ಸಿಯುಇಟಿ | 3ನೇ ಹಂತದ 'ಹಾಲ್ ಟಿಕೆಟ್' ಬಿಡುಗಡೆ; ಇನ್ನೂ ಮುಗಿಯದ 2ನೇ ಹಂತದ ಪರೀಕ್ಷೆಯ ದಿನಾಂಕ ಗೊಂದಲ

  • ತಾಂತ್ರಿಕ ದೋಷದಿಂದ ಆಗಸ್ಟ್ 4, 5, ಹಾಗೂ 6ರ ಪರೀಕ್ಷೆಗಳು ರದ್ದು
  • ಪರೀಕ್ಷೆಗೆ ಮೂರು ದಿನ ಮುನ್ನಾ ಪ್ರವೇಶ ಪತ್ರ ಬಿಡುಗಡೆ ಮಾಡಲು ನಿರ್ಧಾರ

ಮೂರನೇ ಹಂತದ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಯು (ಸಿಯುಇಟಿ-ಯುಜಿ) ಆಗಸ್ಟ್ 17ರಿಂದ ಪ್ರಾರಂಭವಾಗಲಿದೆ. ಈ ವೇಳೆ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಆಗಸ್ಟ್ 13ರಂದು ಪ್ರವೇಶ ಪತ್ರಗಳನ್ನು ನೀಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.

"ಆಗಸ್ಟ್ 17ರಿಂದ ಆಗಸ್ಟ್ 20ರವರೆಗೆ ನಡೆಯುವ ಮೂರನೇ ಹಂತದ ಪರೀಕ್ಷೆಗಳಲ್ಲಿ ಬದಲಾವಣೆ ಆಗಿವೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಆಗಸ್ಟ್ 13ರಂದು ಪಡೆಯಬಹುದು" ಎಂದು ಎನ್‌ಟಿಎ ಅಧಿಕಾರಿಯೋರ್ವರು ಹೇಳಿದ್ದಾರೆ.

ಆಗಸ್ಟ್ 7ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಆಗಸ್ಟ್ 4, 5 ಹಾಗೂ 6ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಈ ದಿನಾಂಕಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಆಗಸ್ಟ್ 24ರಿಂದ 28ರವರೆಗೆ ನಡೆಸಲಾಗುವುದು ಎಂದು ಎನ್‌ಟಿಎ ಹೇಳಿದೆ. 

ಈ ಅವಧಿಯಲ್ಲಿ ಯಾವುದೇ ಪರೀಕ್ಷೆಗಳನ್ನು ನಿಗದಿಪಡಿಸದಿದ್ದರೂ ಕೆಲವು ಅಭ್ಯರ್ಥಿಗಳ ಪ್ರವೇಶ ಪತ್ರಗಳಲ್ಲಿ ಆಗಸ್ಟ್ 12, 13 ಹಾಗೂ 14 ತಾರೀಖುಗಳನ್ನು ಪರೀಕ್ಷಾ ದಿನಾಂಕಗಳಾಗಿ ತೋರಿಸುತ್ತಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ಹಾಗೇ ಪ್ರವೇಶ ಪತ್ರಗಳಲ್ಲಿ ಪರೀಕ್ಷಾ ಕೇಂದ್ರದ ಮಾಹಿತಿಯನ್ನು ನೀಡಿಲ್ಲ.

ಎರಡನೇ ಹಂತದ ಪರೀಕ್ಷೆಯ ಮೊದಲ ಮೂರು ದಿನಗಳಲ್ಲಿ ಕೆಲವು ತಾಂತ್ರಿಕ ದೋಷದಿಂದಾಗಿ ಸುಮಾರು 60 ಕೇಂದ್ರಗಳಲ್ಲಿ ಆಗಸ್ಟ್ 4ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು , ಆಗಸ್ಟ್ 12ರಿಂದ 14ಕ್ಕೆ ಮುಂದೂಡಲಾಗಿತ್ತು. ಆದರೆ, ಈ ಪರೀಕ್ಷೆಗಳನ್ನು ಈಗ ಆಗಸ್ಟ್ 24ರಿಂದ 28 ರವರೆಗೆ ನಡೆಸಲಾಗುವುದು ಎಂದು ಎನ್‌ಟಿಎ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಗೊಂದಲದ ಗೂಡಾಗಿರುವ ಸಿಯುಇಟಿ ಪರೀಕ್ಷೆ; ಸೂಚಿಸಿದ ಪರಿಹಾರವೇನು?

“ತಾಂತ್ರಿಕ ದೋಷದಿಂದ ರದ್ದಾಗಿದ್ದ ಎಲ್ಲ ಪರೀಕ್ಷೆಗಳನ್ನು ಆಗಸ್ಟ್ 24ರಿಂದ 28ರವರೆಗೆ ನಡೆಸಲಾಗುವುದು. ಕೆಲವು ಅಭ್ಯರ್ಥಿಗಳು ಆಗಸ್ಟ್ 12, 13 ಹಾಗೂ 14 ದಿನಾಂಕ ನಮೂದಿಸಿರುವ ಪ್ರವೇಶ ಪತ್ರಗಳನ್ನು ಪಡೆದಿರಬಹುದು. ಆದರೆ, ಈ ಅವಧಿಯಲ್ಲಿ ಯಾವುದೇ ಪರೀಕ್ಷೆಗಳು ನಡೆಯುವುದಿಲ್ಲ. ಪರೀಕ್ಷೆ ಆರಂಭವಾಗುವ ಮುನ್ನವೇ ವಿದ್ಯಾರ್ಥಿಗಳಿಗೆ ಹೊಸ ಪ್ರವೇಶ ಪತ್ರಗಳನ್ನು ನೀಡಲಾಗುವುದು” ಎಂದು ಹಿರಿಯ ಎನ್‌ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಎನ್‌ಟಿಎ ಸುಮಾರು 50 ಬೆಸ-ಕೇಂದ್ರಗಳಲ್ಲಿ ಪರೀಕ್ಷೆ ರದ್ದುಗೊಳಿಸಿದ ನಂತರ, ಆಗಸ್ಟ್ 7, 8 ಹಾಗೂ 10ರಂದು ಪರೀಕ್ಷೆ ಬರೆಯದ ಅನೇಕ ಅಭ್ಯರ್ಥಿಗಳಿದ್ದಾರೆ. ಈ ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳನ್ನು ಆಗಸ್ಟ್ 21, 22 ಹಾಗೂ 23ರಂದು ಪರೀಕ್ಷೆ ಬರೆಯಲಿದ್ದಾರೆ. 

“ಆಗಸ್ಟ್ 20ರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅವರ ಪರೀಕ್ಷೆ ಇರುವ ಮೂರು ದಿನದ ಮೊದಲೇ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಮೂರು ದಿನದ ಮುಂಚೆ ಪ್ರವೇಶ ಪತ್ರ ಪಡೆಯುವುದರಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ದಿನಾಂಕ, ಸಮಯ ಹಾಗೂ ಪರೀಕ್ಷೆ ನಡೆಯುವ ಸ್ಥಳದ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯಬಹುದು” ಎಂದು ಎನ್‌ಟಿಎ ಅಧಿಕಾರಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗೊಂದಲ ಅಥವಾ ಪ್ರಶ್ನೆಗಳಿದ್ದರೆ, ಪರಿಹಾರ ನೀಡುವ ಸಲುವಾಗಿ ಎನ್‌ಟಿಎ ಹೊಸ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯೂ-Frequently Asked Questions) ವ್ಯವಸ್ಥೆ ಸಹ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್