ಧಾರವಾಡ | 2.25 ಕೋಟಿಗೆ ಖಾದಿ ಧ್ವಜಗಳ ಮಾರಾಟ ಮಾಡಿದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ

  • ಕಳೆದ ಮೂರು ವರ್ಷಗಳಿಗಿಂತ ಅಧಿಕ ಮೊತ್ತಕ್ಕೆ ಧ್ವಜಗಳ ಮಾರಾಟ
  • ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹೆಚ್ಚು ಬಾವುಟ ಮಾರಾಟ

75ನೇ ಅಮೃತ ಮಹೋತ್ಸವದ ಅಂಗವಾಗಿ ಈ ವರ್ಷ ಏಪ್ರಿಲ್ ತಿಂಗಳಿನಿಂದ ಆಗಸ್ಟ್‌ವರೆಗೆ ₹2.25 ಕೋಟಿಗೆ ಭಾರತದ ಖಾದಿ ಧ್ವಜಗಳು ಮಾರಾಟವಾಗಿವೆ. ಕೇಂದ್ರ ಸರ್ಕಾರ ಧ್ವಜ ಸಂಹಿತೆ ತಿದ್ದುಪಡಿ ಮಾಡಿ, ಪಾಲಿಸ್ಟರ್ ಧ್ವಜಾರೋಹಣಕ್ಕೆ ಅವಕಾಶ ನೀಡಿದ್ದರೂ, ಕಳೆದ ವರ್ಷಗಳಿಗಿಂತ ಈ ವರ್ಷ ಹೆಚ್ಚು ಮೊತ್ತಕ್ಕೆ ಖಾದಿ ಧ್ವಜಗಳು ಮಾರಾಟವಾಗಿವೆ.

“75ನೇ ಅಮೃತ ಮಹೋತ್ಸವದ ಅಂಗವಾಗಿ ಈ ವರ್ಷ ಹೆಚ್ಚು ಧ್ವಜಗಳು ಮಾರಾಟವಾಗಿವೆ. ಸರ್ಕಾರಿ ಕಚೇರಿಗಳ ಮೇಲೆ ಈ ವರ್ಷ ಹೊಸ ಧ್ವಜಗಳನ್ನೇ ಖರೀದಿಸಿದ್ದಾರೆ. ಒಮ್ಮೆ ಬಾವುಟ ಖರೀದಿಸಿದರೆ, ಮೂರು ವರ್ಷಗಳವರೆಗೆ ಒಂದೇ ಬಾವುಟ ಬಳಸುತ್ತಾರೆ. ಆದರೆ, ಈ ವರ್ಷ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹೆಚ್ಚು ಉತ್ಸಾಹದಿಂದ ಹೊಸ ಬಾವುಟಗಳನ್ನೆ ಖರೀದಿ ಮಾಡಿದ್ದಾರೆ. ಮನೆ-ಮನೆ ಮೇಲೆ ಬಾವುಟ ಹಾರಿಸುವವರು ಸಹ ನಮ್ಮ ಖಾದಿ ಧ್ವಜಗಳನ್ನೇ ಖರೀದಿಸಿದ್ದಾರೆ” ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವನಂದ್ ಮಠಪತಿ ಈ ದಿನ. ಕಾಮ್‌ಗೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75| ಕಾರ್ಮಿಕರ ʼನೆಮ್ಮದಿಯ ನಾಳೆʼಗಳು ಏನಾದವು?

“ಕಳೆದ ಮೂರು ವರ್ಷಗಳಲ್ಲಿ ₹1.30 ಕೋಟಿ, ₹1.40 ಕೋಟಿ ಹಾಗೂ ₹1.25 ಕೋಟಿಗೆ ಖಾದಿ ಧ್ವಜಗಳು ಮಾರಾಟವಾಗಿದ್ದವು. ಆದರೆ, ಧಾರವಾಡ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಎಲ್ಲ ಸರ್ಕಾರಿ ಕಚೇರಿಗಳು ಖಾದಿ ಧ್ವಜವನ್ನೇ ಹಾರಿಸಬೇಕು ಎಂದು ಆದೇಶ ಹೊರಡಿಸಿದ್ದರು. ಹಾಗಾಗಿ ಈ ವರ್ಷ ಹೆಚ್ಚು ಖಾದಿ ಧ್ವಜಗಳು ಮಾರಾಟವಾಗಿವೆ. ಸರ್ಕಾರಿ ಕಚೇರಿಗಳು ಹೆಚ್ಚು  ಖಾದಿ ಧ್ವಜ ಖರೀದಿ ಮಾಡಿವೆ. ಜೊತೆಗೆ ಸಾರ್ವಜನಿಕರು ಸ್ವ ಇಚ್ಛೆಯಿಂದ ಖಾದಿ ಧ್ವಜಗಳನ್ನೇ ಖರೀದಿ ಮಾಡಿದ್ದಾರೆ. ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯಲ್ಲೇ ಅಧಿಕವಾಗಿ ಖಾದಿ ಧ್ವಜ ಮಾರಾಟವಾಗಿವೆ” ಎಂದು ತಿಳಿಸಿದರು.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗಿತ್ತು. 2018-19ರಲ್ಲಿ ಗ್ರಾಮೋದ್ಯೋಗ ಸಂಘ ₹3 ಕೋಟಿ ಆದಾಯ ಗಳಿಸಿತ್ತು. ಮುಕ್ತ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ರಾಷ್ಟ್ರಧ್ವಜ ವಿತರಣೆ ಮಾಡಲಾಗಿದೆ. 'ಆಝಾದಿ ಕಾ ಅಮೃತ್ ಮಹೋತ್ಸವ'ದ ನೆನಪಿಗಾಗಿ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಹಾರಿಸಲು ಯುವಕರು ತೋರಿದ ಉತ್ಸಾಹದಿಂದ ಖಾದಿ ರಾಷ್ಟ್ರಧ್ವಜಗಳ ಮಾರಾಟಕ್ಕೆ ಉತ್ತೇಜನ ನೀಡಲಾಯಿತು ಎಂದು ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್