ಸಿಯುಇಟಿ ಪರೀಕ್ಷೆ | ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದ ರಾಹುಲ್ ಗಾಂಧಿ

  • ಒಂದು ಹಂತದ ಪರೀಕ್ಷೆಗಳನ್ನು ರದ್ದುಪಡಿಸಿದ ಸಿಯುಇಟಿಯ
  • ದೋಷಗಳಿಗೆ ಪರೀಕ್ಷಾ ಕೇಂದ್ರಗಳನ್ನು ದೂಷಿಸಿದ ಎನ್‌ಟಿಎ

ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ (ಸಿಯುಇಟಿ) ಪರೀಕ್ಷೆಯ ತಾಂತ್ರಿಕ ದೋಷದಿಂದಾಗಿ ಪದೇ ಪದೇ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದು ಮಾಡುತ್ತಲೇ ಇದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. 

“ಅಮೃತಮಹೋತ್ಸವದ ಸಂದರ್ಭದ ಹೊಸ ಶಿಕ್ಷಣ ನೀತಿ- ಪರೀಕ್ಷೆಗೆ ಮೊದಲು ಪರೀಕ್ಷೆ ಬಗ್ಗೆ ಚರ್ಚೆ. ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆಯೂ ಇಲ್ಲ, ಚರ್ಚೆಯೂ ಇಲ್ಲ. ಪರೀಕ್ಷೆ ನಂತರ ಅಂಧಕಾರದಲ್ಲಿ ಭವಿಷ್ಯ. ಸಿಯುಇಟಿ ಪರೀಕ್ಷೆಯಲ್ಲಿ ಕಾಣುತ್ತಿರುವ ಲೋಪಗಳು ದೇಶದ ಪ್ರತಿಯೊಬ್ಬ ಯುವಕರ ಎದುರಿಸುತ್ತಿರುವ ಸಂಕಷ್ಟವಾಗಿದೆ. ನಾಲ್ಕು ಮಂದಿಯ ಸರ್ವಾಧಿಕಾರ ದೇಶವನ್ನು ಉರುಳಿಸಲು ಸಿಕ್ಕ ಯಾವ ಕಲ್ಲನ್ನು ಬಿಡುತ್ತಿಲ್ಲ” ಎಂದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. 

ಆದರೆ, ಸಿಯುಇಟಿ ಪರೀಕ್ಷೆಯಲ್ಲಿನ ತಾಂತ್ರಿಕ ದೋಷದ ಬಗ್ಗೆ ಎನ್‌ಟಿಎ ಪರೀಕ್ಷಾ ಕೇಂದ್ರಗಳನ್ನು ದೂಷಿಸಿದ್ದು, “ಈ ಎಲ್ಲ ಸಮಸ್ಯೆಗಳನ್ನು ಕಟ್ಟುನಿಟ್ಟಿನ ಕ್ರಮದ ಮೂಲಕ ನಿಭಾಯಿಸಲಾಗುವುದು” ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್' ವರದಿ ಉಲ್ಲೇಖಿಸಿದೆ.

ಕಳೆದ ಎರಡು ದಿನಗಳಿಂದ ಹಲವಾರು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಇರುವ ಸುಮಾರು 53 ಕೇಂದ್ರಗಳನ್ನು ಎನ್‌ಟಿಎ ಶನಿವಾರ ಪಟ್ಟಿಮಾಡಿದೆ. 

ವಿದ್ಯಾರ್ಥಿಗಳು ಮತ್ತು ಪೋಷಕರು ಈ ತಾಂತ್ರಿಕ ಸಮಸ್ಯೆ ಬಗ್ಗೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಚಿವಾಲಯ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ಎನ್‌ಟಿಎ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವಂತೆ ದೂರು ನೀಡುವ ಮೂಲಕ ಒತ್ತಾಯಿಸಿದ್ದಾರೆ.

"ನಾವು 53 ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದೇವೆ. ಕಳೆದ ಎರಡು ದಿನಗಳಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಕೇಂದ್ರಗಳಲ್ಲಿ ಯಾವುದೇ ಪರೀಕ್ಷೆ ನಡೆಸಲಾಗುವುದಿಲ್ಲ" ಎಂದು ಎನ್‌ಟಿಎ ಮಹಾನಿರ್ದೇಶಕ ವಿನೀತ್ ಜೋಶಿ ತಿಳಿಸಿರುವ ಬಗ್ಗೆ 'ದಿ ಹಿಂದೂ' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ತಾಂತ್ರಿಕ ದೋಷದಿಂದ ಸಿಯುಇಟಿ ಪರೀಕ್ಷೆ ರದ್ದು ಮಾಡಿದ ಎನ್‌ಟಿಎ

ಆಗಸ್ಟ್‌ 5ರಂದು ಎನ್‌ಟಿಎ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಶನಿವಾರದಂದು ಈ 53 ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಯನ್ನು ಮುಂಬರುವ ಆಗಸ್ಟ್ 12 ಮತ್ತು 14ರ ನಡುವೆ ನಡೆಸಲಿದೆ ಎಂದು ಹೇಳಿದೆ.

53 ಕೇಂದ್ರಗಳಲ್ಲಿ ದೆಹಲಿಯಲ್ಲಿ 32, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ತಲಾ ನಾಲ್ಕು, ಹರಿಯಾಣ, ಛತ್ತೀಸ್‌ಗಢ ಮತ್ತು ಮಿಜೋರಾಂನಲ್ಲಿ ತಲಾ ಎರಡು, ಅರುಣಾಚಲ ಪ್ರದೇಶ, ಅಸ್ಸಾಂ, ಲಡಾಖ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ತಮಿಳುನಾಡಿನಲ್ಲಿ ತಲಾ ಒಂದು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ.

2022ರ ಸಿಯುಇಟಿ ಪರೀಕ್ಷೆಯನ್ನು ಜುಲೈ 15ರಿಂದ ಆಗಸ್ಟ್ 20ರವರೆಗೆ, ಎರಡು ಹಂತಗಳಲ್ಲಿ ದೇಶದ 259 ನಗರಗಳಲ್ಲಿ ಮತ್ತು ಒಂಬತ್ತು ವಿದೇಶಗಳು ಸೇರಿ ಒಟ್ಟು 489 ಕೇಂದ್ರಗಳಲ್ಲಿ ನಡೆಸುತ್ತಿದೆ. ಪರೀಕ್ಷೆಯು ಬೆಳಿಗ್ಗೆ ಮತ್ತು ಮಧ್ಯಾಹ್ನ ಪಾಳಿಯಲ್ಲಿ ನಡೆಯುತ್ತಿದೆ. ಸರಿಸುಮಾರು 14.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ಎನ್‌ಟಿಎ ಸಮಸ್ಯೆಗೆ ಪರೀಕ್ಷಾ ಕೇಂದ್ರಗಳನ್ನು ದೂಷಿಸಿದ್ದರೂ, ಆಗಸ್ಟ್ 4ರಂದು ಎರಡನೇ ಹಂತದ ಮೊದಲ ದಿನ, ಪ್ರಶ್ನೆ ಪತ್ರಿಕೆ ಅಪ್ಲೋಡ್ ಮಾಡಲು ಎರಡು ಗಂಟೆಗಳ ವಿಳಂಬದ ನಂತರ ಮಧ್ಯಾಹ್ನ ಪಾಳಿಯ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ರದ್ದುಗೊಳಿಸಿತ್ತು. 28 ಕೇಂದ್ರಗಳಲ್ಲಿ ಬೆಳಗಿನ ಪಾಳಿಯ ಪರೀಕ್ಷೆಯನ್ನು ಆಗಸ್ಟ್ 12ರಿಂದ 14ರ ನಡುವೆ ಮರು ನಿಗದಿಪಡಿಸಲಾಗಿದೆ. 

"ಪದೇ ಪದೇ ಇಂತಹ ವಿಧ್ವಂಸಕ ಕೃತ್ಯಗಳು ಅಥವಾ ಅಜ್ಞಾನದ ಯಾವುದೇ ಘಟನೆಗಳು ನಡೆದರೆ, ಬಹಳ ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ಸುವ್ಯವಸ್ಥೆಯಿಂದ ಸುಗಮವಾಗಿ ನಡೆಸುವಂತೆ ಪರೀಕ್ಷಾ ಕೇಂದ್ರಗಳಿಗೆ ತಿಳಿಸಲಾಗಿದೆ. ಪರೀಕ್ಷೆಗೆ ತೊಂದರೆಯಾದರೆ, ಆ ಪರೀಕ್ಷಾ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಎನ್‌ಟಿಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ವಿದ್ಯಾರ್ಥಿಗಳು ಸಿಯುಇಟಿಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಎನ್‌ಟಿಎ ಗಮನಕ್ಕೆ ಬಂದಿದೆ. ಶನಿವಾರ ಸಂಪೂರ್ಣ ಪರಿಸ್ಥಿತಿ ಪರಿಶೀಲಿಸಿದೆ. ಕೆಲವು ಕೇಂದ್ರಗಳಲ್ಲಿ ನಿಗದಿಪಡಿಸಿದ ನಿಯಮಗಳನ್ನು ಅನುಸರಿಸಲು ವಿಫಲವಾಗಿರುವುದು ಕಂಡುಬಂದಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್