ರಾಜಸ್ಥಾನ ಬಾಲಕನ ಕೊಲೆ ಪ್ರಕರಣ| ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಎನ್‌ಸಿಪಿಸಿಆರ್ ತಾಕೀತು

dalit boy
  • ದಲಿತ ಬಾಲಕನ ಸಾವಿನ ಪ್ರಕರಣ: ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ
  • ಎಫ್‌ ಐಆರ್‌ ಪ್ರತಿ ಸಹಿತ ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ

ತನ್ನ ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನನ್ನು ಶಾಲೆಯ ಶಿಕ್ಷಕನೇ ಹೊಡೆದು ಸಾಯಿಸಿದ ರಾಜಸ್ಥಾನದ ಜೋಲಾರ್‌ ಪ್ರಕರಣದ ಆರೋಪಿಯ ವಿರುದ್ಧ ಇದೀಗ ರಾಷ್ಟ್ರೀಯ ಮಕ್ಕಳು ಹಕ್ಕು ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಕಠಿಣ ಕ್ರಮಕೈಗೊಳ್ಳುವಂತೆ ಅಲ್ಲಿನ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ರಾಜಸ್ಥಾನದ ಜೋಲಾರ್‌ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯ ಇಂದ್ರ ಮೇಘವಾಲ್‌ ಎಂಬ ಒಂಭತ್ತು ವರ್ಷದ ಬಾಲಕ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಎಂಬ ಕಾರಣಕ್ಕೆ ಖಾಸಗಿ ಶಾಲೆಯ ಶಿಕ್ಷಕ ಚೈಲ್ ಸಿಂಗ್‌ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ, ಬಾಲಕ ಕಳೆದ ವಾರ ಸಾವು ಕಂಡಿದ್ದ. ಬಾಲಕನ ಸಾವಿನ ಬಳಿಕ ಪೊಲೀಸರು, ಶಿಕ್ಷಕ ಚೈಲ್‌ ಸಿಂಗ್‌ ಅವರನ್ನು ಕೊಲೆ ಆರೋಪದಡಿ ಬಂಧಿಸಿದ್ದರು.

ಇದೀಗ ಘಟನೆಯ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗೆ ಎನ್‌ಸಿಪಿಸಿಆರ್‌ ಪತ್ರಬರೆದಿದ್ದು, ಇದೊಂದು ಗಂಭೀರ ಪ್ರಕರಣವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ಮತ್ತು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪ್ರಕರಣದ ಎಫ್‌ ಐಆರ್‌ ಪ್ರತಿ ಸಹಿತ ಒಂದು ತಿಂಗಳಲ್ಲಿ ವರದಿ ಸಲ್ಲಿಸಿ ಎಂದು ಸೂಚಿಸಿದೆ.

ಈ ನಡುವೆ ರಾಜಸ್ಥಾನದ ಶಿಕ್ಷಣ ಇಲಾಖೆ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ. ಕಾಂಗ್ರೆಸ್‌ ಆಡಳಿತದ ರಾಜ್ಯದಲ್ಲಿ ದಲಿತ ಬಾಲಕನನ್ನು ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಶಿಕ್ಷಕನೇ ಹೊಡೆದು ಸಾಯಿಸಿದ ಘಟನೆ ರಾಷ್ಟ್ರವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. 

ಆದರೆ, ಅಲ್ಲಿನ ಕಾಂಗ್ರೆಸ್‌ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ದಲಿತರ ಮೇಲಿನ ದೌರ್ಜನ್ಯದ ಇಂತಹ ಘಟನೆಗಳು ಕೇವಲ ರಾಜಸ್ಥಾನದಲ್ಲಿ ಮಾತ್ರವಲ್ಲ; ದೇಶದ ಬೇರೆ ರಾಜ್ಯಗಳಲ್ಲಿಯೂ ನಡೆದಿವೆ ಎಂದು ಹೇಳಿಕೆ ನೀಡುವ ಮೂಲಕ ಘಟನೆಯನ್ನು ಅದೊಂದು ಮಾಮೂಲಿ ಘಟನೆ ಎಂಬಂತೆ ತಳ್ಳಿಹಾಕುವ ಪ್ರಯತ್ನ ಮಾಡಿದ್ದರು. ಅವರ ಅಂತಹ ಹೇಳಿಕೆಯ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪ್ರತಿ ಪಕ್ಷ ಬಿಜೆಪಿ ಶಾಲೆಯ ಆಡಳಿತ ಮಂಡಳಿ ಮತ್ತು ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು. “ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಪದೇಪದೆ ಮರುಕಳಿಸುತ್ತಲೇ ಇವೆ. ಮುಖ್ಯಮಂತ್ರಿ ಮತ್ತು ಸರ್ಕಾರ ದುರ್ಬಲವಾಗಿದ್ದಾಗ ಇಂತಹ ಹೇಯ ಘಟನೆಗಳು ಮೇಲಿಂದ ಮೇಲೆ ನಡೆಯುವುದು ಸಹಜ” ಎಂದು ಬಿಜೆಪಿ ಹೇಳಿತ್ತು. ಅಲ್ಲದೆ, ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವಂತೆಯೂ ಬಿಜೆಪಿ ಆಗ್ರಹಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್