2020ರಲ್ಲಿ ನಾಲ್ವರು ಪತ್ರಕರ್ತರ ಹತ್ಯೆ; ವಿಶ್ವದ ಅಪಾಯಕಾರಿ ದೇಶಗಳಲ್ಲೊಂದು ಭಾರತ

protest-kashmir
  • 2020ರಲ್ಲಿ  ಭಾರತದಲ್ಲಿ ನಾಲ್ವರು ಪತ್ರಕರ್ತರ ಹತ್ಯೆ, ಸರ್ಕಾರದ ಟೀಕೆ ಸಲ್ಲದು
  • ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾಧ್ಯಮಗಳ ಮೇಲೆ ಹೆಚ್ಚಿದ ಒತ್ತಡ 

2020ರಲ್ಲಿ ವೃತ್ತಿಪರ ವಸ್ತುನಿಷ್ಠತೆ ಪ್ರದರ್ಶಿಸಿದ ನಾಲ್ವರು ಪತ್ರಕರ್ತರು ಹತ್ಯೆಗೀಡಾಗಿದ್ದು, ಪತ್ರಕರ್ತರ ಪಾಲಿಗೆ ಭಾರತ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ-2021 ವರದಿ ಹೇಳಿದೆ. 

"ವರದಿಗಾರರ ವಿರುದ್ಧ ಪೊಲೀಸರ ಹಿಂಸಾಚಾರ, ರಾಜಕೀಯ ಕಾರ್ಯಕರ್ತರ ಹೊಂಚು ದಾಳಿಗಳು, ಕ್ರಿಮಿನಲ್ ಗುಂಪುಗಳ ದಾಳಿ, ಭ್ರಷ್ಟ ಸ್ಥಳೀಯ ಅಧಿಕಾರಿಗಳಿಂದ ಪ್ರಚೋದಿಸಲ್ಪಟ್ಟ ಪ್ರತೀಕಾರ ಘಟನೆ ಸೇರಿದಂತೆ ನಾನಾ ರೀತಿಯ ದಾಳಿಗಳಿಗೆ ಪತ್ರಕರ್ತರು ತಮ್ಮನ್ನು ಒಡ್ಡಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಇದೆ" ಎಂದು ವರದಿ ಹೇಳಿದೆ.

Eedina App

ವರದಿಯಲ್ಲಿರುವ ಮುಖ್ಯಾಂಶಗಳು

  • 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾವಧಿಯಲ್ಲಿ ಹಿಂದು ರಾಷ್ಟ್ರೀಯತಾವಾದಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ಮಾಧ್ಯಮಗಳ ಮೇಲೆ ಒತ್ತಡ ಹೆಚ್ಚಿದೆ.
  • ಭಾರತದ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ ಕೆಟ್ಟ ಉದಾಹರಣೆಗೆ ಕಾರಣವಾದ ಅಂಶಗಳಲ್ಲಿ ಇದೂ ಒಂದಾಗಿದೆ. ಭಾರತವು ಬ್ರೆಜಿಲ್, ಮೆಕ್ಸಿಕೋ ಮತ್ತು ರಷ್ಯಾದೊಂದಿಗೆ  ಈ 'ಕೆಟ್ಟ' ವರ್ಗೀಕರಣದಲ್ಲಿ ತನ್ನ ಸ್ಥಾನವನ್ನು ಹಂಚಿಕೊಳ್ಳಲು ಇದು ಕಾರಣವಾಗಿದೆ.
  • ಹಿಂದುತ್ವವನ್ನು ಪ್ರತಿಪಾದಿಸುವ ಭಾರತೀಯರು ಮತ್ತು ಹಿಂದೂ ರಾಷ್ಟ್ರೀಯತೆ ಸಿದ್ಧಾಂತ ಹುಟ್ಟು ಹಾಕಿದ ಆಮೂಲಾಗ್ರ ಬಲಪಂಥೀಯರು 'ರಾಷ್ಟ್ರ ವಿರೋಧಿ' ಹೆಸರಲ್ಲಿ ಸಾರ್ವಜನಿಕ ಚರ್ಚೆಯ ಚಿಂತನೆಗಳು, ಎಲ್ಲ ಅಭಿವ್ಯಕ್ತಿಗಳನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದಾರೆ. 
  • ಸರ್ಕಾರದ ಪರವಾದ ಮಾಧ್ಯಮಗಳು ಪ್ರಚಾರದ ರೂಪವನ್ನು ಹೊರ ಹಾಕುತ್ತಿರುವಾಗ, ಸರ್ಕಾರವನ್ನು ಟೀಕಿಸಲು ಧೈರ್ಯವಿರುವ ಪತ್ರಕರ್ತರಿಗೆ 'ರಾಜ್ಯ ವಿರೋಧಿ', 'ರಾಷ್ಟ್ರ ವಿರೋಧಿ' ಅಥವಾ 'ಭಯೋತ್ಪಾದಕರ ಪರ' ಎಂಬ ಹಣೆಪಟ್ಟಿ ಮೂಲಕ ಬೆದರಿಕೆಯ ವಾತಾವರಣವನ್ನು ಸೃಷ್ಟಿಸಲಾಗಿದೆ.
  • ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಂಘಟಿತ ದ್ವೇಷ ಅಭಿಯಾನಗಳು ನಡೆಯುತ್ತಿವೆ. ಅತ್ಯಂತ ಹಿಂಸಾತ್ಮಕ ಸಾಮಾಜಿಕ ಮಾಧ್ಯಮ ಪ್ರಚಾರಗಳು ನಡೆಯುತ್ತಿವೆ. ಸರ್ಕಾರವನ್ನು ಟೀಕಿಸುವ ಪತ್ರಕರ್ತರನ್ನು 'ಸಾರ್ವಜನಿಕ ಖಂಡನೆ'ಗೆ ಬಹಿರಂಗವಾಗಿ ಕರೆ ನೀಡುತ್ತದೆ ಮತ್ತು ಅವರಿಗೆ ಕೊಲೆ ಬೆದರಿಕೆಗಳನ್ನು ಹಾಕುವ ಮಟ್ಟಕ್ಕೂ ಹೋಗುತ್ತಾರೆ.
  • ಮಹಿಳೆಯರನ್ನು ಗುರಿಯಾಗಿಸುವ ಅಭಿಯಾನಗಳು ವಿಶೇಷವಾಗಿ ಹಿಂಸಾತ್ಮಕವಾಗಿರುತ್ತವೆ. ಏತನ್ಮಧ್ಯೆ ಅಧಿಕಾರಿಗಳನ್ನು ಟೀಕಿಸುವ ಪತ್ರಕರ್ತರನ್ನು ನಿಯಂತ್ರಿಸಲು ಕ್ರಿಮಿನಲ್ ಪ್ರಾಸಿಕ್ಯೂಷನ್‌ಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.  ಕೆಲವು ಪ್ರಾಸಿಕ್ಯೂಟರ್‌ಗಳು ದಂಡ ಸಂಹಿತೆಯ ಸೆಕ್ಷನ್ 124 ಎ ಹೇರುತ್ತಾರೆ. ಅದರಡಿ 'ದೇಶದ್ರೋಹ' ದಾಖಲಿಸಿ ಜೀವಾವಧಿ ಶಿಕ್ಷೆಗೆ ಗುರಿ ಮಾಡುತ್ತಾರೆ.  
  • 2020ರಲ್ಲಿ ಅಧಿಕೃತ ಸ್ಥಾನಕ್ಕೆ ಭಿನ್ನವಾಗಿ ಮಾಹಿತಿ ಒದಗಿಸುವ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಸುದ್ದಿ ಪ್ರಸಾರದ ನಿಯಂತ್ರಣ ಹೆಚ್ಚಿಸಲು ಸರ್ಕಾರವು ಕರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಲಾಭವನ್ನು ಪಡೆದುಕೊಂಡಿತು.
  • ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ, ಅಲ್ಲಿ ವರದಿಗಾರರು ಆಗಾಗ್ಗೆ ಪೋಲೀಸ್ ಮತ್ತು ಅರೆಸೇನಾಪಡೆಗಳಿಂದ ಕಿರುಕುಳಕ್ಕೊಳಗಾಗುತ್ತಾರೆ ಮತ್ತು ಸಂಪೂರ್ಣವಾಗಿ ಆರ್ವೆಲಿಯನ್ ವಿಷಯದ ನಿಯಮಗಳನ್ನು ನಿಭಾಯಿಸಬೇಕು ಮತ್ತು ಕಣಿವೆಯ ಪ್ರಮುಖ ದಿನಪತ್ರಿಕೆಯಾದ ಕಾಶ್ಮೀರ ಟೈಮ್ಸ್‌ ಸೇರಿದಂತೆ ಅಲ್ಲಿನ ಮಾಧ್ಯಮಗಳನ್ನು ಮುಚ್ಚಲು ಹೊಣೆಗಾರರಾಗಿದ್ದಾರೆ. 

ದೇಶದಲ್ಲಿ ಡಿಜಿಟಲ್ ನಿಯಂತ್ರಣದ ಬಗ್ಗೆ ವಿವರ

AV Eye Hospital ad

ವಾಸ್ತವವಾಗಿ, ಯುನೆಸ್ಕೋ 'ಕೊಲೆಯಾದ ಪತ್ರಕರ್ತರ ವೀಕ್ಷಣಾಲಯ' (‘observatory of killed journalists')  2020 ರಲ್ಲಿ ಭಾರತದಲ್ಲಿ ನಾಲ್ವರಲ್ಲ, ಆರು ಪತ್ರಕರ್ತರನ್ನು ಕೊಲ್ಲಲಾಗಿದೆ ಎಂದು ಹೇಳಿದೆ.  ಡಿಜಿಟಲ್ ಸುದ್ದಿ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾಗುವ ವಿಷಯವನ್ನು ನಿಯಂತ್ರಿಸಲು ಭಾರತ ಕಠೋರವಾದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಕುರಿತು ಆರ್‌ಎಸ್‌ಎಫ್‌ ವರದಿ ವಿಶ್ಲೇಷಿಸಿದೆ. 

ಈ ವರ್ಷದ ಫೆಬ್ರವರಿಯಲ್ಲಿ ಇತರ ಡಿಜಿಟಲ್ ವಿಷಯ ಪೂರೈಕೆದಾರರೊಂದಿಗೆ ಆನ್‌ಲೈನ್ ಸುದ್ದಿ ಪ್ಲಾಟ್‌ಫಾರ್ಮ್‌ಗಳನ್ನು 'ನಿಯಂತ್ರಿಸಲು' ಹೊಸ ನಿಯಮಗಳನ್ನು ಭಾರತವು ಜಾರಿಗೆ ತರುವ ಮುನ್ನ ಈ ಸೂಚ್ಯಂಕ ರೂಪಿಸಲಾಗಿದೆ. 

ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ ಎಂದು ವರದಿ ಹೇಳಿದೆ. ಅಲ್ಲದೆ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಅನ್ನು ವ್ಯಾಪಕವಾಗಿ ಟೀಕಿಸಲಾಗಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಸುದ್ದಿ ಮಾಧ್ಯಮಗಳಿಗೆ ಸಮಸ್ಯೆಯೊಡ್ಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವರದಿಯು ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಎತ್ತಿ ತೋರಿಸಿದೆ ಮತ್ತು ಭಾರತದಲ್ಲಿ "ಟ್ವಿಟರ್‌ನ ಅಲ್ಗಾರಿದಮ್‌ಗಳ ಅನಿಯಂತ್ರಿತ ಸ್ವರೂಪವು ಕ್ರೂರ ಸೆನ್ಸಾರ್‌ಶಿಪ್‌ಗೆ ಕಾರಣವಾಯಿತು" ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದೆ. "ದಿ ಕಾಶ್ಮೀರ್ ವಾಲಾ ನಿಯತಕಾಲಿಕದ ಬಗ್ಗೆ ಟ್ರೋಲ್ ಸೇನೆಗಳು ದೂ ನೀಡಿದ ಮೇಲೆ ಟ್ವಿಟರ್ ಯಾವುದೇ ಮನವಿಗೂ ಅವಕಾಶ ಕೊಡದೆ ಇದ್ದಕ್ಕಿದ್ದಂತೆ ಅದರ ಖಾತೆಯನ್ನು ಸ್ಥಗಿತಗೊಳಿಸಿದೆ" ಎನ್ನುವ ವಿಚಾರವನ್ನು ವರದಿ ಪ್ರಮುಖವಾಗಿ ಮುಂದಿಟ್ಟಿದೆ.

ಸೂಚ್ಯಂಕದಲ್ಲಿ ಭಾರತಕ್ಕೆ 142ನೇ ಸ್ಥಾನ 

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ-2021 ವರದಿಯನ್ವಯ ಭಾರತ ಸತತ ಎರಡನೇ ವರ್ಷ ಸೂಚ್ಯಂಕದಲ್ಲಿ 180 ದೇಶಗಳಲ್ಲಿ 142 ನೇ ಸ್ಥಾನದಲ್ಲಿದೆ. 
ಸೂಚ್ಯಂಕ ಪಟ್ಟಿಯಲ್ಲಿ ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ -106, ಶ್ರೀಲಂಕಾ-127, ಮ್ಯಾನ್ಮಾರ್-140 ಹಾಗೂ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಕ್ರಮವಾಗಿ 145 ಮತ್ತು 152 ಸ್ಥಾನಗಳಲ್ಲಿವೆ. 

ನಾರ್ವೆ, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಪಡೆದುಕೊಂಡು ಅಗ್ರಸ್ಥಾನದಲ್ಲಿವೆ. ಆಫ್ರಿಕಾದ ಎರಿಟ್ರಿಯಾ ಅತಿ ಕೆಳಗೆ 180ನೇ ಸ್ಥಾನದಲ್ಲಿದೆ. ಅದಕ್ಕೆ ಹಿಂದಿನ ಸ್ಥಾನಗಳಲ್ಲಿ ಚೀನಾ (177), ಉತ್ತರ ಕೊರಿಯಾ (179), ತುರ್ಕಮೆನಿಸ್ತಾನ್ (178) ಇವೆ.

ಅಮೆರಿಕ ವರದಿಯಲ್ಲೂ ಅಭಿವ್ಯಕ್ತಿ ಹಕ್ಕಿನ ಉಲ್ಲಂಘನೆ ಬಗ್ಗೆ ವಿವರಣೆ

2021ರ ವಾರ್ಷಿಕ ಅಮೆರಿಕದ ರಾಜ್ಯ ಇಲಾಖೆ ವರದಿ 'ಮಾನವ ಹಕ್ಕುಗಳ ಕುರಿತ ದೇಶದ ವರದಿಗಳು' ಆವೃತ್ತಿಯಲ್ಲಿ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಹಕ್ಕಿನ ಉಲ್ಲಂಘನೆ ಬಗ್ಗೆ ವಿವರಣೆ ನೀಡಿದೆ.

ಕಳೆದ ಜೂನ್‌ನಲ್ಲಿ, 'ಕಂಪು ಮೇಲ್' ಪತ್ರಿಕೆಯ ಪತ್ರಕರ್ತ ಶುಭಂ ಮಣಿ ತ್ರಿಪಾಠಿ ಅವರನ್ನು ಅಕ್ರಮ ಮರಳು ಗಣಿಗಾರಿಕೆಯ ತನಿಖಾ ವರದಿಗಳಿಗಾಗಿ ಉತ್ತರ ಪ್ರದೇಶದಲ್ಲಿ ಇಬ್ಬರು ಬಂದೂಕುಧಾರಿಗಳು ಕೊಲೆಗೈದಿದ್ದಾರೆ. ಹಾಸ್ಯನಟ ಮುನಾವರ್ ಫರುಕಿ ಮತ್ತು ಇತರ ನಾಲ್ವರನ್ನು ಅವರು ನೀಡದ, ಆದರೆ ಪ್ರದರ್ಶಿಸಲು ಯೋಜಿಸಿದ ಹಾಸ್ಯಕ್ಕಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದಡಿ ಬಂಧಿಸಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಬಗ್ಗೆ ವರದಿ ವಿವರಣೆ ನೀಡಿದೆ.

ಮಣಿಪುರಿ ಸಾಮಾಜಿಕ ಕಾರ್ಯಕರ್ತ ಎರೆಂಡ್ರೊ ಲೀಚೊಂಬಮ್ ಅವರನ್ನು ಕಳೆದ ಮೇ ತಿಂಗಳಲ್ಲಿ ಅವರ ಫೇಸ್ಬುಕ್ ಪೋಸ್ಟ್‌ಗಾಗಿ ಬಂಧಿಸಲಾಯಿತು. ಗೋವಿನ ಸಗಣಿ ಮತ್ತು ಗೋಮೂತ್ರವನ್ನು ಕೋವಿಡ್ -19 ಗೆ 'ಚಿಕಿತ್ಸೆ' ಎಂದು ಪ್ರತಿಪಾದಿಸಿದ ಬಿಜೆಪಿ ನಾಯಕನನ್ನು ಅವರು ಟೀಕಿಸಿದ್ದರು. ಕ್ರೂರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಎರಡು ತಿಂಗಳು ಬಂಧನಕ್ಕೊಳಪಟ್ಟ ನಂತರ ಅವರ ವಕೀಲರು ಸುಪ್ರೀಂ ಕೋರ್ಟ್‌ಗೆ ಹೋಗಿ ಜಾಮೀನು ತರಬೇಕಾಯಿತು. 

ಇಂಡಿಯಾ ಟುಡೇ ನಿರೂಪಕ ರಾಜದೀಪ್ ಸರ್ದೇಸಾಯಿ ವಿರುದ್ಧ ಆರೋಪಗಳ ಒಂದು ಶ್ರೇಣಿಯನ್ನು ದಾಖಲಿಸಲಾಗಿದೆ ಎಂದು ವರದಿಯು ದಾಖಲಿಸಿದೆ. ನ್ಯಾಷನಲ್ ಹೆರಾಲ್ಡ್ ಹಿರಿಯ ಸಲಹಾ ಸಂಪಾದಕ ಮೃಣಾಲ್ ಪಾಂಡೆ; ಕ್ವಾಮಿ ಆವಾಜ್ ಸಂಪಾದಕ ಜಾಫರ್ ಅಘಾ; ಕಾರವಾನ್ ಸಂಸ್ಥಾಪಕ ಪರೇಶ್ ನಾಥ್, ಸಂಪಾದಕ ಅನಂತ್ ನಾಥ್ ಮತ್ತು ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ. ಜೋಸ್; ಮತ್ತು ಸಂಸದ ಶಶಿ ತರೂರ್  ವಿರುದ್ಧ ಉತ್ತರ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಕರ್ನಾಟಕದ ಪೊಲೀಸ್ ಅಧಿಕಾರಿಗಳಿಂದ ದೂರು ದಾಖಲಾಗಿದೆ. 

ಇದನ್ನೂ ಓದಿದ್ದೀರಾ:? ಸುದ್ದಿ ವಿವರ| ಮೇವಾನಿ ಪ್ರಕರಣದ ವಿಚಾರಣೆ ಸಂದರ್ಭ ಅಸ್ಸಾಂ ಪೊಲೀಸ್‌ ರಾಜ್ಯವಾಗುವ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ

ಪತ್ರಿಕಾ ಸ್ವಾತಂತ್ರ್ಯದ ಕುರಿತು ಭಾರತೀಯ ನ್ಯಾಯಾಲಯಗಳು ಹೇಗೆ ತೀರ್ಪು ನೀಡಿವೆ?

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2018ರಲ್ಲಿ ಭಾರತವು 138 ನೇ ಸ್ಥಾನದಲ್ಲಿತ್ತು. ಇದು ಪತ್ರಕರ್ತರ ಸ್ವಾತಂತ್ರ್ಯದ ಅಳತೆಗೋಲಾಗಿದೆ.  ಹಾಗಾದರೆ ಕಳೆದ ಒಂದು ವರ್ಷದಿಂದ ಪತ್ರಿಕಾ ಸ್ವಾತಂತ್ರ್ಯದ ವಿಷಯದ ಕುರಿತು ನ್ಯಾಯಾಲಯಗಳು ಹೇಗೆ ತೀರ್ಪು ನೀಡಿವೆ?

2017ರ ಮಾರ್ಚ್‌ನಲ್ಲಿ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಬಿಜೆಪಿ ಅಭ್ಯರ್ಥಿ ಮತ್ತು ವಕೀಲ ತೇಜಸ್ವಿ ಸೂರ್ಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸದಂತೆ ನಲವತ್ತಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿತು.

ತಮ್ಮ ವಿರುದ್ಧದ ನಿಂದನೆಯ ಆರೋಪಗಳನ್ನು ವರದಿ ಮಾಡಿದ ಸುದ್ದಿಗಳನ್ನು ಪ್ರಸಾರ ಮಾಡಿದ ನಂತರ ತೇಜಸ್ವಿ ಸೂರ್ಯ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಕರ್ನಾಟಕ ಹೈಕೋರ್ಟ್‌ ಈ ಚುಟುಕು ಆದೇಶವನ್ನು ಪರಿಣಾಮಕಾರಿಯಾಗಿ ರದ್ದುಗೊಳಿಸಿತು.

"ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇದೆ ಎಂದು ಗಮನಿಸಿ. ಯಾವುದೇ ಅವಹೇಳನಕಾರಿ ಸುದ್ದಿಯಿಂದ ಸೂರ್ಯ ನೊಂದಿದ್ದರೆ, ಚುನಾವಣಾ ಆಯೋಗವನ್ನು ಸಂಪರ್ಕಿಸಲು ಅವರಿಗೆ ಸ್ವಾತಂತ್ರ್ಯವಿದೆ" ಎಂದು ಹೈಕೋರ್ಟ್‌ ಪೀಠವು ಅಂತಿಮವಾಗಿ ಹೇಳಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app