ದೆಹಲಿ | ಮಸೀದಿಗೆ ಭೇಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದ ಆರೆಸ್ಸೆಸ್‌ ಮುಖ್ಯಸ್ಥ ಭಾಗವತ್

  • ನಾವು ಒಂದೇ ಕುಟುಂಬದಂತೆ ಚರ್ಚೆ ನಡೆಸಿದ್ದೇವೆ
  • ಆಹ್ವಾನದ ಮೇರೆಗೆ ಮಸೀದಿಗೆ ಭೇಟಿ ನೀಡಿದ ಭಾಗವತ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ್ ಭಾಗವತ್ ಅವರು ದೆಹಲಿಯಲ್ಲಿ ಮಸೀದಿಗೆ ಭೇಟಿ ನೀಡಿದ್ದು, ಮುಸ್ಲಿಂ ಮುಖಂಡರು ಮತ್ತು ಧರ್ಮ ಗುರುಗಳೊಂದಿಗೆ ಗುರುವಾರ ಸಭೆ ನಡೆಸಿದ್ದಾರೆ.

ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಧರ್ಮಗುರು ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ದೆಹಲಿಯ ಮಸೀದಿಯಲ್ಲಿ ಭೇಟಿಯಾಗಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸಭೆ ನಡೆಸಿದ್ದಾರೆ.

ಭಾಗವತ್ ಅವರೊಂದಿಗೆ ಸಂಘದ ಹಿರಿಯ ಪದಾಧಿಕಾರಿಗಳಾದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್, ರಾಮ್ ಲಾಲ್ ಹಾಗೂ ಇಂದ್ರೇಶ್ ಕುಮಾರ್ ಇದ್ದರು. ಲಾಲ್ ಈ ಹಿಂದೆ ಬಿಜೆಪಿಯ ಸಾಂಸ್ಥಿಕ ಕಾರ್ಯದರ್ಶಿಯಾಗಿದ್ದರೆ, ಕುಮಾರ್ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಪೋಷಕರಾಗಿದ್ದಾರೆ.

ಮೋಹನ್ ಭಾಗವತ್ ಇತ್ತೀಚೆಗೆ ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೆರ್ವಾನಿ ಅವರನ್ನು ಭೇಟಿ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ರಾಹುಲ್ ಗಾಂಧಿ ಸಂವಾದ

"ನಾವು ಒಂದೇ ಕುಟುಂಬದಂತೆ ಚರ್ಚೆ ನಡೆಸಿದ್ದೇವೆ. ದೇಶಕ್ಕೆ ಇದೊಂದು ಒಳ್ಳೆಯ ಸಂದೇಶ ರವಾನಿಸಿದೆ. ನಮ್ಮ ಆಹ್ವಾನದ ಮೇರೆಗೆ ಅವರು ಬಂದಿರುವುದು ಅದ್ಭುತವಾಗಿದೆ" ಎಂದು ಧರ್ಮಗುರುಗಳ ಮಗ ಸುಹೈಬ್ ಇಲ್ಯಾಸಿ ಹೇಳಿದ್ದಾರೆ.

ಆರೆಸ್ಸೆಸ್‌ ಮುಖ್ಯಸ್ಥರು ಇತ್ತೀಚೆಗೆ ಮುಸ್ಲಿಂ ಮುಖಂಡರನ್ನು ಭೇಟಿಯಾಗಿ "ಕೋಮು ಸೌಹಾರ್ದತೆ ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಆರ್‌ ಎಸ್‌ ಎಸ್ ಸಂಘಟನೆ ತಿಳಿಸಿದೆ.

ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದ ಬಳಿಕ ನಡೆಯುತ್ತಿರುವ ಮಹತ್ವದ ಸಭೆ ಇದಾಗಿದೆ. 

"ಆರೆಸ್ಸೆಸ್‌ ಸರಸಂಘಚಾಲಕ ಮೋಹನ್ ಭಾಗವತ್ ಅವರು ಎಲ್ಲ ವರ್ಗದ ಜನರನ್ನೂ ಭೇಟಿ ಮಾಡುತ್ತಾರೆ. ಇದೊಂದು ನಿರಂತರ ಸಂವಾದದ ಭಾಗವಾಗಿದೆ" ಎಂದು ಆರೆಸ್ಸೆಸ್‌ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಮೋಹನ್ ಭಾಗವತ್ ಅವರು ಐವರು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ, ದೇಶದಲ್ಲಿನ ಪ್ರಸ್ತುತ ವಾತಾವರಣದ ಬಗ್ಗೆ ತಮ್ಮ ಕಳವಳವನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ದೇಶಾದ್ಯಂತ ಪಿಎಫ್‌ಐ ಮುಸ್ಲಿಂ ಸಂಘಟನೆಯ ಮೇಲೆ ಎನ್‌ ಐಎ ದಾಳಿ ನಡೆಯುತ್ತಿರುವಾಗಲೇ ಆರ್‌ ಎಸ್‌ ಎಸ್‌ ನಾಯಕ ಭಾಗವತ್‌ ಅವರು ಮುಸ್ಲಿಂ ಧರ್ಮಗುರುಗಳು ಮತ್ತು ಬುದ್ದಿಜೀವಿಗಳನ್ನು ನಿರಂತರವಾಗಿ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್