ಉತ್ತರ ಪ್ರದೇಶ | ದಲಿತ ಅಪ್ರಾಪ್ತೆ ಮೇಲೆ ಅತ್ಯಾಚಾರ ಸಜೀವ ದಹನಕ್ಕೆ ಯತ್ನ ಪ್ರಕರಣ; ಸಂತ್ರಸ್ತೆ ಸಾವು

  • ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ
  • ಮೂರು ದಿನಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ

ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಡಿಸೇಲ್‌ ಸುರಿದು ಹತ್ಯೆಗೈಯಲು ಆರೋಪಿಗಳು ಪ್ರಯತ್ನಿಸಿದ್ದರು. ಈ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆಯು ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ.

ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಸೆಪ್ಟೆಂಬರ್‌ 7ರಂದು ಉತ್ತರ ಪ್ರದೇಶದ ಪಿಲಿಭಿತ್‌ ಜಿಲ್ಲೆಯಲ್ಲಿ ನಡೆದಿತ್ತು.

ಘಟನೆ ನಡೆದು ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಯುವತಿಯು ಆಸ್ಪತ್ರೆಯ ಹಾಸಿಗೆ ಮೇಲೆ ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಪೊಲೀಸರು ಆಸ್ಪತ್ರೆಗೆ ಧಾವಿಸಿ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಆರೋಪಿಗಳಾದ ರಾಜವೀರ್ (19) ಮತ್ತು ತಾರಾಚಂದ್ ಅಲಿಯಾಸ್ ತರುಣ್ ಕುಮಾರ್ (25) ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಡಿಕೆಶಿಗೆ ಮತ್ತೊಂದು ಸಂಕಷ್ಟ | ಐಟಿ ದಾಖಲಿಸಿದ್ದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ 'ಮರುಜೀವ'

ಸೆಪ್ಟೆಂಬರ್‌ 10ರಂದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಉತ್ತರ ಪ್ರದೇಶದ ಬುಡೌನ್‌ನಲ್ಲಿ ರೈಲು ಮಾರ್ಗದ ಬಳಿ ಪತ್ತೆ ಮಾಡಲಾಗಿತ್ತು. ಆರಂಭದಲ್ಲಿ ಆರೋಪಿಗಳ ವಿರುದ್ಧ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಸೆಕ್ಷನ್‌ಗಳ ಜೊತೆಗೆ ಕೊಲೆ ಮತ್ತು ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಸ್ತುತ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ಎಫ್‌ಐಆರ್‌ ದಾಖಲಿಸಲಾಗಿದೆ.

ಕಳೆದ ವಾರ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ತಮ್ಮ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಗಳು ಅತ್ಯಾಚಾರ ಮತ್ತು ಕತ್ತು ಹಿಸುಕಿರುವುದು ದೃಢಪಟ್ಟಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್