ಕೊಪ್ಪಳ | ಭಾನುವಾರವೂ ಶಾಲೆಗಳನ್ನು ನಡೆಸಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆ ಆದೇಶ

  • ಮಳೆ ಕಾರಣಕ್ಕೆ ನೀಡಿದ್ದ ರಜೆಗಳನ್ನು ಸರಿದೂಗಿಸಲು ನಿರ್ಧಾರ
  • ಭಾನುವಾರ ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಲು ಸೂಚನೆ

ಮಳೆಯ ಕಾರಣಕ್ಕಾಗಿ ಕೊಪ್ಪಳ ಜಿಲ್ಲೆಯಾದ್ಯಂತ ನೀಡಲಾಗಿದ್ದ ರಜೆಗಳನ್ನು ಸರಿದೂಗಿಸುವ ಉದ್ದೇಶದಿಂದ ಆಗಸ್ಟ್ 14ರ ಭಾನುವಾರ ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಬೇಕೆಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. 

ಆಗಸ್ಟ್ ಎರಡರಂದು ಕೊಪ್ಪಳದಲ್ಲಿ ತೀವ್ರವಾಗಿ ಮಳೆಯಾಗುವ ಸಾಧ್ಯತೆ ಇದ್ದ ಕಾರಣದಿಂದ ಮುನ್ನೆಚರಿಕಾ ಕ್ರಮವಾಗಿ ಕೊಪ್ಪಳ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಕೊಪ್ಪಳ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದರು. ಜೊತೆಗೆ ರಜೆ ನೀಡಿದ ದಿನವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವಂತೆಯೂ ಸೂಚನೆ ನೀಡಿದ್ದರು. 

ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ಶಾಲೆ ಪ್ರವೇಶಾತಿಗೆ ಆರು ವರ್ಷ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದ ತಜ್ಞರು

ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪೂರ್ವ ಪ್ರಾಥಮಿಕ, ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳು ಹಾಗೂ ಕಾಲೇಜುಗಳಿಗೆ ಆಗಸ್ಟ್ 2ರಂದು ಒಂದು ದಿನದ ಮಟ್ಟಿಗೆ ರಜೆ ನೀಡಲಾಗಿತ್ತು.

ಘೋಷಿಸಿದ ರಜೆ ದಿನವನ್ನು ಸರಿದೂಗಿಸಲು ಆಗಸ್ಟ್ 14ರ ಭಾನುವಾರದಂದು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳನ್ನು ತೆರೆಯಬೇಕು. ಪೂರ್ಣ ಪ್ರಮಾಣದಲ್ಲಿ ತರಗತಿಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕು. ಮಧ್ಯಾಹ್ನದ ಉಪಹಾರವನ್ನು ವಿತರಿಸಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅದೇಶದಲ್ಲಿ ಸೂಚನೆ ನೀಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್