ನವದೆಹಲಿ | ಎನ್‌ಐಎಯಿಂದ ಸಕ್ರಿಯ ಐಸಿಸ್‌ ಸದಸ್ಯ ಬಂಧನ

  • ವಾರದ ಆರಂಭದಲ್ಲಿ ಕರ್ನಾಟದಲ್ಲಿ ಮೂವರ ಬಂಧನ
  • ನಿಧಿ ಸಂಗ್ರಹಿಸುತ್ತಿದ್ದ ಆರೋಪ ಮೇಲೆ ಬಂಧಿಸಿದ ಎನ್‌ಐಎ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ನವದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಇಸ್ಲಾಮಿಕ್ ಸ್ಟೇಟ್ಸ್‌ ಮಾದರಿ (ಐಎಸ್‌ಐಎಸ್) ಪ್ರಕರಣದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಬ್ಬ ಆರೋಪಿಯನ್ನು ಬಂಧಿಸಿದೆ.

ಆರೋಪಿಯನ್ನು ಮೊಹ್ಸಿನ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಶನಿವಾರ ಬಂಧಿಸಲಾಗಿದೆ. 

ತನಿಖಾ ಸಂಸ್ಥೆಯ ಪ್ರಕಾರ, ಅಹ್ಮದ್ ಪಾಟ್ನಾ ನಿವಾಸಿಯಾಗಿದ್ದಾರೆ. "ಬಂಧಿತ ಐಸಿಸ್‌ನ ಸಕ್ರಿಯ ಸದಸ್ಯ. ಭಾರತ ಸೇರಿದಂತೆ ವಿದೇಶಗಳಲ್ಲಿ ಸಹಾನುಭೂತಿ ಹೊಂದಿರುವವರಿಂದ ಐಸಿಸ್‌ಗಾಗಿ ನಿಧಿ ಸಂಗ್ರಹಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ಐಸಿಸ್‌ನ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ, ಆರೋಪಿ ನಿಧಿ ಸಂಗ್ರಹಿಸುತ್ತಿದ್ದ. ಸಿರಿಯಾ ಮತ್ತು ಇತರ ಸ್ಥಳಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ  ಸಂಗ್ರಹವಾದ ಹಣವನ್ನು ಕಳಿಸುತ್ತಿದ್ದರು. ಐಸಿಸ್‌ನ ಆನ್‌ಲೈನ್‌ ಮತ್ತು ಸ್ಥಳೀಯ ಚಟುವಟಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಜೂನ್ 25ರಂದು ಪ್ರಕರಣ ದಾಖಲಿಸಲಾಗಿದ್ದು, ಆಗಸ್ಟ್‌ 6ರಂದು ಆರೋಪಿ ಮೊಹ್ಸಿನ್‌ ಅಹ್ಮದ್ ಅವರ ಮನೆ ಮೇಲೆ ಶೋಧ ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ.

ಒಂದೇ ವಾರದಲ್ಲಿ ಐಸಿಸ್‌ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ, ಕರ್ನಾಟಕದಲ್ಲಿ ಮೂವರು ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. 

ಈ ಸುದ್ದಿ ಓದಿದ್ದೀರಾ? ಪ್ರಧಾನಿ ನಿವಾಸ ಘೇರಾವ್ | ರಾಹುಲ್ ಗಾಂಧಿ ಸೇರಿ ಕೆಲವು ಸಂಸದರ ಬಂಧನ

ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ತುಮಕೂರು ಜಿಲ್ಲೆಯ ಎರಡು ಕಡೆ ದಾಳಿ ನಡೆಸಲಾಗಿದೆ. ಎರಡು ಪ್ರಕರಣಗಳಲ್ಲಿ ಎನ್‌ಐಎ ಸ್ಥಳೀಯ ಪೊಲೀಸರ ಬೆಂಬಲ ಕೋರಿದೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತರಲ್ಲಿ ಒಬ್ಬನನ್ನು ಮಹಾರಾಷ್ಟ್ರ ಮೂಲದ ಸಾಜಿದ್ ಮಕ್ರಾನಿ ಎಂದು ಗುರುತಿಸಲಾಗಿದೆ. ಈತ ತುಮಕೂರಿನ ಯುನಾನಿ ಕಾಲೇಜಿನಲ್ಲಿ ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಗುಜರಾತ್, ಬಿಹಾರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳ 13 ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸಿತ್ತು. ಈ ಪ್ರಕರಣವನ್ನು ಜೂನ್ 25ರಂದು ದೆಹಲಿಯಲ್ಲಿ ಎನ್‌ಐಎ ಸ್ವಯಂಪ್ರೇರಿತವಾಗಿ ಐಪಿಸಿಯ ಸೆಕ್ಷನ್ 153 ಎ, 153 ಬಿ ಹಾಗೂ ಯುಎ (ಪಿ) ಕಾಯ್ದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40 ದಾಖಲಿಸಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180