ಅತ್ಯಾಚಾರಿ ರಾಮ್‌ ರಹೀಮ್‌ ಪೆರೋಲ್‌ ರದ್ದುಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ದೆಹಲಿ ಮಹಿಳಾ ಆಯೋಗ ಮನವಿ

  • 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮ್‌ ರಹೀಮ್‌
  • 40 ದಿನಗಳ ಪೆರೋಲ್‌ನಲ್ಲಿ ಹೊರಬಂದಿರುವ ರಾಮ್‌ ರಹೀಮ್‌

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಪೆರೋಲ್‌ ನೀಡಿದ್ದಕ್ಕಾಗಿ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಹರಿಯಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

"ರಾಮ್ ರಹೀಮ್ ಒಬ್ಬ ಅತ್ಯಾಚಾರಿ ಮತ್ತು ಕೊಲೆಗಾರ. ಅವನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ. ಆದರೆ, ಹರಿಯಾಣ ಸರ್ಕಾರವು ಅವರಿಗೆ ಬೇಕಾದಾಗ ಅಪರಾಧಿಗೆ ಪೆರೋಲ್ ನೀಡುತ್ತಿದೆ. ಅತ್ಯಾಚಾರಿ ರಾಮ್‌ ರಹೀಮ್‌, 'ಸತ್ಸಂಗ'ವನ್ನು ಆಯೋಜಿಸುತ್ತಿದ್ದಾರೆ. ಹರಿಯಾಣ ಸರ್ಕಾರದ ಉಪಸಭಾಪತಿ ಮತ್ತು ಮೇಯರ್ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ" ಎಂದು ಸ್ವಾತಿ ಮಲಿವಾಲ್‌ ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರ ಅಪರಾಧಿ ರಾಮ್‌ ರಹೀಮ್‌ ಆಯೋಜಿಸಿದ್ದ ʻಸತ್ಸಂಗʼದಲ್ಲಿ ಭಾಗವಹಿಸಿದ ರಾಜಕೀಯ ನಾಯಕರು ರಾಮ್ ರಹೀಮ್‌ನ ʻಸಭ್ಯ ಭಕ್ತರುʼ ಎಂದು ಕುಹಕವಾಡಿದ್ದಾರೆ. ರಾಮ್ ರಹೀಮ್‌ನ ಪೆರೋಲ್ ರದ್ದುಗೊಳಿಸುವಂತೆ ಮತ್ತು ಅತನನ್ನು  ಜೈಲು ಶಿಕ್ಷೆಗೆ ಗುರಿಪಡಿಸುವಂತೆ ಮಲಿವಾಲ್ ಹರಿಯಾಣ ಸರ್ಕಾರಕ್ಕೆ ಮನವಿ ಮಾಡಿದರು.

ಯಾರಿಗೆ ಪೆರೋಲ್ ನೀಡಬೇಕೆಂದು ನ್ಯಾಯಾಲಯ ನಿರ್ಧರಿಸುತ್ತದೆ: ಹರಿಯಾಣ ಮುಖ್ಯಮಂತ್ರಿ

AV Eye Hospital ad

ಅತ್ಯಾಚಾರಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನೀಡಲಾದ ಪೆರೋಲ್ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ರಾಮ್‌ ರಹೀಮ್‌ ಪೆರೋಲ್‌ನಲ್ಲಿ ನನ್ನ ʼಯಾವುದೇ ಪಾತ್ರವಿಲ್ಲʼ ಎಂದು ಬುಧವಾರ ಸ್ಪಷ್ಟಪಡಿಸಿದರು.

ಗುರ್ಮೀತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿಯಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಪ್ರಸ್ತುತ 40 ದಿನಗಳ ಪೆರೋಲ್‌ನಲ್ಲಿ ಹೊರಬಂದಿರುವ ರಾಮ್‌ ರಹೀಮ್‌, ʻಸತ್ಸಂಗʼ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾನೆ.

''ಯಾವುದೇ ವ್ಯಕ್ತಿಗೆ ಜಾಮೀನು ಅಥವಾ ಪೆರೋಲ್ ನೀಡುವುದು ನ್ಯಾಯಾಲಯದ ಕೆಲಸವಾಗಿರುವುದರಿಂದ ಇದರಲ್ಲಿ ನನ್ನ ಪಾತ್ರವಿಲ್ಲ. ಯಾರಿಗೆ ಪೆರೋಲ್ ನೀಡಬೇಕೆಂದು ನ್ಯಾಯಾಲಯ ನಿರ್ಧರಿಸುತ್ತದೆ. ಈ ವಿಷಯದ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲʼʼ ಎಂದು ಹರಿಯಾಣ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಂಜಾಬ್‌ನಲ್ಲಿ ʻಡೇರಾʼ ತೆರೆಯುವ ರಾಮ್‌ ರಹೀಮ್‌ನ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದ ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ(ಎಸ್‌ಜಿಪಿಸಿ) ಅಧ್ಯಕ್ಷ ಹರ್ಜಿಂದರ್‌ ಸಿಂಗ್‌ ದಾಮಿ, ರಾಮ್‌ ರಹೀಮ್‌ನನ್ನು ʻಸಾಮಾಜಿಕ ವಿರೋಧಿʼ ಎಂದರು.

ʻʻಪಂಜಾಬ್‌ನಲ್ಲಿ ಡೇರಾ ತೆರೆಯುವ ಈ ವಿವಾದಿತ ವ್ಯಕ್ತಿಯ ಘೋಷಣೆಯು ಸಿಖ್‌ರ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಇದು ಪಂಜಾಬ್‌ನ ಶಾಂತಿಯುತ ವಾತಾವರಣವನ್ನು ಹಾಳು ಮಾಡಬಹುದು. ʻಅತ್ಯಂತ ಗಂಭೀರʼ ವಿಷಯದಲ್ಲಿ ಪಂಜಾಬ್ ಸರ್ಕಾರವು ತನ್ನ ಪಾತ್ರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಮತ್ತು ಡೇರಾದ ಯಾವುದೇ ಶಾಖೆಯನ್ನು ಪಂಜಾಬ್‌ನಲ್ಲಿ ಸ್ಥಾಪಿಸಲು ಬಿಡುವುದಿಲ್ಲ ಎಂದು ಸರ್ಕಾರವು ನಿರ್ಧರಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ?: ಸ್ಥಳೀಯ ಭಾಷೆಗೆ ಆದ್ಯತೆ ಎಂದಿದ್ದ ಅಮಿತ್ ಶಾ; ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಿಲ್ಲ ಸ್ಥಾನ ಎಂದ ನೆಟ್ಟಿಗರು

ಹರಿಯಾಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ಉಪಚುನಾವಣೆ ಮತ್ತು ಪಂಚಾಯತ್ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಭಾವಿ ಆಧ್ಯಾತ್ಮಿಕ ನಾಯಕನಿಗೆ ಪೆರೋಲ್ ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ರಾಮ್ ರಹೀಮ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದಕ್ಕಾಗಿ ಪ್ರತಿಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಹೀಮ್‌ ಸಿಂಗ್‌ ಕುಟುಂಬದವರು ಸಲ್ಲಿಸಿದ ಅರ್ಜಿಯಿಂದಾಗಿ, ರಹೀಮ್‌ಗೆ ಕಳೆದ ವಾರ 40 ದಿನಗಳ ಪೆರೋಲ್‌ಗೆ ಅವಕಾಶ ನೀಡಲಾಗಿತ್ತು. ಇದಕ್ಕೂ ಮುನ್ನ, ಜೂನ್‌ನಲ್ಲಿ ಒಂದು ತಿಂಗಳು ಮತ್ತು ಫೆಬ್ರವರಿಯಲ್ಲಿ ಮೂರು ವಾರಗಳ ಕಾಲ ಪೆರೋಲ್‌ನಲ್ಲಿ ಜೈಲಿನಿಂದ ಹೊರಬಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಡೇರಾದ ಪ್ರಧಾನ ಕಚೇರಿ ಇರುವ ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ರಹೀಮ್‌ ಸಿಂಗ್‌ನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯವು, 2017ರ ಆಗಸ್ಟ್‌ನಲ್ಲಿ ಆತನನ್ನು ದೋಷಿ ಎಂದು ಘೋಷಿಸಿತ್ತು. ಹಾಗೆಯೇ, 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಹಾಗೆಯೇ, 2002ರಲ್ಲಿ ಡೇಡಾ ಮ್ಯಾನೇಜರ್‌ ರಂಜಿತ್‌ ಸಿಂಗ್‌ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ, ಆತನೊಂದಿಗೆ ಇತರ ನಾಲ್ವರೊಂದಿಗೆ ಅಪರಾಧಿ ಎಂದು ಘೋಷಿಸಿತ್ತು. ಈ ಎರಡೂ ಪ್ರಕರಣಕ್ಕಾಗಿ ಪ್ರಸ್ತುತ ಹರಿಯಾಣದ ಸುನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ರಹೀಮ್‌ ಸಿಂಗ್‌, 40 ದಿನಗಳ ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದ್ದಾನೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app