ಮಧ್ಯಪ್ರದೇಶ | ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ಮೇಲೆ ದೌರ್ಜನ್ಯವೆಸಗಿ ಕ್ರೌರ್ಯ ಮೆರೆದ ಪೊಲೀಸರು

  • ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ಥಳಿಸಿದ ಪೊಲೀಸರು
  • ಅಮಾನವೀಯತೆ ಮೆರೆದ ಪೊಲೀಸರ ಅಮಾನತುಗೊಳಿಸಿದ ಇಲಾಖೆ

ಅತ್ಯಾಚಾರದ ದೂರು ನೀಡಲು ಬಂದ 13 ವರ್ಷದ ದಲಿತ ಬಾಲಕಿಯನ್ನು ಇಡೀ ರಾತ್ರಿ ಪೊಲೀಸ್‌ ಠಾಣೆಯಲ್ಲಿರಿಸಿ, ಥಳಿಸಿ, ಕಿರುಕುಳ ನೀಡಿರುವಂತಹ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ನಗರದಲ್ಲಿ ಆಗಸ್ಟ್‌ 30ರಂದು ನಡೆದಿದೆ.

ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳನ್ನು ಬುಧವಾರ (ಸೆಪ್ಟೆಂಬರ್‌ 3) ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಸಂತ್ರಸ್ತೆಯನ್ನು ಪೊಲೀಸ್ ಠಾಣೆಯಲ್ಲಿ ಉಳಿಸಿದ್ದಕ್ಕಾಗಿ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಅನೂಪ್ ಯಾದವ್, ಸಬ್‌ ಇನ್‌ಸ್ಪೆಕ್ಟರ್‌ ಮೋಹಿನಿ ಶರ್ಮಾ ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗುರುದತ್ ಶೇಷಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಛತ್ತರ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ವಿವರಿಸಿದರು.

ಏನಿದು ಘಟನೆ?

ʼʼಬಾಲಕಿಯು ಆಗಸ್ಟ್ 27ರಂದು ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದವಳು ವಾಪಸ್‌ ಬಂದಿದರಿಲ್ಲ. ಆದ್ದರಿಂದ, ಮರುದಿನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದೆವುʼʼ ಎಂದು ಸಂತ್ರಸ್ತೆಯ ತಾಯಿ ತಿಳಿಸಿರುವುದಾಗಿ ವರದಿಯಾಗಿದೆ.

ಆಗಸ್ಟ್ 30ರಂದು, ಮನೆಗೆ ಹಿಂದಿರುಗಿದ್ದ ಬಾಲಕಿ, ಆರೋಪಿಯು ತನ್ನನ್ನು ಮನೆಗೆ ಬಲವಂತವಾಗಿ ಕರೆದೊಯ್ದು, ಅಲ್ಲಿಯೇ ಬಂಧಿಸಿ ಮೂರು ದಿನಗಳ ಕಾಲ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದ್ದಳು.

“ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರು ದಾಖಲಿಸಿಸಲು ನಾವು ಪೊಲೀಸ್ ಠಾಣೆಗೆ ಹೋಗಿದ್ದೆವು. ಪ್ರಕರಣ ದಾಖಲಿಸಿಕೊಳ್ಳದ ಇಬ್ಬರು ಪೊಲೀಸರು, ನನ್ನ ಮಗಳ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡ ಹೇರಿದರು. ಒಬ್ಬ ಪೊಲೀಸ್ ಅಧಿಕಾರಿ ನನ್ನನ್ನು ಹೊರಗೆ ಕರೆದೊಯ್ದು, ಒಳಗೆ ನನ್ನ ಮಗಳನ್ನು ಒದ್ದು ಬೆಲ್ಟ್‌ನಿಂದ ಥಳಿಸಿದ್ದಾರೆ’’ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

ಬಾಲಕಿಯ ಪೋಷಕರು ಮಗಳಿಗಾಗಿ ಹೊರಗೆ ಕಾಯುತ್ತಿದ್ದರೆ, ಇಡೀ ರಾತ್ರಿ ಅಪ್ರಾಪ್ತೆಯನ್ನು ಠಾಣೆಯಲ್ಲಿರಿಸಿದ್ದರು ಎನ್ನಲಾಗಿದೆ.

ʻʻಆಗಸ್ಟ್ 31ರಂದು ಮತ್ತೆ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸುವಂತೆ ಕೇಳಿದಾಗ ಹೆದರಿಸಿ ಅಲ್ಲಿಂದ ಹೊರಗೆ ಕಳುಹಿಸಿದರುʼʼ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

ಆರೋಪಿ ಬಂಧನ ಪೋಕ್ಸೋ ಕಾಯ್ದೆಯಡಿ ದೂರು

ಹೀಗೆ ಎರಡು ದಿನಗಳ ಕಾಲ ಸಂತ್ರಸ್ತೆಯ ಪೋಷಕರನ್ನು ಅಲೆದಾಡಿಸಿದ ಪೊಲೀಸರು ಸೆಪ್ಟೆಂಬರ್ 1ರ ಸಂಜೆ ಆರೋಪಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಬಾಲಕಿಯ ವಯಸ್ಸನ್ನು 17 ವರ್ಷ ಎಂದು ತೋರಿಸಲಾಗಿದ್ದು, ಅಪಹರಣದ ಆರೋಪವನ್ನು ಅದರಲ್ಲಿ ನಮೂದಿಸಿಲ್ಲ ಎನ್ನುತ್ತಾರೆ ಸಂತ್ರಸ್ತೆಯ ತಾಯಿ.

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಾಬು ಖಾನ್‌ನನ್ನು ಸೆಪ್ಟೆಂಬರ್‌ 3ರಂದು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿ ವಿವರಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ (ಸಿಡಬ್ಲ್ಯೂಸಿ) ಅತ್ಯಾಚಾರದ ದೂರು ಬಂದಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದರು.

ಈ ಸುದ್ದಿ ಓದಿದ್ದೀರಾ?: 'ಭಾರತ್ ಜೋಡೋ ಯಾತ್ರೆ' ಕಾಂಗ್ರೆಸ್ ಮುಕ್ತ ಭಾರತದ ಮುನ್ಸೂಚನೆಯಾಗಿದೆ: ನಳಿನ್‌ಕುಮಾರ್ ಕಟೀಲ್

ʻʻಪೊಲೀಸರು ಅಪರಾಧಿಯನ್ನು ರಕ್ಷಿಸಲು ಮತ್ತು ಸಂತ್ರಸ್ತೆ ತನ್ನ ಸತ್ಯ ಬದಲಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಆಕೆಯ ವಯಸ್ಸನ್ನು 13ರ ಬದಲಿಗೆ 17 ವರ್ಷ ಎಂದು ತೋರಿಸಲಾಗಿದೆ ಎಂದು ತಿಳಿದ ನಂತರ ಆಕೆಯ ವಯಸ್ಸಿನ ದಾಖಲೆಗಳ ಮಾಹಿತಿಯನ್ನು ಪೊಲೀಸರಿಂದ ಕೇಳಲಾಗಿದೆʼʼ ಎಂದು ಸಿಡಬ್ಲ್ಯೂಸಿ ಸದಸ್ಯ ಅಫ್ಸರ್ ಜಹಾನ್ ತಿಳಿಸಿದರು.

ಕಾನೂನಿನ ಪ್ರಕಾರ, ಸಂತ್ರಸ್ತೆ ಹೇಳಿಕೆಯನ್ನು ಪುರುಷ ಪೊಲೀಸ್‌ ಅಧಿಕಾರಿಗಳು ದಾಖಲಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಹಾಗೆಯೇ, ಆರೋಪಿಯನ್ನು ಸಂತ್ರಸ್ತೆಯ ಸಮ್ಮುಖದಲ್ಲಿ ಕರೆತರುವಂತಿಲ್ಲ ಎಂಬ ನಿಯಮವಿದ್ದರೂ ಇವೆಲ್ಲವನ್ನು ಗಾಳಿಗೆ ತೂರಿ ಆರೋಪಿಯ ಮುಂದೆ ಬಾಲಕಿಯನ್ನು ಹಾಜರುಪಡಿಸಿರುವುದು ಕಂಡು ಬಂದಿದೆ.

ಇಂತಹದೇ ಪ್ರಕರಣ ಚಿತ್ರದುರ್ಗದಲ್ಲಿಯೂ ನಡೆದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಮಠದಲ್ಲಿ ಇರುವಾಗಲೇ ಮಕ್ಕಳನ್ನು ಸ್ಥಳದ ಮಹಜರ್‌ ಮಾಡಲು ಕರೆತಂದತಹ ಕಾನೂನು ಬಾಹಿರ ಘಟನೆ ವರದಿಯಾಗಿತ್ತು.

ಕಾನೂನು ಸುವ್ಯವಸ್ಥೆ, ರಕ್ಷಣೆಯ ಹೊಣೆ ಹೊತ್ತವರೇ ಪ್ರಭಾವಿಗಳ, ಹಣವಂತರ ಪರವಾಗಿರುವುದು ಬೇಸರದ ಸಂಗತಿ. ಈ ಬಗ್ಗೆ ಪೊಲೀಸ್‌ ಇಲಾಖೆಯ ಲೋಪದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್