ದಕ್ಷಿಣ ಕನ್ನಡ| ಮಸೂದ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

masood
  • ಜುಲೈ 19ರಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಮಸೂದ್
  • ಆಗಸ್ಟ್‌ 29ರವರೆಗೆ‌ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಂಪು ಹಲ್ಲೆಗೆ ಒಳಗಾಗಿ ಮೃತಪಟ್ಟ ಮಸೂದ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸಿ ಸುಳ್ಯ ನ್ಯಾಯಾಲಯ ಆದೇಶ ಹೊರಡಿಸಿದೆ. 

ಅಭಿಲಾಶ್, ಸುನಿಲ್ ಕೆ, ಸುಧೀರ್, ಶಿವಪ್ರಸಾದ್, ರಂಜಿತ್ ಬಿ, ಸದಾಶಿವ ಪೂಜಾರಿ, ರಂಜಿತ್, ಭಾಸ್ಕರ ಕೆ ಎಂ ಇವರ ಮೇಲೆ ಕೊಲೆ ಆರೋಪ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ಮಂಗಳವಾರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ದಕ್ಷಿಣಕನ್ನಡ| ಭಯದ ವಾತಾವರಣ ಸೃಷ್ಟಿಸುವ ಸಲುವಾಗಿ ಪ್ರವೀಣ್‌ ಹತ್ಯೆ: ಎನ್‌ಐಎ

ಎಂಟೂ ಆರೋಪಿಗಳಿಗೆ ಆಗಸ್ಟ್‌ 29ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.

ಏನಿದು ಪ್ರಕರಣ?

ಜುಲೈ 19ನೇ ತಾರೀಖು ಅಂಗಡಿಯೊಂದರ ಮುಂದೆ ಮಸೂದ್‌ನ ಕೈ ಆರೋಪಿಗೆ ತಾಕಿದ ವಿಷಯಕ್ಕೆ ಜಗಳ ಶುರುವಾಗಿತ್ತು. ಬಳಿಕ ಮಸೂದ್‌ ಮನೆಗೆ ತೆರಳಿದ್ದ. ರಾತ್ರಿ 9ರ ಸುಮಾರಿಗೆ ಆರೋಪಿಗಳು ಮಸೂದ್‌ ಸಂಬಂಧಿಗೆ ಕರೆ ಮಾಡಿ, ಆತನನ್ನು ರಾಜಿಗೆ ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಅದನ್ನು ನಂಬಿದ ಸಂಬಂಧಿ, ಮಸೂದ್‌ ಕರೆದುಕೊಂಡು ಆರೋಪಿಗಳು ಹೇಳಿದ ಜಾಗಕ್ಕೆ ತೆರಳಿದ್ದಾನೆ. ಈ ವೇಳೆ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದು, ಮಸೂದ್‌ ತಲೆಗೆ ಗಂಭೀರ ಗಾಯವಾಗಿದೆ. ಮಸೂದ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಆತ ಜುಲೈ 21 ರಂದು ಮೃತಪಟ್ಟಿದ್ದಾನೆ.

ನಿಮಗೆ ಏನು ಅನ್ನಿಸ್ತು?
0 ವೋಟ್