ಜಾಗತಿಕ ನಾಯಕರಾಗುವ ಮೋದಿ ಕನಸು; ಗ್ರಾಹಕರಿಗೆ ತಟ್ಟಿದ ಗೋಧಿ ಬೆಲೆ ಏರಿಕೆಯ ಬಿಸಿ

Wheat
  • ಜಗತ್ತಿನ ಆಹಾರ ಭದ್ರತೆಗೆ ಗೋಧಿ ಒದಗಿಸುವ ಕೇಂದ್ರದ ಯೋಜನೆ
  • ಭಾರತದಲ್ಲಿ ಕಳೆದ 12 ವರ್ಷಗಳ ಗರಿಷ್ಠ ಬೆಲೆ ದಾಖಲಿಸಿದ ಗೋಧಿ

ಬಿರುಬೇಸಿಗೆಯಿಂದ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಗೋಧಿ ಬೆಳೆಯ ಮೇಲೆ ತೀವ್ರ ಹೊಡೆತ ಬಿದ್ದಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಆಹಾರ ಭದ್ರತೆಗೆ ಆತಂಕ ಒದಗಿರುವ ಬಗ್ಗೆ ಚಿಂತಿಸುತ್ತಿದ್ದಾರೆ. ಆಹಾರ ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ಗೋಧಿ ರಫ್ತು ಮಾಡುವ ಮೂಲಕ ಭಾರತವು ಹೆಚ್ಚಿನ ಆದಾಯ ಗಳಿಸುತ್ತಿದೆ. ಆದರೆ ದೇಶೀಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟುತ್ತಿದೆ. 

ಜಾಗತಿಕವಾಗಿ ಗೋಧಿಯ ಕೊರತೆ ಕಂಡುಬಂದಿರುವಾಗ ಭಾರತ ವಿಶ್ವಕ್ಕೆ ಆಹಾರ ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಕಳೆದ ವಾರ ಜರ್ಮನಿಯಲ್ಲಿ ಭಾಷಣ ಮಾಡಿದ್ದರು. “ಮಾನವೀಯತೆ ಬಿಕ್ಕಟ್ಟು ಎದುರಾದಾಗಲೆಲ್ಲಾ, ಭಾರತವೇ ಪರಿಹಾರ ಸೂಚಿಸುತ್ತದೆ” ಎನ್ನುವ ಮೂಲಕ ಜಾಗತಿಕ ನಾಯಕನಾಗುವ ಪ್ರಯತ್ನ ಮಾಡಿದ್ದರು. ಮೋದಿಯವರ ಆಶಯವೇನೋ ಸರಿ, ಆದರೆ ದೇಶದಲ್ಲಿ ಗೋಧಿಯ ದಾಸ್ತಾನು ಮತ್ತು ಉತ್ಪಾದನೆ ಯಾವ ಮಟ್ಟದಲ್ಲಿ ಇದೆ ಎನ್ನುವುದನ್ನು ಅವರು ಗಮನಿಸುವ ಅಗತ್ಯವಿತ್ತು. ಕಪ್ಪು ಸಮುದ್ರದ ಪ್ರದೇಶದಲ್ಲಿ ಯುದ್ಧದಿಂದಾಗಿ ಗೋಧಿ ಉತ್ಪಾದನೆ ಕುಸಿದಿರುವಾಗ ಭಾರತ ನಿರ್ವಾತ ತುಂಬಲು ಪ್ರಯತ್ನಿಸುತ್ತಿದೆ. ಆದರೆ ವಿಶ್ವಕ್ಕೇ ಗೋಧಿ ನೀಡುವಷ್ಟು ದಾಸ್ತಾನು ನಮ್ಮಲ್ಲಿದೆಯೆ?

ಭಾರತದಲ್ಲಿ ಕಳೆದ 12 ವ‍ರ್ಷಗಳ ಅತ್ಯಧಿಕ ಬೆಲೆಯಲ್ಲಿ ಗೋಧಿ ಹಿಟ್ಟು ಮಾರಾಟವಾಗುತ್ತಿದೆ. ಭಾರತದಲ್ಲಿ ಗೋಧಿಯ ಉತ್ಪಾದನೆ ಮತ್ತು ದಾಸ್ತಾನು ಎರಡೂ ಕುಸಿದಿರುವುದರಿಂದ ಗೋಧಿ ಹಿಟ್ಟಿನ ಬೆಲೆ ಏರುತ್ತಿದೆ. ಜೊತೆಗೆ ದೇಶದ ಹೊರಗೂ ಬೇಡಿಕೆ ಹೆಚ್ಚಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಅಖಿಲ ಭಾರತ ಮಾಸಿಕ ಚಿಲ್ಲರೆ ಸರಾಸರಿ ಬೆಲೆಯ ಪ್ರಕಾರ, ಗೋಧಿ ಹಿಟ್ಟಿನ ಸರಾಸರಿ ಬೆಲೆ ಪ್ರತಿ ಕೆಜಿಗೆ ₹32.38. ಮುಂಬೈನಲ್ಲಿ ಅತ್ಯಧಿಕ ₹49 ದಾಖಲಾಗಿದೆ. ಲಭ್ಯವಿರುವ ವರ್ಷದ ಆರಂಭಿಕ ಅಂಕಿ- ಅಂಶಗಳ ಅನ್ವಯ ಜನವರಿ 2010ರಿಂದ ಈಚೆಗೆ ಕಂಡ ಅತ್ಯಧಿಕ ಬೆಲೆ ಇದಾಗಿದೆ. ನಾಗರಿಕ ಸರಬರಾಜು ಇಲಾಖೆ ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, ಭಾರತಾದ್ಯಂತ ಗೋಧಿ ಹಿಟ್ಟಿನ ಸರಾಸರಿ ಬೆಲೆಯು ₹32.78 ಇದೆ. ಸಾಮಾನ್ಯ ಬೆಲೆಗಿಂತ ಶೇ. 9.15 ಹೆಚ್ಚಾಗಿದ್ದು, ವರ್ಷದ ಹಿಂದೆ ಪ್ರತಿ ಕೆಜಿಗೆ ₹30.3ರಷ್ಟಿತ್ತು. 

156 ಕೇಂದ್ರಗಳ ಅಂಕಿ ಅಂಶದ ಪ್ರಕಾರ, ಪೋರ್ಟ್ ಬ್ಲೇರ್‌ನಲ್ಲಿ ಪ್ರತಿ ಕೆಜಿಗೆ ₹59 ಹೆಚ್ಚಿನ ಬೆಲೆ ಇದ್ದರೆ, ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಅತ್ಯಂತ ಕಡಿಮೆ ಬೆಲೆ ಪ್ರತಿ ಕೆಜಿಗೆ ₹22 ದಾಖಲಾಗಿದೆ. ನಾಲ್ಕು ಮಹಾನಗರಗಳ ಪೈಕಿ ಮುಂಬೈನಲ್ಲಿ ಗೋಧಿ ಬೆಲೆ ಹೆಚ್ಚಾಗಿದೆ. ಮುಂಬೈನಲ್ಲಿ ಪ್ರತಿ ಕೆಜಿಗೆ ₹49 ಇದ್ದರೆ, ಚೆನ್ನೈನಲ್ಲಿ ₹34, ಕೋಲ್ಕತ್ತಾದಲ್ಲಿ ₹29, ದೆಹಲಿಯಲ್ಲಿ ₹27 ದಾಖಲಾಗಿದೆ. ವರ್ಷದ ಆರಂಭದಲ್ಲಿಯೇ ಗೋಧಿಯ ಸರಾಸರಿ ಬೆಲೆಯು ಏರಿಕೆಯ ದಿಕ್ಕಿನಲ್ಲಿದ್ದು, ಜನವರಿ 1ರಿಂದ ಶೇ. 5.18ರಷ್ಟು ಏರಿಕೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ. 2021 ಏಪ್ರಿಲ್‌ ತಿಂಗಳಲ್ಲಿ ಪ್ರತಿ ಕೆಜಿಗೆ ₹31 ದಾಖಲೆಯ ಗರಿಷ್ಠ ಪ್ರಮಾಣಕ್ಕೆ ತಲುಪಿತ್ತು.

ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದಿದ್ದರೂ ರಫ್ತು

ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿ ಖರೀದಿದಾರರಿಂದ ಹೆಚ್ಚಿನ ಬೇಡಿಕೆಯಿಂದಾಗಿ ಸರ್ಕಾರವು ಗೋಧಿಗೆ ₹2015 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಸರ್ಕಾರಿ ಸಂಸ್ಥೆಗಳಿಂದ ಸಾರ್ವಜನಿಕ ಸಂಗ್ರಹಣೆಯು ಗುರಿಗಿಂತ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆಹಾರ ಸಚಿವಾಲಯದ ಅಂದಾಜಿನ ಪ್ರಕಾರ, ಪ್ರಸಕ್ತ ರಬಿ ಮಾರುಕಟ್ಟೆ ಕಾಲದಲ್ಲಿ ಗೋಧಿ ಸಂಗ್ರಹಣೆಯು 195 ಲಕ್ಷ ಟನ್‌ಗಳಷ್ಟಿರುತ್ತದೆ. ಇದು ಸರ್ಕಾರದ ಆರಂಭಿಕ ಸಂಗ್ರಹಣೆ ಗುರಿಯಾದ 444 ಲಕ್ಷ ಟನ್‌ಗಳು ಮತ್ತು ಕಳೆದ ವರ್ಷದ 433 ಲಕ್ಷ ಟನ್‌ಗಳ ನೈಜ ಸಂಗ್ರಹಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಭಾರತೀಯ ಆಹಾರ ನಿಗಮದ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 28 ರವರೆಗೆ 156.92 ಲಕ್ಷ ಟನ್ ಗೋಧಿಯನ್ನು ಸಂಗ್ರಹಿಸಲಾಗಿದೆ.

2022-23 ಆರ್ಥಿಕ ವರ್ಷದ ಆರಂಭದಲ್ಲಿ ಆಹಾರ ಸಚಿವಾಲಯದ ಅಂಕಿಅಂಶಗಳ ಪ್ರಕಾರ 190 ಲಕ್ಷ ಟನ್‌ಗಳಷ್ಟಿರುತ್ತದೆ. ಇದು ಪ್ರಸಕ್ತ ಋತುವಿನಲ್ಲಿ 195 ಲಕ್ಷ ಟನ್ ಸಂಗ್ರಹಣೆಯಿಂದ 385 ಲಕ್ಷ ಟನ್‌ಗಳಿಗೆ ಏರುವ ನಿರೀಕ್ಷೆಯಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013ರ ಅಡಿಯಲ್ಲಿ ವಿತರಣೆಗಾಗಿ ಹಂಚಿಕೆಗಳನ್ನು ಗಣನೆಗೆ ತೆಗೆದುಕೊಂಡು, ಇತರೆ ಕಲ್ಯಾಣ ಯೋಜನೆಗಳು ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, 2022-23 ಸರ್ಕಾರಿ ದಾಸ್ತಾನುಗಳಲ್ಲಿ 80 ಲಕ್ಷ ಟನ್ ಗೋಧಿಯ ಸಮತೋಲನದೊಂದಿಗೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಇದು ಏಪ್ರಿಲ್ 1ರಿಂದ 75 ಲಕ್ಷ ಟನ್‌ಗಳ ಕನಿಷ್ಠ ದಾಸ್ತಾನಿಗಿಂತ ಸ್ವಲ್ಪ ಹೆಚ್ಚಿರಲಿದೆ. 

ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಹಾರ ಕಾರ್ಯದರ್ಶಿ ಸುಧಾಂಶು  ಪಾಂಡೆ, "ಈ ವರ್ಷ ಏರಿದ ಮಾರುಕಟ್ಟೆ ಬೆಲೆಗಳು, ದೇಶೀ ರಫ್ತು ಉದ್ದೇಶಗಳಿಗಾಗಿ ಖಾಸಗಿ ಕಂಪನಿಗಳಿಂದ ಹೆಚ್ಚಿದ ಬೇಡಿಕೆಯಿಂದಾಗಿ ಸರ್ಕಾರಿ ಸಂಸ್ಥೆಗಳಿಂದ ಖರೀದಿ ಕಡಿಮೆಯಾಗಿದೆ. ಆದರೆ ಅದು ರೈತರ ಪರವಾಗಿ ಹೋಗುತ್ತದೆ. ರೈತರಿಗೆ ಗೋಧಿಗೆ ಉತ್ತಮ ಬೆಲೆ ಸಿಗುತ್ತಿದೆ. ಮೊದಲು ಅವರು ಈ ಬೆಲೆಯನ್ನು ಪಡೆಯುತ್ತಿರಲಿಲ್ಲ ಮತ್ತು ಸರ್ಕಾರಕ್ಕೆ ಮಾರುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ರಫ್ತು ಒಪ್ಪಂದಗಳು

40 ಲಕ್ಷ ಟನ್ ಗೋಧಿ ರಫ್ತಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಏಪ್ರಿಲ್‌ನಲ್ಲಿ 11 ಲಕ್ಷ ಟನ್ ರಫ್ತು ಮಾಡಲಾಗಿದೆ ಎಂದು ಆಹಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಕಳೆದ ವರ್ಷ (2021-22) ಸುಮಾರು 70 ಲಕ್ಷ ಟನ್ ಗೋಧಿ ರಫ್ತು ಮಾಡಿದೆ. ಕಡಿಮೆ ಆರಂಭಿಕ ಸರಕು ಮತ್ತು ಕಡಿಮೆ ಸಂಗ್ರಹಣೆ ಗಮನದಲ್ಲಿಟ್ಟುಕೊಂಡು, ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ರಾಜ್ಯಗಳ ಹಂಚಿಕೆಗಳನ್ನು ಪರಿಷ್ಕರಿಸುವ ಮೂಲಕ ಗೋಧಿ ಗಣಿತವನ್ನು ಪರಿಶೀಲಿಸುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ 2013 ಅಡಿಯಲ್ಲಿ  ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪರಿಷ್ಕರಣೆ ನಂತರ  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಗೋಧಿ ಹಂಚಿಕೆ ತಿಂಗಳಿಗೆ 18.21 ಲಕ್ಷ ಟನ್‌ಗಳಿಂದ ಮಾಸಿಕ 7.12 ಲಕ್ಷ ಟನ್‌ಗಳಿಗೆ ಇಳಿಯುತ್ತದೆ.  ಇದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಉಳಿದ ಐದು ತಿಂಗಳ ಅವಧಿಯಲ್ಲಿ ಸೆಪ್ಟೆಂಬರ್‌ವರೆಗೆ ಸುಮಾರು 55 ಲಕ್ಷ ಟನ್‌ಗಳಷ್ಟು ಗೋಧಿ ಉಳಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. 

ಯುದ್ಧದ ಪರಿಣಾಮ ಗೋಧಿ ಬೆಲೆ ಏರಿಕೆ

ಉಕ್ರೇನ್ ಯುದ್ಧದಿಂದಾಗಿ ಗೋಧಿಯ ಬೆಲೆಯ ಏರಿಕೆಯಾಗಿದ್ದು, ಭಾರತದ ಗೋಧಿಗೆ ಸಾಗರೋತ್ತರ ಬೇಡಿಕೆ ಹೆಚ್ಚಾಗಿರುವ ಕಾರಣ ಗೋಧಿ ಹಿಟ್ಟಿನ ಬೆಲೆಯು ನಿರಂತರವಾಗಿ ಏರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು 2017ರ ಮಾರ್ಚ್‌ನಲ್ಲಿ ಗರಿಷ್ಠ ಶೇ. 7.62ರಷ್ಟು ದಾಖಲಾಗಿತ್ತು. 2022ರ ಮಾರ್ಚ್‌ನಲ್ಲಿ ಸಾರ್ವಜನಿಕ ವಿತರಣೆಯ ಹೊರತಾಗಿ ಗೋಧಿ ಬೆಲೆಯ ಪ್ರಮಾಣ ಶೇ. 7.77ಕ್ಕೆ ತಲುಪಿದೆ.

ದೇಶವು ಗೋಧಿ ಉತ್ಪಾದನೆಯಲ್ಲಿ ಕುಸಿತ ನೋಡುತ್ತಿರುವ ಸಮಯದಲ್ಲಿ ಹಿಟ್ಟು ಮತ್ತು ಚಪಾತಿ ಬೆಲೆಗಳು ಏರುತ್ತಿವೆ. ಸರ್ಕಾರವು 2021-22 ಕ್ಕೆ 110 ದಶಲಕ್ಷ ಟನ್ ಗೋಧಿ ಉತ್ಪಾದನೆಯ ಗುರಿ ಹೊಂದಿತ್ತು. ಇದು 2020-21ರಲ್ಲಿ ಅಂದಾಜು 109.59 ದಶಲಕ್ಷ ಟನ್ ಉತ್ಪಾದನೆಗಿಂತ ಹೆಚ್ಚಾಗಿದೆ. ಪ್ರಸ್ತುತ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ವರ್ಷದ ಫೆಬ್ರವರಿ 16ರಂದು ಬಿಡುಗಡೆ ಮಾಡಿದ ಎರಡನೇ ಮುಂಗಡ ಅಂದಾಜಿನಲ್ಲಿ 2021-22ರ ಒಟ್ಟು ಗೋಧಿ ಉತ್ಪಾದನೆಯನ್ನು 111.32 ದಶಲಕ್ಷ ಟನ್‌ಗಳಿಗೆ ನಿಗದಿಪಡಿಸಲಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ? ಭಾರತದಿಂದ ಗೋಧಿ ಖರೀದಿಗೆ ಈಜಿಪ್ಟ್‌ ಒಪ್ಪಿಗೆ | ಇನ್ನೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಸಾಧ್ಯತೆ

ಕುಸಿದ ಗೋಧಿ ಉತ್ಪಾದನೆ

ಮಾರ್ಚ್‌ನಲ್ಲಿ ತಾಪಮಾನದ ಹಠಾತ್ ಹೆಚ್ಚಳವು ಸರ್ಕಾರದ ಭರವಸೆ ಕುಗ್ಗಿಸಿತ್ತು. 2021-22ರ ಒಟ್ಟು ಗೋಧಿ ಉತ್ಪಾದನೆಯು ಗುರಿಗಿಂತ ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಕಳೆದ ವಾರ ಗೋಧಿ ಉತ್ಪಾದನೆಯು ಸುಮಾರು 105 ದಶಲಕ್ಷ ಟನ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದರು. ಗೋಧಿ ಇಳುವರಿ ಕುಸಿತಕ್ಕೆ ಬೇಸಿಗೆಯ ಆರಂಭವೇ ಕಾರಣ ಎಂದು ಆಹಾರ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್