ದಲಿತ ವಿದ್ಯಾರ್ಥಿ ಸಾವು ಪ್ರಕರಣ| ಕಾಂಗ್ರೆಸ್ ಶಾಸಕ ಪಾನ್‌ ಚಂದ್ ಮೇಘವಾಲ್ ರಾಜೀನಾಮೆ

Pana Chand Meghawal
  • ದಲಿತ ಬಾಲಕನೊಬ್ಬ ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಶಿಕ್ಷಕರೊಬ್ಬರ ಥಳಿತದಿಂದ ಸಾವು
  • ರಾಜೀನಾಮೆ ಪತ್ರವನ್ನು ಮೇಘವಾಲ್ ಅವರು ಮುಖ್ಯಮಂತ್ರಿ ಮತ್ತು ವಿಧಾನಸಭೆ ಸ್ಪೀಕರ್ ಸಿ.ಪಿ ಜೋಶಿಗೆ ರವಾನೆ

ರಾಜಸ್ಥಾನದ ತಮ್ಮ ಬರನ್-ಅತ್ರು ವಿಧಾನಸಭಾ ಕ್ಷೇತ್ರದಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಶಾಲಾ ಶಿಕ್ಷಕರ ಥಳಿತದಿಂದ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಪಾನ್ ಚಂದ್ ಮೇಘವಾಲ್ ಎಂಬುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

ತಮ್ಮ ರಾಜೀನಾಮೆ ಪತ್ರವನ್ನು ಪಾನ್ ಚಂದ್ ಅವರು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಮತ್ತು ವಿಧಾನಸಭೆ ಸ್ಪೀಕರ್ ಸಿ.ಪಿ ಜೋಶಿ ಅವರಿಗೆ ರವಾನಿಸಿದ್ದಾರೆ. ‌

ದಲಿತ ವಿದ್ಯಾರ್ಥಿಯ ಸಾವಿನಿಂದ ನೋವಾಗಿದೆ. ಆದ್ದರಿಂದ ವಿಧಾನಸಭೆ ಸದಸ್ಯತ್ವವನ್ನು ತೊರೆಯುತ್ತಿದ್ದೇನೆ ಎಂದು ಮೇಘವಾಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ₹50 ಲಕ್ಷ ಆರ್ಥಿಕ ನೆರವು ಮತ್ತು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವಂತೆ ಪಾನ್ ಚಂದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಅಟಲ್‌ ಬಿಹಾರಿ ವಾಜಪೇಯಿ ಪುಣ್ಯತಿಥಿ| ರಾಷ್ಟ್ರಪತಿ ಮುರ್ಮ, ಪ್ರಧಾನಿ ಮೋದಿ ಸೇರಿ ಗಣ್ಯರ ಗೌರವ ನಮನ

ಹತ್ಯೆ ನಡೆದು 24 ಗಂಟೆ ಕಳೆದರೂ, ತಮ್ಮದೇ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ರಾಜೀನಾಮೆ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಬರನ್-ಅತ್ರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಪಾನ್ ಚಂದ್ ಮೇಘವಾಲ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಗೆದ್ದಿದ್ದರು. 

“ದೇಶವು ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸಿದೆ. ಆದರೆ ಇಷ್ಟು ವರ್ಷಗಳ ನಂತರವೂ ರಾಜ್ಯದಲ್ಲಿ ದೀನ ದಲಿತ ಮತ್ತು ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಂತಿಲ್ಲ ಎಂಬುದು ತೀವ್ರ ನೋವು ಉಂಟು ಮಾಡಿದೆ. ಪ್ರಸ್ತುತ ದಿನದಲ್ಲಿ ನನ್ನ ಸಮಾಜ ಅನುಭವಿಸುತ್ತಿರುವ ಹಿಂಸೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ” ಎಂದು ಮೇಘವಾಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಲಿತರಿಗೆ ಒದಗಿಸಿದ ಸಮಾನತೆಯ ಹಕ್ಕನ್ನು ರಕ್ಷಿಸಲು ಯಾರೂ ಇಲ್ಲ ಎನಿಸುತ್ತದೆ. ವಿಧಾನಸಭೆಯಲ್ಲಿ ಈ ಬಗ್ಗೆ ಹಲವು ಬಾರಿ ವಿಷಯ ಮಂಡಿಸಿದರೂ ಪೊಲೀಸ್ ಮತ್ತು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅಸಮಾಧಾನ ಹೊರಹಾಕಿದರು. 

“ನಮ್ಮ ಸಮಾಜದ ಹಕ್ಕುಗಳನ್ನು ರಕ್ಷಿಸಲು ವಿಫಲರಾದಾಗ ನಾವು ಅಧಿಕಾರದಲ್ಲಿರುವುದು ಸರಿಯಲ್ಲ. ನನ್ನ ಆತ್ಮಸಾಕ್ಷಿ ಪ್ರಕಾರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಮಾಜದ ಶೋಷಿತ ವರ್ಗದ ಪರವಾಗಿ ಹೋರಾಡುವ ಸಲುವಾಗಿ ನನ್ನ ರಾಜೀನಾಮೆಯನ್ನು ಅಂಗೀಕರಿಸಿ" ಎಂದು ಪಾನ್‌ ಚಂದ್ ಪತ್ರದಲ್ಲಿ ಹೇಳಿದ್ದಾರೆ. 

ಏನು ಘಟನೆ?

ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಇಂದ್ರ ಮೇಘವಾಲ್‌ ಪರಿಶಿಷ್ಟ ಜಾತಿಯ ಬಾಲಕನನ್ನು ಹೊಡೆದಿದ್ದರು. ಈ ಬಾಲಕ ಕಳೆದ ಶನಿವಾರ (ಆಗಸ್ಟ್ 13) ಮೃತಪಟ್ಟಿದ್ದ. ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ನಡೆದಿತ್ತು. 

ಮೃತ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಹೊತ್ತಿನಲ್ಲಿ ನಡೆದ ದಲಿತ ಬಾಲಕನ ಸಾವು, ದೇಶವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಚಿಂತಿಸುವಂತೆ ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್