
"ನಿನ್ನೆ (ನ.28) ಬೆಳಗ್ಗೆ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್(NSP) ಸುಮಾರು 20ರಷ್ಟು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಆನ್ಲೈನ್ ಅರ್ಜಿ ಸಲ್ಲಿಸಿದ್ದೆ. ಮಧ್ಯಾಹ್ನ ಊಟ ಮುಗಿಸಿ ಮತ್ತೆ ಕೆಲವು ಮಕ್ಕಳ ಅರ್ಜಿಗಳನ್ನು ಸಲ್ಲಿಸಲು ಹೊರಟರೆ, 'ರೇಷನ್ ಕಾರ್ಡ್' ಕಡ್ಡಾಯ ಎಂಬ ಸೂಚನೆ ಕಾಣುತ್ತಿತ್ತು. ಇದರಿಂದ ಹತ್ತು ಹಲವು ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಲು ಇನ್ನೂ ಬಾಕಿ ಇದೆ. ನ.30 ಕೊನೆಯ ದಿನ ಬೇರೆ. ಯಾವುದೇ ಮುನ್ಸೂಚನೆ ನೀಡದೆ ಇಲಾಖೆಯವರು ಹೀಗೆ ಮಾಡಿದರೆ ಹೇಗೆ?" ಹೀಗೆಂದು ಹೇಳಿದವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಾಗರಿಕ ಸೇವಾ ಕೇಂದ್ರ ಎಂಬ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿ ಮುಹಮ್ಮದ್ ಆರಿಫ್ ಕಲಾಯಿ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯದ ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವ ನಿರ್ಧಾರ ಕೇಂದ್ರ ಸರ್ಕಾರ ಪ್ರಕಟಿಸಿದ ನಡುವೆಯೇ, ಕೇಂದ್ರ ಸರ್ಕಾರದಿಂದ ನಡೆಸಲಾಗುವ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ 'ರೇಷನ್ ಕಾರ್ಡ್' ಸಂಖ್ಯೆ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ. ಅದು ಕೂಡ ಯಾವುದೇ ಮುನ್ಸೂಚನೆ ಇಲ್ಲದೆ!

ನ.28ರ ಮಧ್ಯಾಹ್ನದವರೆಗೆ ಇಲ್ಲದಿದ್ದ ನಿಯಮ ದಿಡೀರ್ ಆಗಿ ಜಾರಿಗೊಳಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ್ದ ಹಲವು ವಿದ್ಯಾರ್ಥಿಗಳ ಅರ್ಜಿಗಳನ್ನು 'ಡಿಫೆಕ್ಟ್' ಎಂದು ಪರಿಗಣಿಸಿ, ಸರಿ ಮಾಡಿ ಮತ್ತೆ ಅರ್ಜಿ ಸಲ್ಲಿಸಲು ಸಂದೇಶ ಕಳುಹಿಸಲಾಗಿದೆ.
"ಸರ್ಕಾರ ಅಥವಾ ಅಧಿಕಾರಿಗಳು ಒಂದೋ ಆರಂಭದಲ್ಲಿ ಈ ನಿಯಮ ತರಬೇಕಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಈ ಥರ ಒಂದೊಂದು ನಿಯಮ ತರವುದು ಸರಿಯಲ್ಲ. ಈಗಾಗಲೇ ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿವೇತನದಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ನಿಲ್ಲಿಸುವುದಾಗಿ ತಿಳಿಸಿದೆ. ನಮ್ಮ ಸಂಸ್ಥೆಯ ಮೂಲಕ ಈಗಾಗಲೇ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅರ್ಜಿಯನ್ನು ಆನ್ಲೈನ್ ಮೂಲಕ ತುಂಬಿಸಿದ್ದೇವೆ. ಅವರಲ್ಲಿ ಹೆಚ್ಚಿನ ಪೋಷಕರು ಫೀಸು ಕಟ್ಟಲು ಸಾಧ್ಯವಾಗದ ಕಾರಣ, ಸರ್ಕಾರ ನೀಡುತ್ತಿದ್ದ ಸ್ವಲ್ಪ ನೆರವಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಿಗೆ ಬರಲಿದೆ ಎಂದು ನಂಬಿದ್ದರು. ಈಗ ಅದೂ ಇಲ್ಲದಾಗಿದೆ. ಇದೀಗ, ರೇಷನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ಸರ್ಕಾರದ ಉದ್ದೇಶ ಏನು ಎಂಬುವುದೇ ಅರ್ಥವಾಗುತ್ತಿಲ್ಲ" ಎಂದು ಆರಿಫ್ ಈ ದಿನ.ಕಾಮ್ಗೆ ತಿಳಿಸಿದರು.
ನಮಸ್ಕಾರ,
— Department of Minority Welfare, Govt of Karnataka (@DOMGOK) November 29, 2022
ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. NSP ಪೋರ್ಟಲ್ ಅನ್ನು NIC, ಭಾರತ ಸರ್ಕಾರವು ನಿರ್ವಹಿಸುವುದರಿಂದ, ಈ ಸಮಸ್ಯೆಯನ್ನು ನಾವು ಈಗಾಗಲೇ ಎನ್ಐಸಿಗೆ ತಲುಪಿಸಿದ್ದೇವೆ . ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು NIC ಅಥವಾ MOMA ಅನ್ನು 1800-111-555 ಅಥವಾ 011-2430-5000 ನಲ್ಲಿ ಸಂಪರ್ಕಿಸಿ.
Regards.
#KarnatakaMWD
"ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ(NIC) ಭಾರತ ಸರ್ಕಾರವು ನಿರ್ವಹಿಸುವುದರಿಂದ, ಈ ಸಮಸ್ಯೆಯನ್ನು ನಾವು ಈಗಾಗಲೇ ಎನ್ಐಸಿಗೆ ತಲುಪಿಸಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಎನ್ಐಸಿ ಅಥವಾ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು 1800-111-555 ಅಥವಾ 011-2430-5000 ನಲ್ಲಿ ಸಂಪರ್ಕಿಸಿ" ಎಂದು ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯವು ಈ ದಿನ.ಕಾಮ್ಗೆ ಟ್ವೀಟ್ ಮೂಲಕ ಉತ್ತರ ನೀಡಿದೆ.
ಈ ಬಗ್ಗೆ ಈ ದಿನ.ಕಾಮ್ ದೆಹಲಿಯಲ್ಲಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದಾಗ, "ಸಂಬಂಧಪಟ್ಟ ಅಧಿಕಾರಿಗಳು ರಜೆಯಲ್ಲಿದ್ದಾರೆ. ಹಾಗಾಗಿ ಒಂದು ವಾರ ಬಿಟ್ಟು ಕರೆ ಮಾಡಿದರೆ, ನಿಮಗೆ ಮಾಹಿತಿ ಸಿಗಬಹುದು" ಎಂದು ತಿಳಿಸಿದ್ದಾರೆ.
"ನಾನು ಇಂಜಿನಿಯರಿಂಗ್ ಕಲಿಯುವ ಮೊದಲ ವರ್ಷದ ವಿದ್ಯಾರ್ಥಿ. ನನ್ನ ಸ್ನೇಹಿತನ ನೆರವಿನಿಂದ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದೆ. ಬಳಿಕ ಅದರ ಒಂದು ಪ್ರತಿಯನ್ನು ಕಾಲೇಜಿಗೂ ದಾಖಲೆಯೊಂದಿಗೆ ಸಲ್ಲಿಸಿದ್ದೆ. ಆದರೆ ನಿನ್ನೆ, ನನ್ನ ಅರ್ಜಿಯಲ್ಲಿ ರೇಷನ್ ಕಾರ್ಡ್ ನಂಬರ್ ಹಾಕಿಲ್ಲ ಎಂದು ತಿಳಿಸಿ, ಕಾಲೇಜಿನವರು ಹಿಂದಿರುಗಿಸಿದ್ದಾರೆ. ನಮಗೆ ರೇಷನ್ ಕಾರ್ಡೇ ಇಲ್ಲ. ಈಗ ಏನು ಮಾಡಬೇಕೆಂದೇ ತೋಚುತ್ತಿಲ್ಲ" ಎಂದು ಹೆಸರು ಹೇಳಲಿಚ್ಛಿಸದ ಬೆಂಗಳೂರಿನ ಕೆಂಗೇರಿಯಲ್ಲಿರುವ ಖಾಸಗಿ ಸಂಸ್ಥೆಯೊಂದರ ವಿದ್ಯಾರ್ಥಿ ಈ ದಿನ.ಕಾಮ್ಗೆ ತಿಳಿಸಿದ್ದಾನೆ.

ಈ ಸಂಬಂಧ ಈ ದಿನ.ಕಾಮ್ ಜೊತೆಗೆ ಅಭಿಪ್ರಾಯ ಹಂಚಿಕೊಂಡ ಮಾಜಿ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, "ಈಗೀಗ ದೇಶದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸವನ್ನು ಗಳಿಸಿ, ಮಹತ್ವದ ಹುದ್ದೆಗಳಿಗೆ ಏರುತ್ತಿದ್ದಾರೆ. ಹೆಚ್ಚಿನ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ನೆರವಿನಿಂದಲೇ ಶಿಕ್ಷಣ ಕಲಿತವರು. ಹಾಗಾಗಿ ಮೊದಲನೆಯದಾಗಿ ವಿದ್ಯಾರ್ಥಿವೇತನ ನಿಲ್ಲಿಸುವ ನಿರ್ಧಾರ ಖಂಡನೀಯ. ಕೇಂದ್ರ ಸರ್ಕಾರ ಆರ್ಟಿಈ ಕಾಯ್ದೆಯಡಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದೆ. ದೇಶದಲ್ಲಿರುವ ಖಾಸಗಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ದೇಶದಲ್ಲಿ ನೀಡುತ್ತಿಲ್ಲ ಎಂಬ ಪ್ರಜ್ಞೆ ಸರ್ಕಾರಕ್ಕೆ ಇಲ್ಲವೇ?" ಎಂದು ಕೇಳಿದರು.
"ಎರಡನೆಯದಾಗಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಈ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಕಲಿಯುತ್ತಿರುವವ ಎಂದು ಸರ್ಟಿಫಿಕೇಟ್ ಕೊಟ್ಟ ಮೇಲೂ ಎನ್ಎಸ್ಪಿ ವೆಬ್ಸೈಟ್ನಲ್ಲಿ 'ರೇಷನ್ ಕಾರ್ಡ್' ಅನ್ನು ಕಡ್ಡಾಯ ಮಾಡಿರುವುದರ ಹಿಂದೆ ಸರ್ಕಾರದ ನಡೆಯ ಬಗ್ಗೆಯೇ ಅನುಮಾನ ಮೂಡಿಸಿದೆ. ಎಲ್ಲರಲ್ಲೂ 'ರೇಷನ್ ಕಾರ್ಡ್' ಇರಲ್ಲ. ಹಾಗಾದರೆ ಅವರು ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲವೇ? ಒಂದು ವೇಳೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು ಎಂದು ಮೊದಲೇ ವಿದ್ಯಾರ್ಥಿಗಳಿಗೆ ತಿಳಿಸಬಹುದಿತ್ತು. ಯಾವುದೇ ಮುನ್ಸೂಚನೆ ಅಥವಾ ಆದೇಶವನ್ನು ಪ್ರಕಟಿಸದೆ ಈ ರೀತಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಂಚಿಸುವುದು ಸರಿಯಲ್ಲ. ಆದ್ದರಿಂದ ಅವೈಜ್ಞಾನಿಕ ತೀರ್ಮಾನ ಮಾಡುವ ಮುನ್ನ ಮಕ್ಕಳ ಬಗ್ಗೆಯೂ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯೋಚಿಸಲಿ" ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಎಕ್ಸ್ಕ್ಲೂಸಿವ್ । ಅಲ್ಪಸಂಖ್ಯಾತರಿಗೆ ಮತ್ತೊಂದು ಶಾಕ್: ಇನ್ನು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಿಲ್ಲ ಕೇಂದ್ರದ ಸ್ಕಾಲರ್ಶಿಪ್!
"ನಮ್ಮ ಇಲಾಖೆಯಲ್ಲಿರುವ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಕೇಳಿದಾಗಲೆಲ್ಲ ನೀಡಿದ್ದೇವೆ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 'ರೇಷನ್ ಕಾರ್ಡ್' ಕಡ್ಡಾಯ ಮಾಡಿರುವ ವಿಚಾರ ನಮಗೆ ತಿಳಿದಿಲ್ಲ. ಅದು ಆಯಾ ಇಲಾಖೆಯವರಿಗೆ ಬಿಟ್ಟದ್ದು. ಒಂದು ವೇಳೆ ಏನಾದರೂ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ವಿದ್ಯಾರ್ಥಿಗಳು ಬಗೆಹರಿಸಿಕೊಳ್ಳಬಹುದು" ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತೆ ಎಂ ಕನಗವಳ್ಳಿ ಈ ದಿನ.ಕಾಮ್ಗೆ ತಿಳಿಸಿದರು.
ಕೇಂದ್ರ ಸರ್ಕಾರದ್ದು ಶಿಕ್ಷಣ ವಿರೋಧಿ ನಡೆ
"ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ನಡೆ ಖಂಡನೀಯ. 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಆರ್ಟಿಇ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಿದ್ದು, ಅವರಿಗೆ ಸ್ಕಾಲರ್ಶಿಪ್ನ ಅಗತ್ಯತೆ ಬೀಳುವುದಿಲ್ಲ. ಹಾಗಾಗಿ, ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದು ಆರ್ಟಿಇ ಕಾಯ್ದೆಯ ತಪ್ಪು ವ್ಯಾಖ್ಯಾನ. ಮೂಲಭೂತ ಹಕ್ಕಾದ ಆರ್ಟಿಇ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವ ಸ್ಕಾಲರ್ಶಿಪ್ ಅನ್ನು ಹೆಚ್ಚುವರಿ ಸವಲತ್ತು ಎಂಬಂತೆ ಬಿಂಬಿಸುವುದು ತಪ್ಪು. ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿ. ಅದರ ಭಾಗವಾಗಿ ಸ್ಕಾಲರ್ಶಿಪ್ ಅನ್ನು ಜಾರಿಗೆ ತರಲಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕು" ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹಿರ್ ಹುಸೇನ್ ಈ ದಿನ.ಕಾಮ್ಗೆ ತಿಳಿಸಿದ್ದಾರೆ.

"ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿ. ಕೇಂದ್ರ ಈ ಸುತ್ತೋಲೆಯು ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನ. ಇದು ಸ್ಪಷ್ಟವಾಗಿ ಬಿಜೆಪಿಯ ಶಿಕ್ಷಣ ವಿರೋಧಿ ಧೋರಣೆ. ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನದ ಆಶಯಗಳು ಮತ್ತು ಮೂಲಭೂತ ಹಕ್ಕುಗಳ ಆಶಯಗಳನ್ನು ಒಂದಿಲ್ಲೊಂದು ರೀತಿಯಲ್ಲಿ ದುರ್ಬಲಗೊಳಿಸುತ್ತಲೇ ಇದೆ" ಎಂದು ತಿಳಿಸಿದ್ದಾರೆ.
"ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆಯುಳ್ಳ ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೇಮಿಸಿದ್ದ ಸಮಿತಿಯು ಬಹಿರಂಗಪಡಿಸಿದ್ದ ವರದಿಯು, ಅತ್ಯಂತ ಕಳವಳಕಾರಿಯಾಗಿತ್ತು. ಇದೀಗ ಆ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಸಾಧ್ಯವಾಗುವ ಎಲ್ಲ ರೀತಿಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಬೇಕಾದ ಹೊತ್ತಲ್ಲಿಯೇ, ಕೇಂದ್ರದ ಇಂತಹ ಶಿಕ್ಷಣ ವಿರೋಧಿ ನಡೆಯು ದೇಶದ ಸಾಕ್ಷರತಾ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ" ಎಂದು ಅಡ್ವೊಕೇಟ್ ತಾಹೆರ್ ಹುಸೇನ್ ಈ ದಿನ.ಕಾಮ್ಗೆ ಹೇಳಿದರು.