ರಾಜಕೀಯ ಕೈದಿಗಳ ಬಿಡುಗಡೆಗೆ ವೆಲ್ಫೇರ್ ಪಾರ್ಟಿ ಒತ್ತಾಯ: ಆಗಸ್ಟ್‌ 19ರಿಂದ ಸಾಮೂಹಿಕ ಸಹಿ ಅಭಿಯಾನ

Welfare party
  • 6.10 ಲಕ್ಷ ಕೈದಿಗಳಲ್ಲಿ ಶೇಕಡಾ 80 ಜನರು ವಿಚಾರಣಾಧೀನ ಕೈದಿಗಳು
  • ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವವರ ಬಂಧನವಾಗುತ್ತಿದೆ

ಎಲ್ಲ ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ಆಗಸ್ಟ್ 19ರಿಂದ 21ರವರೆಗೆ ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿ ಸಾಮೂಹಿಕ ಸಹಿ ಅಭಿಯಾನ ಹಮ್ಮಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ, ವಕೀಲ ತಾಹಿರ್ ಹುಸೇನ್ ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನ ಶಿವಾಜಿನಗರದಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ದೇಶದ 6.10 ಲಕ್ಷ ಕೈದಿಗಳಲ್ಲಿ ಶೇಕಡಾ 80 ಜನರು ವಿಚಾರಣಾಧೀನ ಕೈದಿಗಳಾಗಿದ್ದಾರೆ ಎಂದು ಇತ್ತೀಚೆಗೆಷ್ಟೇ ಭಾರತ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದು ಅತ್ಯಂತ ಗಂಭೀರ ವಿಷಯ" ಎಂದು ಹೇಳಿದರು. 

"ಈ ಅಭಿಯಾನದ ರಾಜಕೀಯ ಮೂಲಕ ಕೈದಿಗಳ ಬಿಡುಗಡೆಗೆ ಸಾರ್ವಜನಿಕರಿಂದ ಸಾಮೂಹಿಕ ಸಹಿ ಸಂಗ್ರಹಿಸಲಾಗುವುದು. ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ತಕ್ಷಣದ ಮಧ್ಯಸ್ಥಿಕೆಗೆ ಒತ್ತಾಯಿಸಿ ಸಹಿಗಳ ಜೊತೆಗೆ ಎಲ್ಲ ಜಿಲ್ಲೆಗಳಿಂದ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ ಕಳುಹಿಸಲಾಗುವುದು" ಎಂದರು.

"ದೇಶಾದ್ಯಂತ ಲಕ್ಷಾಂತರ ವಿಚಾರಣಾಧೀನ ಕೈದಿಗಳಿದ್ದು, ಸಾವಿರಾರು ಮಂದಿ ರಾಜಕೀಯ ಕೈದಿಗಳಾಗಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವವರನ್ನು ದೇಶದ್ರೋಹ ಕಾನೂನುಗಳಡಿ ಬಂಧಿಸಿ ಜೈಲಿಗೆ ಹಾಕಲಾಗುತ್ತಿದೆ. ವರ್ಷಾನುಗಟ್ಟಲೆಯಿಂದ ಅವರು ಜೈಲಲ್ಲಿಯೇ ಇದ್ದಾರೆ. ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ಮತ್ತೆ ಮತ್ತೆ ತಿರಸ್ಕರಿಸುತ್ತಿವೆ. ಉಮರ್ ಖಾಲಿದ್, ಸಿದ್ದಿಕ್ ಕಾಪ್ಪನ್, ತೀಸ್ತಾ ಸೆಟಲ್ವಾಡ್, ಸಂಜೀವ್ ಭಟ್, ಜಾವೀದ್ ಮುಹಮ್ಮದ್, ಖಾಲಿದ್ ಸೈಫಿ, ವರವರ ರಾವ್ ಹೀಗೆ ಪಟ್ಟಿ ಮುಂದುವರಿಯುತ್ತದೆ" ಎಂದು ತಾಹಿರ್ ಹುಸೇನ್ ಹೇಳಿದರು.

Image
Pressmeet

"2020ರ ಡಿಸೆಂಬರ್ 31ರವರೆಗೆ ಭಾರತೀಯ ಜೈಲುಗಳಲ್ಲಿರುವ ಒಟ್ಟು ಕೈದಿಗಳ ಸಂಖ್ಯೆ 4,88,511. ಅದರಲ್ಲಿ ವಿಚಾರಣಾಧೀನ ಕೈದಿಗಳು ಶೇಕಡಾ 76 ರಷ್ಟು ಅಂದರೆ 3,71,848. ಈ ಪೈಕಿ ಅರ್ಧದಷ್ಟು ವಿಚಾರಣಾಧೀನ ಕೈದಿಗಳು ಜಿಲ್ಲಾ ಕಾರಾಗೃಹಗಳಲ್ಲಿದ್ದು, ಜೈಲುಗಳು ಕಿಕ್ಕಿರಿದು ತುಂಬಿವೆ. ವಿಚಾರಣಾಧೀನ ಕೈದಿಗಳ ಪೈಕಿ ಮೂವರಲ್ಲಿ ಇಬ್ಬರು ಎಸ್‌ಸಿ, ಎಸ್‌ಟಿ ಅಥವಾ ಒಬಿಸಿಗೆ ಸೇರಿದವರಾಗಿದ್ದಾರೆ. ಕೆಲವರು ಅಕ್ರಮ ಬಂಧನಕ್ಕೊಳಗಾಗಿದ್ದಾರೆ. ಅವರಿಗೆ ಜಾಮೀನು ಪಡೆಯಲು ದಾರಿಯಿಲ್ಲದೆ, ಜೈಲಿನಲ್ಲಿಯೇ ಇದ್ದಾರೆ. ಶೇಕಡಾ 20.7ರಷ್ಟು ಕೈದಿಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಶೇಕಡಾ 11.2ರಷ್ಟು ಕೈದಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಜಾತಿ ಪೂರ್ವಾಗ್ರಹ ಮತ್ತು ಕೆಲವು ಸಮುದಾಯಗಳ ಅತಿಯಾದ ಪೋಲೀಸಿಂಗ್‌ನಿಂದಾಗಿ ಅವರಿನ್ನೂ ಜೈಲಿನಲ್ಲಿದ್ದಾರೆ ಎಂದು ತಾಹಿರ್ ಹುಸೇನ್ ಆತಂಕ ವ್ಯಕ್ತಪಡಿಸಿದರು. 

ಜೈಲಿನಲ್ಲಿ ಮುಸ್ಲಿಮರ ಸಂಖ್ಯೆ ಕೂಡ ಹೆಚ್ಚಾಗಿದೆ. ಶೇಕಡಾ 19.1 ರಷ್ಟು ಮುಸ್ಲಿಮರು ಜೈಲಿನಲ್ಲಿದ್ದಾರೆ. ಅಸ್ಸಾಂನಲ್ಲಿ ಶೇಕಡಾ 52.3ರಷ್ಟು ಮುಸ್ಲಿಂ ವಿಚಾರಣಾಧೀನ ಕೈದಿಗಳಿದ್ದಾರೆ. ಶೇಕಡಾ 47ರಷ್ಟು ಅಪರಾಧಿಗಳಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 43.5ರಷ್ಟು ಮುಸ್ಲಿಂ ವಿಚಾರಣಾಧೀನ ಕೈದಿಗಳಿದ್ದರೆ, ಶೇಕಡಾ 33ರಷ್ಟು ಮುಸ್ಲಿಂ ಅಪರಾಧಿಗಳಿದ್ದಾರೆ ಎಂದು ವಿವರಿಸಿದರು. 

2019ಕ್ಕೆ ಹೋಲಿಸಿದರೆ 2020ರಲ್ಲಿ ವಿಚಾರಣಾಧೀನ ಕೈದಿಗಳ ಬಿಡುಗಡೆಯು ಶೇಕಡಾ 19.6ರಷ್ಟು ಕಡಿಮೆಯಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 436ಎ ಪ್ರಕಾರ ಓರ್ವ ವ್ಯಕ್ತಿಯ ವಿರುದ್ಧ ಆರೋಪಿಸಲಾದ ಅಪರಾಧಕ್ಕಾಗಿ ವಿಧಿಸಬಹುದಾದ ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬಹುದು. ಆದರೆ, 2020ರಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಕೈದಿಗಳು ಆರಂಭಿಕ ಬಿಡುಗಡೆಗೆ ಅರ್ಹರಾಗಿದ್ದಾರೆ. 1,291 ಅರ್ಹ ಕೈದಿಗಳಲ್ಲಿ 422 ಮಂದಿ ಮಾತ್ರ ಬಿಡುಗಡೆ ಹೊಂದಿದ್ದಾರೆ ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರಿನ ಪ್ರತಿ ವಾರ್ಡ್‌ಗಳಲ್ಲಿ ಪಿಎಚ್‌ಸಿ ಸ್ಥಾಪನೆಗೆ ಸಜ್ಜಾದ ಬಿಬಿಎಂಪಿ

ಪ್ರಮುಖ ಬೇಡಿಕೆಗಳು

  • ದೇಶಾದ್ಯಂತ ಬಂಧಿತರಾಗಿರುವ ರಾಜಕೀಯ ಕೈದಿಗಳ ಮೇಲೆ ಶ್ವೇತಪತ್ರ ಬಿಡುಗಡೆ ಮಾಡಬೇಕು. 
  • ಯಾವುದೇ ಅಪರಾಧ ಮಾಡದೆ ಜೈಲಿನಲ್ಲಿದ್ದ ಅಮಾಯಕ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. 
  • ರಾಜಕೀಯ ಕೈದಿಗಳಿಗೆ ಜಾಮೀನು, ಪೆರೋಲ್ ಸೇರಿದಂತೆ ಹಲವು ಕಾನೂನು ಸೌಲಭ್ಯಗಳನ್ನು ಒದಗಿಸಬೇಕು. 
  • ಜೈಲಿನಲ್ಲಿರುವ ದಿನಗಳ ಸಂಖ್ಯೆಯನ್ನು ಆಧರಿಸಿ ಅಮಾಯಕ ರಾಜಕೀಯ ಕೈದಿಗಳಿಗೆ ಪರಿಹಾರ ಒದಗಿಸುವುದು. 
  • ನಿರಪರಾಧಿಗಳನ್ನು ಅಪರಾಧಗಳಲ್ಲಿ ಸಿಲುಕಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ಯುಎಪಿಎ, ಎನ್ಎಸ್ಎ, ಎಂಒಸಿಒಸಿಎ ನಂತಹ ಕಠಿಣ ಕಾನೂನುಗಳನ್ನು ರದ್ದುಗೊಳಿಸಬೇಕು.

ಸುದ್ದಿಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಎಫ್ಐಟಿಯು ರಾಷ್ಟ್ರೀಯ ಖಜಾಂಚಿ ಅಬ್ದುಸ್ಸಲಾಂ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180