ಕ್ರಿಕೆಟ್‌ನಲ್ಲಿ ಸಮಾನ ವೇತನ | ಕ್ರಮಿಸಬೇಕಾದ ಹಾದಿ ಇನ್ನೂ ಇದೆ: ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ

ಸುಮಾರು ನಾಲ್ಕೈದು ದಶಕಗಳ ಮಹಿಳಾ ಕ್ರಿಕೆಟಿಗರ ಹೋರಾಟಕ್ಕಿಂದು ಮೈಲಿಗಲ್ಲು ದೊರೆತಿದೆ. ಬಿಸಿಸಿಐ ತನ್ನ ಐತಿಹಾಸಿಕ ನಿರ್ಧಾರದಲ್ಲಿ ಪುರುಷ ಆಟಗಾರರಿಗೆ ನೀಡುವಷ್ಟೇ ಸಮಾನ ವೇತನವನ್ನು ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೂ ನೀಡಲು ನಿರ್ಧರಿಸಿದೆ. ಈ ಐತಿಹಾಸಿಕ ನಿರ್ಧಾರದ ಬಗ್ಗೆ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿದ್ದ ಆಟಗಾರ್ತಿ ಶಾಂತಾ ರಂಗಸ್ವಾಮಿ, ಚಂದ್ರಮೌಳಿ ಕಣವಿ ಹಾಗೂ ಹಿರಿಯ ಕ್ರೀಡಾ ವರದಿಗಾರ ಸುನೀಲ್‌ ಶಿರಸಂಗಿ ಮಾತನಾಡಿದ್ದಾರೆ.

ಸತತ ನಾಲ್ಕೈದು ವರ್ಷಗಳ ಭಾರತದ ಮಹಿಳಾ ಕ್ರಿಕೆಟಿಗರ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಐತಿಹಾಸಿಕ ನಿರ್ಧಾರವೊಂದರಲ್ಲಿ ಬಿಸಿಸಿಐ, ಪುರುಷ ಆಟಗಾರರಿಗೆ ನೀಡುವಷ್ಟೇ ಸಮಾನ ವೇತನವನ್ನು ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೂ ನೀಡಲು ನಿರ್ಧರಿಸಿದೆ. ‘ಪೇ ಇಕ್ವಿಟಿ ಪಾಲಿಸಿ’ಯನ್ನು ಪ್ರಕಟಿಸಿರುವ ಬಿಸಿಸಿಐ, ಆ ಮೂಲಕ ಟೀಮ್‌ ಇಂಡಿಯಾದ ಪುರುಷ ಆಟಗಾರರು ಪ್ರತಿ ಪಂದ್ಯಕ್ಕೆ ಪಡೆಯುವ ಭಾರೀ ಮೊತ್ತವನ್ನೇ, ಇನ್ಮುಂದೆ ಭಾರತದ ಮಹಿಳಾ ಕ್ರಿಕೆಟಿಗರಿಗೂ ನೀಡಲು ಮುಂದಾಗಿದೆ. ಆದರೆ, ಈ ನಿರ್ಧಾರ ಮತ್ತು ಅದರ ಹಿಂದಿನ ಹೋರಾಟ ಮಾತ್ರ ಅಷ್ಟು ಸುಲಭದ್ದಾಗಿರಲಿಲ್ಲ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ ಎನ್ನುವುದು ವಾಸ್ತವ.

ಕ್ರಿಕೆಟ್‌ ಭಾರತೀಯರ ನೆಚ್ಚಿನ ಕ್ರೀಡೆಯಾಗಿದ್ದರೂ, ಮಹಿಳಾ ಕ್ರಿಕೆಟ್‌ ವಿಷಯಕ್ಕೆ ಬಂದರೆ ವಾಸ್ತವವೇ ಬೇರೆ. ಆರಂಭದ ದಿನಗಳಿಂದಲೂ ಮಹಿಳಾ ಕ್ರಿಕೆಟ್‌ಗೆ ಸಿಗಬೇಕಾದ ನೆರವು, ಪ್ರೋತ್ಸಾಹ ದಕ್ಕಿದ್ದು ಕಡಿಮೆಯೇ. ಇತ್ತೀಚೆಗೆ ಬಿಡುಗಡೆಯಾದ ʻಶಭಾಷ್‌ ಮಿಥಾಲಿʼ ಸಿನಿಮಾ ಕ್ರಿಕೆಟ್‌ ಕ್ಷೇತ್ರದಲ್ಲಿ ಮಿಥಾಲಿಯ ಸಾಧನೆಯ ಜೊತೆ ಜೊತೆಗೆ ಮಹಿಳಾ ಆಟಗಾರ್ತಿಯರು ಎದುರಿಸಿದ ಹಲವಾರು ಸವಾಲುಗಳ ಬಗ್ಗೆಯೂ ಸಾಕಷ್ಟು ಬೆಳಕು ಚೆಲ್ಲಲಾಗಿತ್ತು.

Eedina App

ಪುರುಷ ಕ್ರಿಕೆಟ್‌ನಂತೆಯೇ ಉತ್ತಮವಾಗಿ ಆಡುತ್ತಿದ್ದರೂ, ಪುರುಷರಿಗಿದ್ದಷ್ಟು ಮನ್ನಣೆ ಮಹಿಳಾ ಕ್ರಿಕೆಟಿಗರಿಗೆ ಇಲ್ಲದೇ ಇದ್ದದ್ದು, ಮೂಲಭೂತ ಸೌಕರ್ಯಗಳ ಕೊರತೆ, ಭಾರತ ಹೆಸರಿನ ಜರ್ಸಿಯೂ ಇಲ್ಲದೇ ಆಡುತ್ತಿದ್ದದ್ದು ಇವೆಲ್ಲವನ್ನು ʻಶಭಾಷ್‌ ಮಿಥಾಲಿʼ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಲಾಗಿದೆ. ಅದರಲ್ಲಿ ಕೆಲವು ದೃಶ್ಯಗಳು ಸಿನಿಮೀಯ ಅಂತೆನಿಸಬಹುದು. ಆದರೆ, ಮಹಿಳಾ ಕ್ರಿಕೆಟಿಗರು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಲು, ಪುರುಷ ಆಟಗಾರರಂತೆ ತಾವು ಇರುವುದನ್ನು ಸಾಬೀತು ಮಾಡಲು ಸುಮಾರು ನಾಲ್ಕೈದು ದಶಕಗಳೇ ಬೇಕಾಯಿತು ಎಂಬುದು ವಾಸ್ತವ.  ʻಶಬ್ಬಾಷ್‌ ಮಿಥಾಲಿʼ ಕೂಡ ಅದನ್ನೇ ಧ್ವನಿಸಿತ್ತು.

ಮಹಿಳೆಯರ ಸಂಭಾವನೆ ಎಷ್ಟು ಏರಿಕೆಯಾಗಿದೆ ಗೊತ್ತಾ?

AV Eye Hospital ad

ಬಿಸಿಸಿಐ ಹೊಸ ನೀತಿಯ ಪ್ರಕಾರ, ಭಾರತೀಯ ಮಹಿಳಾ ಕ್ರಿಕೆಟಿಗರು ಮುಂದಿನ ದಿನಗಳಲ್ಲಿ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ. ಇದು ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಐತಿಹಾಸಿಕ ಹೆಜ್ಜೆ ಎಂದರೆ ತಪ್ಪೇನಿಲ್ಲ.

ಹರ್ಮನ್‌ ಪ್ರೀತ್‌ ಕೌರ್‌

ನಿರ್ಧಾರ ಮಹತ್ತರವಾದುದು; ಕ್ರಮಿಸಬೇಕಾದ ಹಾದಿ ಇನ್ನೂ ಇದೆ: ಶಾಂತಾ ರಂಗಸ್ವಾಮಿ

ಬಿಸಿಸಿಐಯ ‘ಪೇ ಇಕ್ವಿಟಿ ಪಾಲಿಸಿ’ ನಿರ್ಧಾರದ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಭಾರತದ ಮಾಜಿ ಮಹಿಳಾ ಕ್ರಿಕೆಟ್‌ ಆಟಗಾರ್ತಿ, ಕನ್ನಡತಿ ಶಾಂತಾ ರಂಗಸ್ವಾಮಿ, ʻʻಇದೊಂದು ಅದ್ಭುತವಾದ, ವಿಶೇಷವಾದ ಹಾಗೂ ಸಂತೋಷದ ವಿಷಯ. ನಮ್ಮ ದೇಶದಲ್ಲಿ ಮಹಿಳಾ ಕ್ರಿಕೆಟ್‌ ಆರಂಭವಾಗುವ 50-60 ವರ್ಷಗಳ ಮೊದಲೇ ಆಸ್ಟ್ರೇಲಿಯಾ ಇಂಗ್ಲೆಂಡ್‌ನಲ್ಲಿ ಮಹಿಳೆಯರು ಕ್ರಿಕೆಟ್‌ ಆಡುತ್ತಿದ್ದರು. ಆ ಎಲ್ಲ ದೇಶಗಳಲ್ಲೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಹಲವು ವರ್ಷಗಳೇ ಬೇಕಾಯಿತು. ಅಭಿವೃದ್ಧಿಶೀಲ ದೇಶವಾದ ಭಾರತ ಸಮಾನ ವೇತನದ ಬಗ್ಗೆ ಮಹತ್ತರ ನಿರ್ಧಾರ ತೆಗೆದುಕೊಂಡಿರುವುದು ಐತಿಹಾಸಿಕ ನಡೆʼʼ ಎಂದು ಸಂತಸ ವ್ಯಕ್ತಪಡಿಸಿದರು.

Mithali-Raj-Shantha-Rangaswamy
ಮಿಥಾಲಿ ರಾಜ್ ಮತ್ತು ಶಾಂತಾ ರಂಗಸ್ವಾಮಿ

ʻʻಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುವುದಾಗಿ ಬಿಸಿಸಿಐ ನಿರ್ಣಯ ತೆಗೆದುಕೊಂಡ ಸಭೆಯಲ್ಲಿ ನಾನು ಇದ್ದೆ ಎಂಬುದು ಹೆಮ್ಮೆಯ ವಿಷಯ. ಬಿಸಿಸಿಐನಲ್ಲಿ ಇದು ನನ್ನ ಕೊನೆಯ ಸಭೆ. ಈ ನಿರ್ಧಾರ ಮಹತ್ತರವಾದದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಕ್ರಮಿಸಬೇಕಾದ ಹಾದಿ ಇನ್ನೂ ಇದೆ. ಸಮಯ ಕಳೆಯುತ್ತಿದ್ದಂತೆ ಒಂದೊಂದೆ ಸಮಾನತೆಯ ನಿರ್ಧಾರಗಳು ಜಾರಿಯಾಗುತ್ತವೆ ಎಂಬ ನಂಬಿಕೆ ನನಗಿದೆʼʼ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ : ಬಿಸಿಸಿಐ ಐತಿಹಾಸಿಕ ನಿರ್ಧಾರ

1973-94ರ ಅವಧಿಯಲ್ಲಿ ಭಾರತದ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಆಡಿರುವ ಶಾಂತಾ ರಂಗಸ್ವಾಮಿ, ಭಾರತದ ಮಹಿಳಾ ಟೆಸ್ಟ್‌ ಕ್ರಿಕೆಟ್‌ ತಂಡದ ಮೊದಲ ನಾಯಕಿ. ಅರ್ಜುನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದವರು. ಬಿಸಿಸಿಐನಿಂದ 'ಜೀವಮಾನ ಸಾಧನೆ ಪ್ರಶಸ್ತಿ' ಪಡೆದ ಮೊದಲ ಮಹಿಳಾ ಆಟಗಾರ್ತಿಯೂ ಹೌದು.

ಭಾರತದ ಪರವಾಗಿ ಆಡುತ್ತಿದ್ದ ಸಮಯದಲ್ಲಿ ತಾವು ಹಾಗೂ ಇಡೀ ತಂಡ ಎದುರಿಸಿದ ಸವಾಲುಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, "1973-94ರವರೆಗೆ ನಾವು ಆಡುತ್ತಿದ್ದಾಗ ನಮಗೆ ಸರಿಯಾಗಿ ವೇತನವೇ ಸಿಗುತ್ತಿರಲಿಲ್ಲ. ನಮ್ಮ ಕೈಯಿಂದ ಹಣ ಹಾಕಿ ಆಟ ಆಡುತ್ತಿದ್ದೆವು. ಹಾಗೆಂದು ಅಂದಿನ ದಿನಗಳಲ್ಲಿ ನಾವು ಎದುರಿಸಿದ ಸವಾಲುಗಳ ಬಗ್ಗೆ ಯೋಚಿಸಿ, ಕೊರಗುವುದರಲ್ಲಿ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟಿಗೆ ಸಿಗುವ ಪ್ರೋತ್ಸಾಹವನ್ನು ನಾವು ನೋಡಿ ಮೆಚ್ಚಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್‌ಗಿರುವ ಅಂತರ ತುಂಬಾ ಕಡಿಮೆಯಾಗುತ್ತದೆ. ಪುರುಷರಷ್ಟೇ ಸಮಾನ ಅವಕಾಶಗಳು, ಮಾನ್ಯತೆ ಮಹಿಳಾ ಕ್ರಿಕೆಟಿಗರಿಗೂ ಸಿಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲʼ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಐತಿಹಾಸಿಕ ನಿರ್ಧಾರ ಬೇರೆ ಕ್ರೀಡೆಗಳನ್ನು ಉತ್ತೇಜಿಸುವಂತಾಗಲಿ

ಬಿಸಿಸಿಐನ ಐತಿಹಾಸಿಕ ನಿರ್ಧಾರದ ಬಗ್ಗೆ ಈದಿನ.ಕಾಮ್‌ ನೊಂದಿಗೆ ಮಾತನಾಡಿದ ಹಿರಿಯ ಕ್ರೀಡಾ ವರದಿಗಾರ ಸುನೀಲ್‌ ಶಿರಸಂಗಿ, "ಬಿಸಿಸಿಐ ಇಂತಹ ಪ್ರಗತಿಪರ ನಿರ್ಧಾರಗಳಿಗೆ ಮೊದಲಿನಿಂದಲೂ ಹೆಸರಾಗಿದೆ. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅಕ್ಟೋಬರ್‌ 27 ಐತಿಹಾಸಿಕ ದಿನ. ಮಹಿಳಾ ಕ್ರಿಕೆಟಿಗರಲ್ಲಿ ಸಮಾನ ವೇತನದ ಕೂಗು ಬಹಳ ದಿನದಿಂದಲೂ ಇತ್ತು. ಅದಕ್ಕಿಂದು ಮಾನ್ಯತೆ ದೊರೆತಿದೆ. ಇಂತಹ ಮಹತ್ತರ ನಿರ್ಧಾರಗಳು ಬೇರೆ ಕ್ರೀಡೆಗಳಿಗೂ ದೊರೆಯುವಂತಾಗಬೇಕು. ಬಿಸಿಸಿಐ ತನ್ನಲ್ಲಿರುವ ಆರ್ಥಿಕ ಬಲವನ್ನು ಬಳಸಿ, ಬೇರೆ ಕ್ರೀಡೆಗಳನ್ನು ಬೆಂಬಲಿಸಬೇಕು. ಸರ್ಕಾರ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಈ ನಿಟ್ಟಿನಲ್ಲಿ ಉಳಿದ ಕ್ರೀಡೆಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು. ಆಗ ಎಲ್ಲ ಕ್ರೀಡೆಗಳಿಗೆ ಸಮಾನ ಸ್ಥಾನಮಾನ ಅವಕಾಶ ದೊರೆಯುವಂತಾಗುತ್ತದೆ. ಬಿಸಿಸಿಐನ ಇಂದಿನ ನಿರ್ಧಾರ ಐತಿಹಾಸಿಕ. ಈ ಮೂಲಕ ಬಿಸಿಸಿಐ ಬೇರೆ ಕ್ರೀಡಾ ಮಂಡಳಿಗಳಿಗೂ ಮಾದರಿಯಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ಇದು ಮಹಿಳಾ ಕ್ರಿಕೆಟಿಗರ ಸತತ ಹೋರಾಟಕ್ಕೆ ಸಂದ ಜಯ

ಮಹಿಳಾ ಕ್ರಿಕೆಟಿಗರ ಇತಿಹಾಸ, ಸಮಾನ ವೇತನದ ಹೋರಾಟದ ಬಗ್ಗೆ ಕ್ರೀಡಾ ಕಮೆಂಟೇಟರ್‌, ಮಾಜಿ ಕ್ರಿಕೆಟಿಗ ಚಂದ್ರಮೌಳಿ ಕಣವಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ʻʻಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ; ಇದೊಂದು ಅತ್ಯುತ್ತಮ ಬೆಳವಣಿಗೆ. ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್‌ನಂತಹ ದೇಶಗಳಲ್ಲಿ ಪುರುಷರ ಕ್ರಿಕೆಟ್‌ ಮಂಡಳಿಯೊಂದಿಗೆ, ಮಹಿಳಾ ಕ್ರಿಕೆಟ್‌ ಮಂಡಳಿಯನ್ನೂ ವಿಲೀನಗೊಳಿಸಿ ಜೊತೆಯಾಗಿ ಆಡುತ್ತಿದ್ದರು. ಆದ್ದರಿಂದಲೇ ಆ ದೇಶಗಳಲ್ಲಿ ಮಹಿಳಾ ಕ್ರಿಕೆಟ್‌ ಆಟಗಾರರಿಗೆ ಹೆಚ್ಚೆಚ್ಚು ಪ್ರೋತ್ಸಾಹ ಸಿಗುತ್ತಿತ್ತು. ಆದರೆ, ಭಾರತದಲ್ಲಿ 2006-07ರ ವರೆಗೆ ಬಿಸಿಸಿಐ ಮತ್ತು ಭಾರತೀಯ ಮಹಿಳಾ ಕ್ರಿಕೆಟ್‌ ಅಸೋಸಿಯೇಷನ್‌ ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸುತ್ತಿತ್ತು. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಆರಂಭದ ದಿನಗಳಲ್ಲಿ ಪ್ರೋತ್ಸಾಹ ಸಿಗದಿರಲೂ ಸಹ ಇದೇ ಕಾರಣ. ಆದರೆ, ಮಹಿಳಾ ಕ್ರಿಕೆಟ್‌ ಬಿಸಿಸಿಐ ಜೊತೆಗೆ ವಿಲೀನವಾದ ಈ 15 ವರ್ಷಗಳಲ್ಲೇ ಬಿಸಿಸಿಐ ಇಂತಹ ಅಪರೂಪದ ನಿರ್ಧಾರವನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡು-ಮೂರು ದಶಕಗಳ ಹಿಂದಿನ ಮಹಿಳಾ ಕ್ರಿಕೆಟ್‌ ಬಗ್ಗೆ ಮತ್ತೂ ಕೆಲವು ಪ್ರಸಂಗಗಳನ್ನು ಹಂಚಿಕೊಂಡ ಚಂದ್ರಮೌಳಿ ಕಣವಿ, "ಭಾರತೀಯ ಮಹಿಳಾ ಕ್ರಿಕೆಟ್‌ ಹೀಗೆ ಬಿಸಿಸಿಐ ಜೊತೆಗೆ ವಿಲೀನಗೊಳ್ಳುವ ಮೊದಲು ಮಹಿಳಾ ಕ್ರಿಕೆಟಿಗರು ಕ್ರೀಡಾಂಗಣಗಳಿಗೆ ಪ್ರಯಾಣ, ಪಂದ್ಯಗಳನ್ನು ವ್ಯವಸ್ಥೆ ಮಾಡುವುದು, ಊಟ, ಸೂಕ್ತ ಶೌಚ ವ್ಯವಸ್ಥೆ, ಕ್ರೀಡಾಂಗಣಗಳಲ್ಲಿ ಉಳಿಯುವ ವ್ಯವಸ್ಥೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಾಂತಾ ರಂಗಸ್ವಾಮಿ, ಡಯಾನಾ ಎಡುಲ್ಜಿ ಅವರ ಕಾಲದಲ್ಲಂತೂ ಕೈಯಿಂದ ಹಣ ಖರ್ಚು ಮಾಡಿ ಆಟವಾಡುತ್ತಿದ್ದರು" ಎಂದರು.

"ತದನಂತರ ಐಸಿಸಿ ಮಧ್ಯಸ್ಥಿಕೆ ವಹಿಸಿ ಎಲ್ಲ ದೇಶಗಳು ಮಹಿಳಾ ಕ್ರಿಕೆಟ್‌ ಮಂಡಳಿಯನ್ನೂ ಪುರುಷ ಮಂಡಳಿಗಳ ಜೊತೆಗೆ ವಿಲೀನಗೊಳಿಸಬೇಕು ಎಂದು ಆದೇಶಿಸಿದ ನಂತರ ಬಿಸಿಸಿಐ ಎಚ್ಚೆತ್ತುಕೊಂಡಿತ್ತು. ಆ ನಂತರ, ಮಹಿಳಾ ಕ್ರಿಕೆಟ್‌ ತಂಡಕ್ಕೆ ಪ್ರೋತ್ಸಾಹ ಸಿಗಲು ಆರಂಭಿಸಿತು. ಪ್ರಸ್ತುತ ಬಿಸಿಸಿಐನ ನಿರ್ಧಾರ ಐತಿಹಾಸಿಕ ನಡೆ. ಮುಂದಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲಿʼʼ ಎಂದವರು ಆಶಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app