
- ಗಾಜಿಯಾಬಾದ್ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ
- ಅತ್ಯಾಚಾರ ಆರೋಪವೇ ಸುಳ್ಳು ಎನ್ನುತ್ತಿರುವ ಪೊಲೀಸರು
ಗಾಜಿಯಾಬಾದ್ದ 36 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿ, ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಮುಖ್ಯಸ್ಥೆ ಸ್ವಾತಿ ಮಲಿವಾಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದಿದ್ದಾರೆ.
ಮಹಿಳೆಯ ಸುಳ್ಳು ಎಂದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
"ಈ ಆರೋಪವು ತುಂಬಾ ಗಂಭೀರ ಮತ್ತು ಆಘಾತಕಾರಿಯಾಗಿದ್ದು, ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವಂತೆ ಮನವಿ ಮಾಡುತ್ತೇನೆ. ಪ್ರಕರಣದ ಕುರಿತು ಸತ್ಯಗಳನ್ನು ಪರಿಶೀಲಿಸಬೇಕಾಗಿದೆ. ಅದಕ್ಕಾಗಿ ಉನ್ನತ ಮಟ್ಟದ ಸಮಿತಿ ಅಗತ್ಯವಿದೆʼʼ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.
ʻʻಅತ್ಯಾಚಾರ ನಡೆದಿದೆ ಎಂದು ಮಹಿಳೆ ಹೇಳಿರುವುದು ಸುಳ್ಳು ಆರೋಪವಾಗಿದ್ದು, ಮಹಿಳೆ ಮತ್ತು ಆರೋಪಿಸಲಾಗಿದ್ದ ಪುರುಷರ ನಡುವೆ ಆಸ್ತಿ ಕಾರಣಕ್ಕೆ ವಿವಾದ ನಡೆಯುತ್ತಿತ್ತು. ಅವರನ್ನು ಬಂಧಿಸಲು ಮಹಿಳೆ ಸುಳ್ಳು ಆರೋಪ ಮಾಡಿದ್ದಾರೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ʻʻಐದು ಮಂದಿ ಪರಿಚಿತರು ತನ್ನನ್ನು ಅಪಹರಿಸಿ, ಎರಡು ದಿನ ಬಂಧನದಲ್ಲಿಟ್ಟು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರುʼʼ ಎಂದು ಉತ್ತರ ಪ್ರದೇಶದ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಕುಮಾರ್ ಗುರುವಾರ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರಧಾನಿಯಿಂದ 'ರೋಜ್ಗಾರ್ ಮೇಳ'ಕ್ಕೆ ಚಾಲನೆ; ಭರವಸೆ ನೀಡಿದ 16 ಕೋಟಿ ಉದ್ಯೋಗಗಳೆಲ್ಲಿ ಎಂದು ಪ್ರಶ್ನಿಸಿದ ಕಾಂಗ್ರೆಸ್
ʻʻಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಿಟಿಬಿ ಆಸ್ಪತ್ರೆಯ ನರ್ಸ್ನಿಂದ ಅಕ್ಟೋಬರ್ 18ರಂದು ಮಹಿಳಾ ಆಯೋಗದ ಸಹಾಯವಾಣಿ 181 ಕರೆ ಮಾಡಿ ಆಪ್ತಸಮಾಲೋಚನೆ ನಡೆಸಲು ಸಮಾಲೋಚಕರನ್ನು ಕಳುಹಿಸುವಂತೆ ಕೇಳಿದ್ದರು. ಆ ತಕ್ಷಣವೇ ಆಪ್ತಸಮಾಲೋಚಕರನ್ನು ಆಸ್ಪತ್ರೆಗೆ ಕಳುಹಿಸಲಾಯಿತುʼʼ ಎಂದು ಮಲಿವಾಲ್ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ʻʻಆಪ್ತ ಸಮಾಲೋಚಕರೊಂದಿಗಿನ ಸಂವಾದದ ಸಮಯದಲ್ಲಿ, ಮಹಿಳೆ ತನ್ನನ್ನು ಐವರು ಪುರುಷರು, ಎರಡು ದಿನಗಳ ಕಾಲ ಬಂಧನದಲ್ಲಿರಿಸಿ, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ, ಈ ಘಟನೆ ಸಂದರ್ಭದಲ್ಲಿ ಆರೋಪಿಗಳು, ತನ್ನ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್ ಬಳಸಿದ್ದಾರೆʼʼ ಎಂದಿರುವುದಾಗಿ ಮಲಿವಾಲ್ ವಿವರಿಸಿದ್ದಾರೆ.
ಡಿಸಿಡಬ್ಲ್ಯು ಮಹಿಳೆಯ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ್ದು, ಆಕೆಯನ್ನು ಹಗ್ಗದಿಂದ ಕಟ್ಟಲಾಗಿದೆ, ಆಕೆಯ ದೇಹದ ಮೇಲೆ ಕಚ್ಚಿದ ಗುರುತುಗಳು, ಆಕೆಯ ತೊಡೆ ಮತ್ತು ಕತ್ತಿನ ಭಾಗದಲ್ಲಿ ರಕ್ತಸ್ರಾವವಾಗಿದೆ ಎಂಬುದನ್ನು ತಿಳಿಸಿದೆ. ಆಕೆಯ ಖಾಸಗಿ ಭಾಗಗಳಿಂದ ʻಸುಮಾರು 5-6 ಸೆಂ.ಮೀ ಉದ್ದದ ಕಬ್ಬಿಣದ ರಾಡನ್ನುʼ ತೆಗೆದುಹಾಕಿರುವುದು ವರದಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 18ರಂದು ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಗಾಜಿಯಾಬಾದ್ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 342 ಮತ್ತು 376 ಡಿ (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ದೆಹಲಿ ನಿವಾಸಿಯಾಗಿರುವ ಕಾರಣ ಡಿಸಿಡಬ್ಲ್ಯೂ ಅಕ್ಟೋಬರ್ 19ರಂದು ಉತ್ತರ ಪ್ರದೇಶ ಪೊಲೀಸರಿಗೆ ನೋಟಿಸ್ ನೀಡಿತ್ತು.
ʻʻಮಹಿಳೆಯ ಆರೋಪಗಳು ಆಧಾರರಹಿತವಾಗಿವೆ. ಆಸ್ತಿ ವಿವಾದದ ಬಗ್ಗೆ ದೂರಿನಲ್ಲಿ ಹೆಸರಿಸಲಾದ ಐದು ಪುರುಷರ ವಿರುದ್ಧ ಮಹಿಳೆಯು ಸಂಚು ರೂಪಿಸಿ, ಅತ್ಯಾಚಾರದ ಆರೋಪ ಹೆಸರಿಸಿದ್ದಾರೆ. ಇದು ಸುಳ್ಳು ಆರೋಪ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆʼʼ ಎಂದು ಪೊಲೀಸರು ಹೇಳಿದ್ದಾರೆ.