ಮಂಗಳೂರು| ಮೋದಿ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸದಸ್ಯರಿಗೆ 'ಡಿಸಿ ಕಡ್ಡಾಯ ಆದೇಶ': ಖಂಡಿಸಿದ ಜನವಾದಿ ಸಂಘಟನೆ

  • ಮೋದಿ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸಂಘದ ಮಹಿಳೆಯರು ಕಡ್ಡಾಯವಾಗಿ ಭಾಗವಹಿಸಬೇಕು
  • ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶವನ್ನು ತೀವ್ರವಾಗಿ ಖಂಡಿಸಿದ ಜನವಾದಿ ಮಹಿಳಾ ಸಂಘಟನೆ

ʻʻನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಬಿಜೆಪಿ ಏಜೆಂಟರಂತೆ ಮಹಿಳೆಯರನ್ನು ಅಣಿನೆರೆಸುವ ರಾಜಕೀಯ ಪ್ರೇರಿತ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಕೂಡಲೇ ಹಿಂಪಡೆಯಬೇಕು. ರಾಜಕೀಯ ಪ್ರೇರಿತವಾಗಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕುʼʼ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಒತ್ತಾಯಿಸಿದೆ.

Image

ಸೆಪ್ಟೆಂಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ಕಡ್ಡಾಯವಾಗಿ ಭಾಗವಹಿಸಬೇಕು. ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಪಂಚಾಯತಿ ವ್ಯಾಪ್ತಿಯಲ್ಲಿ ಒಕ್ಕೂಟಗಳಿಗೆ ಬಸ್‌ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಸಂಘಟನೆಯು ತೀವ್ರವಾಗಿ ಖಂಡಿಸಿದೆ.

ʻʻಕೋವಿಡ್‌ ಸಾಂಕ್ರಾಮಿಕ ತಂದೊಡ್ಡಿದ ಸಮಸ್ಯೆಗಳಿಂದಾಗಿ ಜೀವನ ಮತ್ತು ಜೀವನಾಧಾರ ಕಳೆದುಕೊಂಡು, ತೆಗೆದುಕೊಂಡ ಸಾಲವನ್ನು ಕಂತುಗಳನ್ನು ಪಾವತಿಸಲಾಗದ ಸಂದರ್ಭದಲ್ಲಿ ಸಾಲಮನ್ನಾಗೆ ಒತ್ತಾಯಿಸಿ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ದೇಶವ್ಯಾಪಿ ಹೋರಾಟಗಳನ್ನು ನಡೆಸಿದ್ದರು. ಆದರೆ, ಅವರ ಹೋರಾಟವನ್ನು ಲೆಕ್ಕಿಸದೇ ಸಾಲಮನ್ನಾ ಮಾಡದ ಕೇಂದ್ರ ಸರ್ಕಾರ, ಕಾರ್ಪೊರೇಟ್‌ ವಲಯಕ್ಕೆ ಕೋಟ್ಯಾಂತರ ರೂ. ಗಳ ತೆರಿಗೆ ಮನ್ನಾ ಮಾಡಿತು. ರಾಜ್ಯದಲ್ಲಿ ಈಗಲೂ ಮಹಿಳೆಯರು ಎಂಎಫ್‌ಐಗಳಿಂದ ಅವಮಾನ, ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಕಿವಿಗೊಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು ಅವರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆʼʼ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯನ್ನು ಜನವಾದಿ ಸಂಘಟನೆ ತೀವ್ರವಾಗಿ ಟೀಕಿಸಿದೆ.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ಸಿಗೆ ನಷ್ಟ ಮಾಡಲೆಂದೇ ಗುಲಾಂ ನಬಿ ಆಜಾದ್ ಅವರು ಪ್ರತ್ಯೇಕ ಪಕ್ಷ ಕಟ್ಟುತ್ತಿರಬೇಕು: ಎಚ್ ಸಿ ಮಹದೇವಪ್ಪ ಕಿಡಿ

ʻʻಮಹಿಳೆಯರನ್ನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ಜಿಲ್ಲಾಧಿಕಾರಿಗಳು ಈ ದೇಶದ ಸಂವಿಧಾನ ಮತ್ತು ಕಾನೂನಿಗೆ ಬದ್ಧರಾಗಿರಬೇಕೇ ಹೊರತು ಆಳುವ ಸರ್ಕಾರಗಳಿಗಲ್ಲʼʼ ಎಂದು ಎಚ್ಚರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್