ದೇವನಹಳ್ಳಿ ರೈತ ಹೋರಾಟ| ರೈತರ ಸಮಸ್ಯೆಗಳ ವಿಚಾರದಲ್ಲಿ ಪಕ್ಷಬೇಧವಿಲ್ಲದೆ ಎಲ್ಲರೂ ಒಟ್ಟಾಗಬೇಕು: ಎಚ್‌ ಡಿ ಕೆ

  • ರೈತ ವಿರೋಧಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬೃಹತ್‌ ಪ್ರತಿಭಟನೆ
  • ರೈತರ ಮೇಲಿನ ಹಲ್ಲೆ ಖಂಡಿಸಿ ಸರ್ಕಾರದ ವಿರುದ್ದ ಹರಿಹಾಯ್ದ ಮಾಜಿ ಸಿಎಂ

ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿಯ ಚನ್ನರಾಪಟ್ಟಣ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. 'ರಾಜ್ಯದ ಯಾವುದೇ ಭಾಗದಲ್ಲಿ ರೈತರು ಸಂಕಷ್ಟಕ್ಕೆ ಒಳಗಾದಾಗ ಪಕ್ಷ-ರಾಜಕಾರಣ ಬಿಟ್ಟು ಒಂದಾಗಬೇಕು' ಎಂದು ಅವರು ಅಭಿಪ್ರಾಯಪಟ್ಟರು.

'ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ' ವತಿಯಿಂದ ಚನ್ನರಾಯಪಟ್ಟಣ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನವನ್ನು ಕೈಬಿಡಬೇಕು. ಆ.15ರಂದು ಹೋರಾಟ ನಿರತ ರೈತರ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವನ್ನು ವಿರೋಧಿಸಿ, ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. 

Eedina App

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, "ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ 1,777 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಕಸಿದುಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ. ಹರಳೂರು ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ 116 ಎಕರೆ ಭೂಮಿಯನ್ನು ಚಾಣಕ್ಯ ವಿ ವಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಇಡೀ ಬೆಂಗಳೂರಿಗೆ ಇಷ್ಟುವರ್ಷ ಅನ್ನಹಾಕಿರುವ ರೈತರನ್ನು ಈ ರೀತಿ ಶೋಷಣೆ ಮಾಡುವುದನ್ನು ಕೈಬಿಟ್ಟು ರೈತರ ಹಿತ ಕಾಯುವ ಬಗ್ಗೆ ಮುಂದಾಗಬೇಕು" ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದರು.  

"ಸೆಪ್ಟೆಂಬರ್‌ 12ರಿಂದ ಆರಂಭವಾಗುವ ಅಧಿವೇಶನದಲ್ಲಿ ಸರ್ಕಾರದ ರೈತ ವಿರೋಧಿ ಧೋರಣೆಯ ಬಗ್ಗೆ ಜಾತ್ಯಾತೀತ ಜನತಾ ದಳ ಪಕ್ಷದ ಎಲ್ಲ ಶಾಸಕರು ಪ್ರಶ್ನೆ ಮಾಡುತ್ತೇವೆ. ದೇವನಹಳ್ಳಿ, ಚನ್ನರಾಯಪಟ್ಟಣ, ದೊಡ್ಡಬಳ್ಳಾಪುರ ಭಾಗದ ರೈತರಿಗೆ ನ್ಯಾಯ ಸಿಗುವುದಕ್ಕೆ ಎಲ್ಲರು ಒಗ್ಗಟ್ಟಿನಿಂದ ಹೋರಾಟ ಮಾಡೋಣ" ಎಂದು ಕರೆ ನೀಡಿದರು. 

AV Eye Hospital ad
H D Kumaraswamy

ಈ ಬಗ್ಗೆ ಹೋರಾಟ ನಿರತ ಯುವ ರೈತ ರಮೇಶ್‌ ಚೀಮಾಚನಹಳ್ಳಿ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ್ದಾರೆ. "ಕೆಐಎಡಿಬಿ ಅಕ್ರಮ ಭೂಸ್ವಾಧೀನ ವಿರೋಧಿ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೆ. ಆ.15ರಂದು ಕಪ್ಪು ಬಟ್ಟೆಯನ್ನು ಬಾಯಿಗೆ ಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡಬೇಕೆಂಬ ತೀರ್ಮಾನ ಆಗಿತ್ತು. ಆದರೆ, ಅಂತಿಮವಾಗಿ ಕಪ್ಪುಬಟ್ಟೆಯನ್ನು ಬಳಸುವುದೇ ಬೇಡ ಎಂದು ನಿರ್ಧರಿಸಿ ಹೋರಾಟದ ಬಾವುಟ ಹಿಡಿದು ಘೋಷಣೆ ಕೂಗಿ ಉಸ್ತುವಾರಿ ಸಚಿವ ಕೆ ಸುಧಾಕರ್‌ ಅವರಿಗೆ ನಮ್ಮ ಸಮಸ್ಯೆಯನ್ನು ಮನದಟ್ಟು ಮಾಡಲು ಮುಂದಾದೆವು" ಎಂದು ಹೇಳಿದರು.

"ಸಚಿವರನ್ನು ಭೇಟಿ ಮಾಡಲು ಮುಂದಾದ ನಮ್ಮ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಧ್ವಜಾರೋಹಣಕ್ಕೆ ಅಡ್ಡಿಪಡ್ಡಿಸಲು ಯತ್ನಿಸಲಾಗಿದೆ, ಪ್ರತಿಭಟನಾಕಾರರಿಂದ ಕಪ್ಪು ಮಾಸ್ಕ್‌, ಕಪ್ಪುಬಾವುಟ ವಶಕ್ಕೆ ಪಡೆಯಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ವಾಸ್ತವವಾಗಿ ಕಪ್ಪುಬಟ್ಟೆಯನ್ನು ನಾವು ಬಳಸಿರಲಿಲ್ಲ, ರೈತರು ಧ್ವಜಾರೋಹಣದ ನಂತರ ಕಾರ್ಯಕ್ರಮದ ಸ್ಥಳಕ್ಕೆ ಹೋಗಿದ್ದು, ಪೊಲೀಸರು ಹಲ್ಲೆ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಘೋಷಣೆ ಕೂಗಿ ವಿರೋಧಿಸಿದ್ದೇವೆ. ಆದರೆ, ಪೊಲೀಸರು ಪ್ರತಿಭಟನೆ ಮಾಡಿದ 71 ರೈತರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

"ಜಿಲ್ಲಾ ಉಸ್ತುವಾರಿ ಸಚಿವ ಕೆ ಸುಧಾಕರ್‌ ಅವರನ್ನು ಹಲವು ಬಾರಿ ರೈತರೇ ಭೇಟಿ ಮಾಡಿ ಈ ಭೂಸ್ವಾಧೀನವನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದೇವೆ. ಅದು ಸಾಧ್ಯವಿಲ್ಲ ಎಂದಷ್ಟೇ ಅವರು ಹೇಳಿದ್ದಾರೆ. ಜಿಲ್ಲೆಯ ರೈತರ ಪರವಾಗಿ ಸಚಿವರು ಒಮ್ಮೆಯೂ ಸೌಜನ್ಯದ ನಡೆ ತೋರಿಸಿಲ್ಲ. ಇನ್ನು ನಮ್ಮ ರಾಜ್ಯದಲ್ಲಿ ಕೃಷಿ ಸಚಿವರು ಇದ್ದಾರೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದೆ. ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿರುವ ರೈತರ ಭೂಸ್ವಾಧೀನ ವಿರೋಧಿ ಹೋರಾಟದ ಬಗ್ಗೆ ಬಿ ಸಿ ಪಾಟೀಲ್‌ ಅವರು ಮಧ್ಯೆ ಪ್ರವೇಶ ಮಾಡಬೇಕಿತ್ತು. ಆದರೆ, ಅವರು ಇದುವರೆಗೂ ಜಿಲ್ಲೆಗೆ ಕಾಲಿಟ್ಟಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

"ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರನ್ನು ಭೇಟಿಯಾದಾಗಲೂ ಆದೇಶ ವಾಪಸ್‌ ಪಡೆಯುವ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಬದಲಾಗಿ ಸ್ಥಳೀಯ ರಿಯಲ್‌ ಎಸ್ಟೆಟ್‌ ಮಾಫಿಯಾದವರ ಮೂಲಕ ಹೋರಾಟ ನಿರತ ರೈತರಿಗೆ ಆಮಿಷ ತೋರಿ ಹೋರಾಟ ಹತ್ತಿಕ್ಕಲು ಯತ್ನಿಸಿದ್ದಾರೆ. ಸರ್ಕಾರಿ ಬೆಲೆಗೆ ನಾಲ್ಕುಪಟ್ಟು ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಒಮ್ಮೆ ಫಲವತ್ತಾದ ಭೂಮಿಯನ್ನು ಕಳೆದುಕೊಂಡರೆ ಅದೇ ನಾಲ್ಕುಪಟ್ಟು ಹಣ ಕೊಟ್ಟರೂ ಮತ್ತೆ ಭೂಮಿ ಖರೀದಿಸುವುದು ಅಸಾಧ್ಯ ಎಂಬುದು ನಮ್ಮ ರೈತರಿಗೆ ಮನದಟ್ಟಾಗಿದೆ. ಹಾಗಾಗಿ ಹೋರಾಟಕ್ಕೆ ದಿನೇದಿನೆ ನಮ್ಮ ಸಂಖ್ಯೆ ಹೆಚ್ಚುತ್ತಲೇ ಇದೆ. ಹೋರಾಟದ ಮೂಲಕವೇ ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳುತ್ತೇವೆ" ಎಂದು ರಮೇಶ್‌ ಸ್ಪಷ್ಟಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | 516ನೇ ದಿನಕ್ಕೆ ಕಾಲಿಟ್ಟ ಕೋಚನಹಳ್ಳಿ ರೈತರ ಹೋರಾಟ

ಭೂಸ್ವಾಧೀನ ವಿರೋಧಿ ಹೋರಾಟದ ಹಿನ್ನೆಲೆ

ರಾಜ್ಯ ಸರ್ಕಾರ ಕೈಗಾರಿಕೆಗಳ ಹೆಸರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹಲವು ಗ್ರಾಮಗಳಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಅದನ್ನು ವಿರೋಧಿಸಿ ಚನ್ನರಾಯಪಟ್ಟಣ ಹೋಬಳಿಯ ರೈತರು ಕಳೆದ 114 ದಿನಗಳಿಂದ ಅನಿರ್ಧಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. 

ವಿಮಾನ ನಿಲ್ದಾಣ, ಎಸ್‌ಇಝಡ್‌ ಮತ್ತು ಐಟಿಐಆರ್‌ಗಳಿಗೆ ಈಗಾಗಲೇ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿವೆ. ಆದರೆ, ಅದರಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ. ಮಾತ್ರವಲ್ಲ, ಭೂಮಿ ಕಳೆದುಕೊಂಡ ಯಾವ ರೈತನ ಮಕ್ಕಳಿಗೂ ಉದ್ಯೋಗ ನೀಡಿಲ್ಲ. ಬದಲಾಗಿ ಹೋರಾಟ ನಿರತ ರೈತರ ಮೇಲೆ ನಿರಂತರವಾಗಿ ದಾಳಿಗಳು, ಸುಳ್ಳು ಪ್ರಕರಣ ದಾಖಲು ಮಾಡುವುದು, ಮಹಿಳೆಯರು, ವಯಸ್ಸಾದವರು ಎಂಬುದನ್ನು ಪರಿಗಣಿಸದೆ ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಏಟು ತಿಂದ ಯುವ ರೈತನೊಬ್ಬ ಕಣ್ಣು ಕಳೆದುಕೊಳ್ಳುವ ದುಸ್ಥಿಯಲ್ಲಿದ್ದಾನೆ. ಇವೆಲ್ಲವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಡುಕಾಣದಂತಿದ್ದಾರೆಂದು ಆರೋಪಿಸಿದ ಹೋರಾಟನಿರತ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ ವೆಂಕಟರಮಣಯ್ಯ ಮತ್ತು ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ಮಾರೇಗೌಡ, ಕೆಪಿಆರ್‌ಎಸ್‌ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಭೂ ಸ್ವಾಧೀನವನ್ನು ವಿರೋಧಿಸಿ ಹಾಗೂ ಹೋರಾಟ ರೈತರ ಮೇಲಿನ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಸಮಿತಿ ಈ ಕೆಳಗಿನ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟಿದೆ.

  1. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಮತ್ತು ಐಟಿಐ‌ಆರ್‌ಗಾಗಿ ಯೋಜಿಸಿರುವ ಕುಂದಾಣ ಹೋಬಳಿಯ 4 ಹಳ್ಳಿಗಳ 867 ಎಕರೆ, ದೊಡ್ಡಬಳ್ಳಾಪುರ ಕಸಬಾ ಹೋಬಳಿಯ 4 ಹಳ್ಳಿಗಳ 1031 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ರದ್ದು ಪಡಿಸಬೇಕು.
  2. ಕಳೆದ 144 ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಆ.15 ರ 75ನೇ ಸ್ವಾತಂತ್ರ್ಯೋತ್ಸವದ ವೇಳೆ ಅಮಾನವೀಯವಾಗಿ ಪೋಲಿಸರು ನಡೆಸಿದ ದೌರ್ಜನ್ಯಕ್ಕೆ ನೈತಿಕ ಹೊಣೆ ಹೊತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಸುಧಾಕರ್ ರಾಜೀನಾಮೆ ನೀಡಬೇಕು.
  3. ಕೆಐಎಡಿಬಿ ಸಂಸ್ಥೆಯನ್ನು ʼರಿಯಲ್ ಎಸ್ಟೇಟ್ʼ ಸಂಸ್ಥೆಯನ್ನಾಗಿ ಮಾರ್ಪಡಿಸಿ ರೈತರಿಗೆ ದ್ರೋಹ ಮಾಡುತ್ತಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯನ್ನು ಮಂತ್ರಿಮಂಡಲದಿಂದ ಕೈ ಬಿಡಬೇಕು.
  4. ದೇವನಹಳ್ಳಿ, ಚನ್ನರಾಯಪಟ್ಟಣ ಹೋಬಳಿಯ ಮೊದಲನೇ ಹಂತದ ಕೆಐಎಡಿಬಿಯ ಭೂ ಸ್ವಾಧೀನ ಪ್ರದೇಶವನ್ನು ಒಳಗೊಂಡು ಇಡೀ ಗ್ರಾಮಾಂತರ ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಿರುವ ಭೂಮಿಯ ಬಳಕೆ, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗಗಳ ನೀಡಿಕೆ ಇತ್ಯಾದಿ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಸ್ವಾಧೀನ ಪ್ರಕ್ರಿಯೆಗೆ ಕೈ ಹಾಕಬಾರದು.
  5. ಆಗಸ್ಟ್ 15 ರ ಪೊಲೀಸರ ದೌರ್ಜನ್ಯಕ್ಕೆ ಗುರಿಯಾಗಿ ತನ್ನ ಕಣ್ಣನ್ನು ಕಳೆದುಕೊಳ್ಳುತ್ತಿರುವ ರೈತ ಯುವಕ ಪ್ರಮೋದ್ ಗೌಡ ಮತ್ತು ಗಾಯಗೊಂಡಿರುವ ರೈತರುಗಳ ಆಸ್ಪತ್ರೆಯ ಚಿಕಿತ್ಸೆಯನ್ನು ರಾಜ್ಯ ಸರ್ಕಾರ ಬರಿಸಬೇಕು.
  6. ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ನಿರತರಾಗಿರುವವರಲ್ಲಿ 71 ರೈತರ ಮೇಲೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು.
  7. ರೈತರ ಮೇಲೆ ದೌರ್ಜನ ನಡೆಸಿದ ಚನ್ನರಾಯಪಟ್ಟಣ ಮತ್ತು ದೇವನಹಳ್ಳಿ ಪೋಲಿಸರನ್ನು ಕೂಡಲೇ ಅಮಾನತ್ತುಗೊಳಿಸಬೇಕು.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app