಡಿಮೆ ಇದೆ ಎಂದು ತೋರಿಸಲು ಪೈಪೋಟಿ ನಡೆಸುತ್ತಿದ್ದಾರೆ. ಅವರು ತಮ್ಮ ಮೂರ್ಖತನದಿಂದ ರಾಜ್ಯದ ಜನರನ್ನು ನಿರಾಸೆಗೊಳಿಸುತ್ತಿದ್ದು, ಇದು ಬೇಸರದ ಸಂಗತಿ” ಎಂದು ಟ್ವೀಟ್ ಮಾಡಿದ್ದಾರೆ.
Ministers from our state in DMK Govt compete among themselves on a daily basis to show, ‘who has got lesser brains among them’.
— K.Annamalai (@annamalai_k) June 1, 2022
Sadly they are letting Tamil people down by their idiocy! https://t.co/74Y9eL0mah
“ಸಾಂಕ್ರಮಿಕ ರೋಗಗಳಿಗೆ ಯಾವುದೇ ಗಡಿಯ ಬಗ್ಗೆ ತಿಳಿದಿಲ್ಲ. ತಮಿಳುನಾಡಿನ ಆರೋಗ್ಯ ಮಂತ್ರಿಯ ಹೇಳಿಕೆ ಅತ್ಯಂತ ಬೇಜಾವಬ್ದಾರಿ ಮತ್ತು ಅವಹೇಳನಕಾರಿಯಾಗಿದೆ. ಅವರು ಉತ್ತರ ಭಾರತದವರನ್ನು ಅವಮಾನಿಸಿದ್ದಾರೆ” ಎಂದು ಉತ್ತರ ಪ್ರದೇಶದ ಬಿಜೆಪಿ ಸಚಿವ ಜಿತಿನ್ ಪ್ರಸಾದ ಹೇಳೀದ್ದಾರೆ.
“ಕೊರೊನಾ ವೈರಸ್ ಪ್ರಕರಣ ಕಡಿಮೆ ಮಾಡಲು ರಾಜ್ಯ ಸರ್ಕಾರವು ಸೂಕ್ತ ಕ್ರಮಗಳನ್ನು ಅನುಸರಿಸುತ್ತಿದೆ. ಆದರೂ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ನೆರೆಯ ಕೇರಳದಂತಹ ರಾಜ್ಯಗಳಿಂದ ಸೋಂಕು ಹೆಚ್ಚುತ್ತಿದೆ” ಎಂದು ಆರೋಗ್ಯ ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಸೋಂಕು ಹೆಚ್ಚುತ್ತಿರುವ ಉತ್ತರ ಭಾರತದ ರಾಜ್ಯಗಳಿಂದ ತಮಿಳುನಾಡಿನ ಹಾಸ್ಟೆಲ್ಗಳಿಗೆ ಬರುವ ವಿದ್ಯಾರ್ಥಿಗಳಿಂದ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಸೋಂಕು ಹರಡುತ್ತಿದೆ" ಎಂದು ಸುಬ್ರಮಣಿಯನ್ ಹೇಳಿದ್ದಾರೆ.
ಕಳೆದ ಮೂರು ತಿಂಗಳಿಂದ ಕೊವೀಡ್ನಿಂದಾಗಿ ಸಂಭವಿಸದ ಸಾವು-ನೋವುಗಳ ಸಂಖ್ಯೆ 100 ಕ್ಕಿಂತ ಕಡಿಮೆ ಇದೆ ಎಂದು ಸುಬ್ರಮಣಿಯನ್ ಹೇಳಿದರು.
“ಚೆನ್ನೈನ ಸತ್ಯಸಾಯಿ ಕಾಲೇಜಿನಲ್ಲಿ 237 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇದೀಗ, 74ಕ್ಕೆ ಇಳಿಕೆಯಾಗಿದೆ. ಅಣ್ಣಾ ವಿಶ್ವವಿದ್ಯಾಲಯದಲ್ಲಿ ಈಗ 23 ಪ್ರಕರಣಗಳು ದಾಖಲಾಗಿವೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ ? ಪಠ್ಯಪುಸ್ತಕ ವಿವಾದ| ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ರಮೇಶ್ ಕುಮಾರ್ ಆಗ್ರಹ
ಕೆಲಂಬಕ್ಕಂನ ವಿಐಟಿ ಕಾಲೇಜಿನಲ್ಲಿ ಪರೀಕ್ಷೆ ಮಾಡಲಾದ 4,192 ವಿದ್ಯಾರ್ಥಿಗಳ ಪೈಕಿ 163 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಡಪಟ್ಟಿದೆ. ಇನ್ನು 1,500 ವಿದ್ಯಾರ್ಥಿಗಳು ಪರೀಕ್ಷೆಗೆ ಒಳಪಡಬೇಕಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅರೋಗ್ಯ ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಕೆಲಂಬಕ್ಕಂನ ವಿಐಟಿ ಕಾಲೇಜಿನ ಪ್ರಥಮ ವರ್ಷದಲ್ಲಿ 5,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಸತಿ ನಿಲಯದಲ್ಲಿ ಇರುವವರ ಪೈಕಿ ಶೇ. 80ರಷ್ಟು ವಿದ್ಯಾರ್ಥಿಗಳು ಉತ್ತರ ಭಾರತದವರಿದ್ದಾರೆ. ಪರೀಕ್ಷೆಗೆ ಒಳಪಟ್ಟ ಶೇ. 91 ರಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ ದೃಡಪಟ್ಟಿದ್ದು, ಅವರಲ್ಲಿ ಬಿಎ2 ಸೋಂಕು ಪತ್ತೆಯಾಗಿದೆ.
ಕೇರಳ ಮತ್ತು ಮಹಾರಾಷ್ಟ್ರದಂತೆಯೇ ರಾಜ್ಯದಲ್ಲಿಯೂ ಸಹ ಕಳೆದ 24 ಗಂಟೆಯಲ್ಲಿ 500 ರಿಂದ 1,000 ಪ್ರಕರಣಗಳು ದಾಖಲಾಗಿವೆ. “ತಮಿಳುನಾಡಿನ ಜನರು ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಲಸಿಕೆ ಹಾಕಿಸಿಕೊಳ್ಳದವರು ಲಸಿಕೆ ಹಾಕಿಸಿಕೊಳ್ಳಬೇಕು” ಎಂದು ಮನವಿ ಸಚಿವರು ಮನವಿ ಮಾಡಿದ್ದಾರೆ.