ಆಲ್ಟ್‌ ನ್ಯೂಸ್‌' ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್‌ ಝುಬೇರ್‌ ಮತ್ತೆ ನಾಲ್ಕು ದಿನ ಪೊಲೀಸರ ವಶಕ್ಕೆ

zubair
  • ಝುಬೇರ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ ಪರಿಶೀಲನೆಗೆ ಕೋರ್ಟ್‌ ಆದೇಶ
  • ʼಸಿಆರ್‌ಪಿಸಿ ಸೆಕ್ಷನ್‌ 41ಎʼ ಅಡಿ ಆರೋಪಿ ಝುಬೇರ್‌ಗೆ ನೋಟಿಸ್‌

ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಜೂನ್‌ 27ರಂದು ಬಂಧನಕ್ಕೆ ಒಳಗಾಗಿದ್ದ 'ಆಲ್ಟ್‌ ನ್ಯೂಸ್‌' ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್‌ ಝುಬೇರ್‌ ಅವರನ್ನು ದೆಹಲಿಯ ನ್ಯಾಯಾಲಯವು ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

"ಝುಬೇರ್‌ ಅವರು ಪೊಲೀಸ್‌ ತನಿಖೆಗೆ ಸಹಕರಿಸುತ್ತಿಲ್ಲ. ಝುಬೇರ ಬಳಿಸಿರುವ ಫೋನ್‌ ಮತ್ತು ಲ್ಯಾಪ್‌ಟಾಪ್‌ ಪಡೆಯಲು ಅವರನ್ನು ಬೆಂಗಳೂರಿಗೆ ಕರೆದೊಯ್ಯಬೇಕಿದೆ" ಎಂದು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸ್ನಿಗ್ಧಾ ಸರ್ವರಿಯಾ ಹೇಳಿದ್ದಾರೆ.

“ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ಆರೋಪಿಗೆ ನೋಟಿಸ್‌ ನೀಡಲಾಗಿದ್ದು, ಈ ಪ್ರಕ್ರಿಯೆ ಪೊಲೀಸ್‌ ದಾಖಲೆಯ ಭಾಗವಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

"ಆಕ್ಷೇಪಾರ್ಹ ಟ್ವೀಟ್‌ನಲ್ಲಿ ಬಳಸಿರುವ ಚಿತ್ರವು 1983ರಲ್ಲಿ ತೆರೆ ಕಂಡಿದ್ದ “ಕಿಸಿ ಸೆ ನಾ ಕೇಹ್ನಾ” ಚಿತ್ರದ ಭಾಗವಾಗಿತ್ತು ಎಂಬ ವಾದವು ಈ ಹಂತದಲ್ಲಿ ಆರೋಪಿಯ ನೆರವಿಗೆ ಬರುವುದಿಲ್ಲ" ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ದೆಹಲಿ ಪೊಲೀಸರು ಝುಬೇರ್‌ ಅವರನ್ನು ಸೋಮವಾರ ಬಂಧಿಸಿದ್ದು, ಡ್ಯೂಟಿ ಮ್ಯಾಜಿಸ್ಟ್ರೇಟ್‌ ಅವರು ಝುಬೇರ್‌ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸರ ವಶಕ್ಕೆ ನೀಡಿದ್ದರು. ಕಸ್ಟಡಿ ಅವಧಿ ಮುಗಿದ ಬಳಿಕ ಝುಬೇರ್‌ ಅವರನ್ನು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸ್ನಿಗ್ಧಾ ಸರ್ವರಿಯಾ ಮುಂದೆ ಹಾಜರುಪಡಿಸಲಾಗಿತ್ತು.

ಈ ವೇಳೆ ಝುಬೇರ್ ಪರ ವಕೀಲೆ ವೃಂದಾ ಗ್ರೋವರ್‌ ಅವರು, "ಝುಬೇರ್‌ ಟ್ವೀಟ್‌ ಮಾಡಿರುವ ಚಿತ್ರ 1983ರ ʼಕಿಸಿ ಸೆ ನಾ ಕೆಹನಾʼ ಚಲನಚಿತ್ರದ್ದು. ಈ ಚಿತ್ರವು ಅನೇಕರ ಟ್ವೀಟ್‌ಗಳಲ್ಲಿದೆ. ಈ ಚಿತ್ರವು ಹಿಂದಿ ಸಿನಿಮಾದ್ದಾಗಿದ್ದು, ಆ ಚಿತ್ರವನ್ನು ನಿಷೇಧಿಸಿರಲಿಲ್ಲ. ಎಲ್ಲರೂ ಇದನ್ನು ನೋಡಿದ್ದರು ಎಂದು ವಾದಿಸಿದರು.

ಈ ಸುದ್ದಿ ಓದಿದ್ದೀರಾ?: ಮಾನವ ಹಕ್ಕುಗಳ ಹೋರಾಟದಲ್ಲಿ ತೀಸ್ತಾ ಸೆಟಲ್ವಾಡ್ ಎಂಬ ಜಾಗೃತ ನದಿ

"ಅನೇಕರು ಇದನ್ನು ಟ್ವೀಟ್ ಮಾಡಿದ್ದರೂ ನನ್ನ ಕಕ್ಷಿದಾರರನ್ನು ಮಾತ್ರವೇ ಗುರಿಯಾಗಿಸಿಕೊಳ್ಳಲಾಗಿದೆ. ಅವರು ಬಲಿಷ್ಠ ವ್ಯಕ್ತಿಗಳಿಗೆ ಸವಾಲು ಒಡ್ಡಿರಬಹುದು. ಆದರೆ ಇದುವೇ ಅವರಿಗೆ ಕಿರುಕುಳ ನೀಡಲು ಕಾರಣವಾಗಬಾರದು" ಎಂದು ವಿವರಿಸಿದರು.

ಮುಂದುವರೆದು, "ಪೊಲೀಸರು ತನಿಖೆಗಾಗಿ ಲ್ಯಾಪ್‌ಟಾಪ್‌ ಕೇಳುತ್ತಿದ್ದಾರೆ. ಆದರೆ, ಅದರಲ್ಲಿ ವೈಯಕ್ತಿಕ ಮಾಹಿತಿ ಇದೆ. ಕಕ್ಷಿದಾರರು ಪತ್ರಕರ್ತರು. ಪತ್ರಕರ್ತರ ಬಳಿ ಸೂಕ್ಷ್ಮ ಮಾಹಿತಿ ಇರುತ್ತವೆ ಎಂದು ಲ್ಯಾಪ್‌ಟಾಪ್ ಅನ್ನು ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ " ಎಂದು ಪ್ರತಿಪಾದಿಸಲು ಮುಂದಾದರು. ಆದರೆ, ನ್ಯಾಯಾಲಯವು ವಕೀಲರ ಈ ಯಾವುದೇ ಹೇಳಿಕೆಗಳನ್ನು ಪರಿಗಣಿಸಲಿಲ್ಲ.

ಪ್ರಕರಣದ ಹಿನ್ನೆಲೆ

ಝುಬೇರ್ ಅವರ 2018ರಲ್ಲಿ ಮಾಡಿದ್ದ ಒಂದು ಟ್ವೀಟ್‌ಗಾಗಿ ಐಪಿಸಿ ಸೆಕ್ಷನ್ 153ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 295ಎ (ಧಾರ್ಮಿಕ ಭಾವನೆಗಳ ನಿಂದನೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಸಲುವಾಗಿ ಝುಬೇರ್ ಆಕ್ಷೇಪಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಎಂದು ಟ್ವಿಟರ್ ಖಾತೆದಾರರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಝುಬೇರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app