ಮಕ್ಕಳ ಅಶ್ಲೀಲ ವಿಡಿಯೋ ₹20ಕ್ಕೆ ಮಾರಾಟ; ಟ್ವಿಟರ್‌, ದೆಹಲಿ ಪೊಲೀಸರಿಗೆ ಮಹಿಳಾ ಆಯೋಗದ ಸಮನ್ಸ್‌

  • ಮೈಕ್ರೋಬ್ಲಾಂಗಿಗ್‌ ಸೈಟ್‌ಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು, ಅತ್ಯಾಚಾರ ವಿಡಿಯೋಗಳ ಪ್ರಸಾರ
  • ಟ್ವಿಟರ್‌ನಲ್ಲಿ ಮಾರಾಟವಾಗುತ್ತಿರುವ ಅಶ್ಲೀಲ ವಿಡಿಯೋಗಳ ವಿರುದ್ಧ ಕ್ರಮಕ್ಕೆ ಮುಂದಾದ ಆಯೋಗ

ಮೈಕ್ರೋಬ್ಲಾಗಿಂಗ್ ಸೈಟ್‌ಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಪ್ರಕಟಿಸುವುದು ಮತ್ತು ಅವುಗಳ ವ್ಯಾಪಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರು ಮತ್ತು ಟ್ವಿಟರ್‌ಗೆ ಮಂಗಳವಾರ ಸಮನ್ಸ್‌ ಜಾರಿ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ₹20ಕ್ಕೆ ಮಾರಾಟ ಮಾಡಲಾಗಿದೆ. ಅಂತಹ ಪೋಸ್ಟ್‌ಗಳನ್ನು ಅಳಿಸಿ ಹಾಕುವಲ್ಲಿ ಸಾಮಾಜಿಕ ಜಾಲತಾಣಗಳು ವಿಫಲವಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಮನ್ಸ್‌ಗೆ ಪ್ರತಿಕ್ರಿಯಿಸಲು ಟ್ವಿಟರ್ ಮತ್ತು ದೆಹಲಿ ಪೊಲೀಸರಿಗೆ ಸೆಪ್ಟೆಂಬರ್ 26ರವರೆಗೆ ಸಮಯ ನೀಡಲಾಗಿದೆ ಎಂದು ಮಲಿವಾಲ್ ಹೇಳಿದ್ದಾರೆ.

“ಯುವತಿಯರ ಅತ್ಯಾಚಾರದ ವಿಡಿಯೋಗಳನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ. ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋಗಳನ್ನು ʻಗುಪ್ತಚರ ಕ್ಯಾಮರಾʼಗಳ (ಇಂಟೆಲಿಜೆನ್ಸ್‌ ಕ್ಯಾಮರಾ) ಮೂಲಕ ಹಾಕಲಾಗುತ್ತಿದೆ. ಇಂತಹ ಕಂಪನಿಗಳು ವಿದೇಶದಲ್ಲಿ ಕಾನೂನುಗಳನ್ನು ಅನುಸರಿಸುತ್ತವೆ. ಆದರೆ, ಭಾರತದಲ್ಲಿ ಮಹಿಳೆಯರ ಮೇಲಿನ ಅಶ್ಲೀಲತೆ ಮತ್ತು ಅತ್ಯಾಚಾರದ ಬಗ್ಗೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿವೆ" ಎಂದು ಮಲಿವಾಲ್ ಟ್ವೀಟ್‌ ಮಾಡಿದ್ದಾರೆ.

ʻʻಇಂತಹ ವೇದಿಕೆಯಲ್ಲಿ ಈ ಬಗೆಯ ವಿಡಿಯೋಗಳು ಹೇಗೆ ಅಸ್ತಿತ್ವದಲ್ಲಿವೆ? ಇಂತಹ ವಸ್ತು ವಿಷಯ ಹೊಂದಿರುವ ಪೋಸ್ಟ್‌ಗಳನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಕಂಪನಿಯು ಯಾವ ನೀತಿಗಳನ್ನು ಹೊಂದಿದೆ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದೇನೆ. ಅಂತಹ ವಿಡಿಯೋಗಳನ್ನು ಚಿತ್ರೀಕರಿಸುವ ಮತ್ತು ಅಪ್‌ಲೋಡ್ ಮಾಡುವವರು ಮತ್ತು ಬಲಿಪಶುಗಳು ಮತ್ತು ಆರೋಪಿಗಳನ್ನು ಗುರುತಿಸಿ, ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.

"ಚಂಡೀಗಢ ವಿಶ್ವವಿದ್ಯಾಲಯದ ಘಟನೆಯು ನನ್ನನ್ನು ಯೋಚಿಸುವಂತೆ ಮಾಡಿತು. ಹಾಗೆಯೇ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ನಮ್ಮ ತಂಡವನ್ನು ಕೇಳಿದ್ದೇನೆ. ಟ್ವಿಟರ್‌ನಲ್ಲಿ ಅಪ್ರಾಪ್ತ ಬಾಲಕಿಯರ ಅತ್ಯಾಚಾರದ ವಿಡಿಯೋಗಳಿರುವುದು ಕಂಡುಬಂದಿದೆ. ಕೆಲವು ಸಾಮಾಜಿಕ ಜಾಲತಾಣದ ವೇದಿಕೆಗಳು ಈ ವಿಡಿಯೋಗಳನ್ನು ₹20ರಿಂದ ₹30ಗಳಿಗೆ ಮಾರಾಟ ಮಾಡುತ್ತಿವೆ” ಎಂದು ಮಲಿವಾಲ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ರಾಷ್ಟ್ರ ಮಟ್ಟದ ಕಾವ್ಯ ಕಮ್ಮಟ: ಕರ್ನಾಟಕ ಸಾಹಿತ್ಯ ಅಕಾಡೆಮಿ

ಆಕ್ಷೇಪಾರ್ಹ ವಿಡಿಯೋ ಸೋರಿಕೆ; ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಚಿತ್ರೀಕರಿಸಿ, ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿನಿಯರು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾಸ್ಟೆಲ್‌ ವಿದ್ಯಾರ್ಥಿನಿ, ಆಕೆಯ ಸ್ನೇಹಿತ ಹಾಗೂ ಶಿಮ್ಲಾದ ವ್ಯಕ್ತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಹಾಸ್ಟೆಲ್‌ ವಾರ್ಡನ್‌ ಅನ್ನು ಬಂಧಿಸಲಾಗಿದೆ. ಪ್ರಸ್ತುತ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಮುಂದಿನ ಶನಿವಾರದವರೆಗೆ ವಿಶ್ವವಿದ್ಯಾಲಯವನ್ನು ಮುಚ್ಚಿರುವುದಾಗಿ ವಿಶ್ವವಿದ್ಯಾಲಯ ಆಡಳಿತವು ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸಲು ಮೂವರು ಮಹಿಳಾ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್