ಮಧ್ಯಪ್ರದೇಶ | ಬಾಲಕಿಯನ್ನು ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

  • ಬೆಡ್‌ ಖಾಲಿ ಇಲ್ಲದೇ ನೆಲದ ಮೇಲೆ ಬಾಲಕಿಯನ್ನು ಕುಳ್ಳಿರಿಸಿ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ
  • ದೇಶದ ಆರೋಗ್ಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದ ಟ್ವಿಟ್ಟಿಗರು

ಮಧ್ಯಪ್ರದೇಶದ ಸತ್ನಾ ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಹಾಸಿಗೆಗಳಿಲ್ಲದ ಕಾರಣ 15 ವರ್ಷದ ಬಾಲಕಿಗೆ ರಕ್ತ ನೀಡುವುದಕ್ಕಾಗಿ ನೆಲದ ಮೇಲೆ ಕುಳ್ಳಿರಿಸಲಾದ ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬರು ರಕ್ತದ ಬಾಟಲ್‌ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಾರೆ. ನೆಲದ ಮೇಲೆ ಕುಳಿತಿದ್ದ ಬಾಲಕಿಯ ಕೈಗೆ ಅದನ್ನು ಜೋಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸರ್ಕಾರದ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻʻಮಧ್ಯಪ್ರದೇಶದ ಆಸ್ಪತ್ರೆಯ ಈ ಚಿತ್ರ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ನೈಜತೆಯನ್ನು ತೋರಿಸುತ್ತದೆ. ಬಡತನವು ಬಡವರನ್ನು ಕೊಲ್ಲುತ್ತಿದೆಯೇ ಹೊರತು ರೋಗವಲ್ಲ!ʼʼ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದ ಕಾರಣ ಸಂತೋಷಿ ಕೇವತ್ ತನ್ನ ತಾಯಿಯೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆದರೆ, ಬಾಲಕಿಗೆ ಚಿಕಿತ್ಸೆ ನೀಡಲು ಖಾಲಿ ಹಾಸಿಗೆಗಳಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಆದರೆ ಮಗಳಿಗೆ ಚಿಕಿತ್ಸೆ ನೀಡುವಂತೆ ಮಹಿಳೆ ಬೇಡಿಕೊಂಡಿದ್ದು, ನಂತರ ಹುಡುಗಿಯನ್ನು ನೆಲದ ಮೇಲೆ ಕುಳಿತು ಚಿಕಿತ್ಸೆ ಪಡೆಯುವಂತೆ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಮುರುಘಾ ‍ಶ್ರೀ ಪ್ರಕರಣ | ಶಿವಮೂರ್ತಿ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ʻʻಇದು ಮಧ್ಯಪ್ರದೇಶದ ಮೈಹಾರ್‌ನ ಸಿವಿಲ್ ಆಸ್ಪತ್ರೆಯ ಚಿತ್ರ. ತಾಯಿ ರಕ್ತದ ಬಾಟಲ್ಲನ್ನು ಕೈಯಲ್ಲಿ ಹಿಡಿದಿದ್ದರೆ, ಅನಾರೋಗ್ಯ ಪೀಡಿತ ಮಗಳನ್ನು ನೆಲದ ಮೇಲೆ ಕೂರಿಸಲಾಗಿದೆ. ಇದು ಕ್ರೂರ ಮತ್ತು ನಿರ್ಲಜ್ಜ ಸರ್ಕಾರದ ಆಡಳಿತಕ್ಕೆ ಉದಾಹರಣೆʼʼ ಎಂದು ನರೇಶ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವನ್ನು ಬಿಂಬಿಸುವ ಫೋಟೋ ವೈರಲ್ ಆದ ನಂತರ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಅನುರಾಗ್ ವರ್ಮಾ ಅವರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುವಂತೆ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ.ಅಶೋಕ್ ಅವಧಿಯಾ ಅವರಿಗೆ ಸೂಚಿಸಿದರು. ತನಿಖೆಯ ನಂತರ, ಮೈಹಾರ್ ಆಸ್ಪತ್ರೆಯ ಉಸ್ತುವಾರಿ ಡಾ. ಪ್ರದೀಪ್ ನಿಗಮ್ ಮತ್ತು ಸ್ಟಾಫ್ ನರ್ಸ್ ಅಂಜು ಸಿಂಗ್ ಭತ್ಯೆ ಏರಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್