ಡಿಕೆಶಿಗೆ ಮತ್ತೊಂದು ಸಂಕಷ್ಟ | ಐಟಿ ದಾಖಲಿಸಿದ್ದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ 'ಮರುಜೀವ'

D K Shivakumar
  • ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಐಟಿ
  • ನಾಲ್ಕು ವಾರಗಳ ಒಳಗೆ ಹೊಸ ಅರ್ಜಿ ಸಲ್ಲಿಸುವಂತೆ ಐಟಿಗೆ ಸೂಚನೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಐಟಿ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಬಿಡದಿಯ ಈಗಲ್ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಡಿಕೆಶಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಐಟಿ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠವು ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ. ಅಲ್ಲದೆ, ನಾಲ್ಕು ವಾರಗಳೊಳಗೆ ಹೊಸ ಅರ್ಜಿ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.

ಏನಿದು ಪ್ರಕರಣ?

2017ರ ಆಗಸ್ಟ್ 2ರಂದು ಡಿ ಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಈಗಲ್ಟನ್ ರೆಸಾರ್ಟ್‌ನಲ್ಲಿ ಗುಜರಾತ್‌ನ 44 ಕಾಂಗ್ರೆಸ್ ಶಾಸಕರ ಯೋಗಕ್ಷೇಮದ ಉಸ್ತುವಾರಿಯನ್ನು ಡಿಕೆಶಿ ನೋಡಿಕೊಳ್ಳುತ್ತಿದ್ದರು. ಈ ಮಾಹಿತಿ ತಿಳಿದ ಅಧಿಕಾರಿಗಳು ಅಲ್ಲಿಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಕೆಲ ಮಹತ್ವದ ದಾಖಲೆಗಳು ಲಭ್ಯವಾಗಿದ್ದವು. ಡಿಕೆಶಿ ಹರಿದು ಹಾಕಿದ್ದರು ಎನ್ನಲಾದ ಚೀಟಿಯೊಂದು ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಆ ಕಾಗದದಲ್ಲಿ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ದಾಖಲೆ ಇತ್ತು ಎಂದು ಐಟಿ ಆರೋಪಿಸಿತ್ತು. ಅಕ್ರಮ ವ್ಯವಹಾರ ನಡೆಸಿರುವ, ಡಿಜಿಟಲ್ ಕೇಬಲ್ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಆ ಚೀಟಿಯಲ್ಲಿತ್ತು ಎನ್ನುವುದು ಐಟಿಯ ಆರೋಪವಾಗಿತ್ತು. ಈ ಸಂಬಂಧ ಸಾಕ್ಷ್ಯ ನಾಶ ಮಾಡಿದ ಆರೋಪ ಹೊರಿಸಿ ಐಟಿ ಅಧಿಕಾರಿಗಳು ಡಿಕೆಶಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ಇಡಿ ಪ್ರಕರಣ: ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಚಾರಣೆ

ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2019ರಲ್ಲಿ ರದ್ದು ಮಾಡಿತ್ತು. ನ್ಯಾಯಾಲಯದ ಆದೇಶ ಪ್ರಶ್ನಿಸಿ ಐಟಿ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಕೂಡ ಅರ್ಜಿಯನ್ನು ವಜಾಗೊಳಿಸಿತ್ತು.

"ಆರೋಪಿಯಿಂದ ಹಣಕಾಸು ವ್ಯವಹಾರಗಳು ನಡೆದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಲೆಕ್ಕವಿಲ್ಲದ ವಹಿವಾಟುಗಳು ನಡೆದಿದ್ದರೂ ತೆರಿಗೆ ಅಥವಾ ದಂಡದ ಪಾವತಿಗೆ ಆರೋಪಿ ಹೊಣೆಗಾರರಾಗಿದ್ದಾರೆ ಎಂಬುದನ್ನು ನಿರ್ಧರಿಸುವವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ" ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್