ಧಾರವಾಡ | 4ನೇ ದಿನಕ್ಕೆ ಕಾಲಿಟ್ಟ ಕರ್ನಾಟಕ ವಿವಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

  • ವೇತನ ಹೆಚ್ಚಳ, ಸೇವಾ ಭದ್ರತೆ ನೀಡುವಂತೆ ಧರಣಿ ನಡೆಸುತ್ತಿರುವ ಉಪನ್ಯಾಸಕರು
  • ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದಿದ್ದ ಸುಪ್ರೀಂ ಕೋರ್ಟ್

ವೇತನ ಹೆಚ್ಚಳ, ಪದನಾಮ ಬದಲಾವಣೆ, ಸೇವಾ ಭದ್ರತೆ, ಬೋಧನಾ ಅವಧಿ ಯಥಾಸ್ಥಿತಿ ಕಾಪಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.

ಧಾರವಾಡ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯದ ಮುಂಭಾಗ ಸುಮಾರು 600ಕ್ಕೂ ಹೆಚ್ಚು ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.

“ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇನ್ನೊಂದೆಡೆ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 50 ಸಾವಿರ ಸಂಬಳ ನೀಡಬೇಕೆಂದು ಯುಜಿಸಿಯ ನಿಯಮಾವಳಿಯೇ ಇದೆ. ಹೀಗಿದ್ದರೂ ಕುಲಪತಿ ಪ್ರೋ. ಕೆ ಬಿ ಗುಡಸಿ ಅವರು ವೇತನ ಹೆಚ್ವಳಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿತ್ಯ ಕೆಲಸ ಮಾಡುವ ಉಪನ್ಯಾಸಕರಿಗೆ ಅತಿಥಿ ಪದ ಬಳಸಿ ಅಪಮಾನ ಮಾಡಲಾಗುತ್ತಿದ್ದು, ಪದನಾಮ ಬದಲಾವಣೆ ಮಾಡಬೇಕು. ಸೇವಾ ಭದ್ರತೆ ಕಲ್ಪಿಸಬೇಕು” ಎಂದು ಪ್ರತಿಭಟನೆ ಮಾಡುತ್ತಿರುವುದಾಗಿ ಉಪನ್ಯಾಸಕ ಡಾ. ವೆಂಕಣಗೌಡ ಪಾಟೀಲ ಅವರು ಈ ದಿನ.ಕಾಮ್‌ಗೆ ತಿಳಿಸಿದರು.

'ಈ ಹಿಂದೆ ಆರು ದಿನಗಳ ಕಾಲ ಪ್ರತಿಭಟನೆ ನಡೆಸಿದಾಗ, ನಮ್ಮ ಬೇಡಿಕೆ ಇಡೇರಿಸುವ ಭರವಸೆಯನ್ನು ಕುಲಪತಿಗಳು ನೀಡಿದ್ದರು. ಆದರೆ, ನೀಡಿದ ಭರವಸೆ ಈಡೇರಿಸದೆ, ಉಪನ್ಯಾಸಕರ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬೋಧನಾ ಅವಧಿ ಹೆಚ್ಚಿಸಿ ಉಪನ್ಯಾಸಕರನ್ನು ಉದ್ಯೋಗದಿಂದ ಹೊರ ಹಾಕುವ ಹುನ್ನಾರ ನಡೆಸಿದ್ದಾರೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕೆಸಿಇಟಿ ವಿವಾದ| ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಪ್ರೊ . ಕೆ ಬಿ ಗುಡಸಿ ಒಬ್ಬ ಅಸಮರ್ಥ ಕುಲಪತಿ ಎಂದು ಹರಿಹಾಯ್ದ ಉಪನ್ಯಾಸಕರು, 'ತಮ್ಮ ಅವಧಿಯಲ್ಲಿ ಸರ್ಕಾರದಿಂದ ಒಂದೇ ಒಂದು ಪೈಸೆ ಅನುದಾನ ತಂದಿಲ್ಲ. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಯಾವುದೇ ಅಭಿವೃದ್ಧಿಯಾಗಿಲ್ಲ. ತಮ್ಮ ತಪ್ಪುಗಳನ್ನು ಮರೆಮಾಚುವ ಸಲುವಾಗಿ, ವಿದ್ಯಾರ್ಥಿಗಳಿಗೆ ಇಷ್ಟಬಂದ ಹಾಗೇ ಶುಲ್ಕ ಹೆಚ್ಚಳ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆಯನ್ನು ಹೇರಿದ್ದಾರೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರು, ಡಾ. ಮಲ್ಲಿಕಾರ್ಜುನ ಬ್ಯಾಲ್ಯಾಳ, ಡಾ. ಅಂಬರೀಶ ಸಿಂದಗಿ, ಡಾ ಮಹದೇವ ಬಿಡ್ನಾಳ ಸೇರಿದಂತೆ ಮತ್ತಿತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್