ಭಾರತದಿಂದ ಗೋಧಿ ಖರೀದಿಗೆ ಈಜಿಪ್ಟ್‌ ಒಪ್ಪಿಗೆ | ಇನ್ನೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಸಾಧ್ಯತೆ

  • ಭಾರತವು ಗೋಧಿ ರಫ್ತು ಮಾಡುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ
  • ಗೋಧಿ ಸಾಗಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ವಿಶ್ವದ ಅಗ್ರ ಗೋಧಿ ಆಮದುದಾರ ಈಜಿಪ್ಟ್ ದೇಶವು ಭಾರತದಿಂದ ಆಹಾರ ದಾಸ್ತಾನುಗಳನ್ನು ಖರೀದಿಸಲು ಒಪ್ಪಿಕೊಂಡಿದೆ. ಇದು ಭಾರತೀಯ ರೈತರಿಗೆ ಲಾಭದಾಯಕ ಮಾರುಕಟ್ಟೆಯನ್ನು ತೆರೆಯುತ್ತದೆ ಮತ್ತು ಕೃಷಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಉಭಯ ರಾಷ್ಟ್ರಗಳ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. 

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದ ಉಂಟಾದ ಜಾಗತಿಕ ಕೊರತೆಯ ನಡುವೆ ಭಾರತವು ಗೋಧಿ ರಫ್ತು ಮಾಡುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. 

ಇದನ್ನು ಓದಿದ್ದೀರಾ? | ಡಿ ಕೆಂಪಣ್ಣ ಸಂದರ್ಶನ | ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರದ್ದು ಸರ್ಕಾರ ಮಾಡಿದ ಕೊಲೆ

ಭಾರತವು ಗೋಧಿ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಇದು ಪ್ರಸ್ತುತ "ಈಜಿಪ್ಟ್, ಟರ್ಕಿ, ಚೀನಾ, ಬೋಸ್ನಿಯಾ, ಸುಡಾನ್, ನೈಜೀರಿಯಾ, ಇರಾನ್" ಸೇರಿದಂತೆ ವಿವಿಧ ದೇಶಗಳೊಂದಿಗೆ ಗೋಧಿ ರಫ್ತಿನ ಬಗ್ಗೆ ಚರ್ಚೆ ನಡೆಸುತ್ತಿದೆ.

ಕೃಷಿ ಉತ್ಪನ್ನಗಳ ರಫ್ತಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿರುವುದು ಭಾರತದ ರಫ್ತು ಗಳಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ರಫ್ತಿನ ಹಿನ್ನೆಲೆಯಲ್ಲಿ ದೇಶೀಯ ಧಾನ್ಯದ ಬೆಲೆಗಳು ಹೆಚ್ಚಾಗಬಹುದು. ಇದರಿಂದ, ರೈತರು ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಈಜಿಪ್ಟ್‌ ತನ್ನ ಬೇಡಿಕೆಯ ಗೋಧಿ ಪೂರೈಕೆಗಾಗಿ ಉಕ್ರೇನ್‌ ಮತ್ತು ರಷ್ಯಾವನ್ನು ಸಾಂಪ್ರದಾಯಿಕವಾಗಿ ಅವಲಂಬಿಸಿದೆ. ಈಜಿಪ್ಟ್‌ ತನ್ನ ಒಟ್ಟು  ಆಮದಿನಲ್ಲಿ 80% ನಷ್ಟು ಗೋಧಿಯನ್ನು ಈ ಎರಡೂ ರಾಷ್ಟ್ರಗಳಿಂದ ಖರೀದಿಸುತ್ತಿತ್ತು. ಆದರೆ, ಯುದ್ದದಿಂದಾಗಿ ಆ ದೇಶಗಳೊಂದಿಗಿನ ವಹಿವಾಟಿಗೆ ತೊಡಕಾಗಿದೆ. ಹೀಗಾಗಿ, ಭಾರತದಿಂದ ಗೋಧಿ ಖರೀದಿಗೆ ಈಜಿಪ್ಟ್‌ ಮುಂದಾಗಿದೆ.

ಇತ್ತೀಚೆಗೆ, ಭಾರತದ ಗೋಧಿ ಉತ್ಪನ್ನದ ಗುಣಮಟ್ಟ, ಸಂಗ್ರಹಣೆ ಮತ್ತು ಇತರ ರಫ್ತು ನಿಯತಾಂಕಗಳ ಬಗ್ಗೆ ಚರ್ಚಿಸಲು ಮತ್ತು ವಿಶ್ಲೇಷಿಸಲು ಈಜಿಪ್ಟ್‌ನ ನಿಯೋಗವು ಭಾರತಕ್ಕೆ ಭೇಟಿ ನೀಡಿತ್ತು. ಈ ವೇಳೆ, ಮಧ್ಯಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡಿ, ಭಾರತೀಯ ಗೋಧಿ ಪ್ರಭೇದಗಳನ್ನು ಪರೀಕ್ಷಿಸಿ, ಖರೀದಿಗೆ ಅನುಮೋದನೆ ನೀಡಿದೆ. 

ಈ ಕುರಿತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ : “ಭಾರತೀಯ ರೈತರು ಜಗತ್ತಿಗೆ ಆಹಾರವನ್ನು ನೀಡುತ್ತಿದ್ದಾರೆ. ಭಾರತದಿಂದ ಗೋಧಿ ಖರೀದಿಗೆ ಈಜಿಪ್ಟ್ ಅನುಮೋದನೆ ನೀಡಿದೆ. ವಿಶ್ವವು ಸ್ಥಿರವಾದ ಆಹಾರ ಪೂರೈಕೆಗಾಗಿ ವಿಶ್ವಾಸಾರ್ಹ ಪರ್ಯಾಯ ಮೂಲಗಳನ್ನು ಹುಡುಕುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಉತ್ತಮ ಹೆಜ್ಜೆ ಇಡುತ್ತಿದೆ. ನಾವು ಜಗತ್ತಿಗೆ ಸೇವೆ ಸಲ್ಲಿಸಲು ಸಿದ್ಧರಿದ್ದೇವೆ" ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನು ಓದಿದಿರಾ?: ಸಾವಯವ ಕೃಷಿಯಲ್ಲಿ ರೈತನ ಸಾಧನೆ

ಆಹಾರ ಪರೀಕ್ಷೆಯ ಪ್ರಯೋಗಾಲಯಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ತ್ವರಿತ ರಫ್ತಿಗಾಗಿ ಉತ್ಪನ್ನಗಳನ್ನು ಬಂದರುಗಳಿಗೆ ತಲುಪಿಸಲು ಹೆಚ್ಚುವರಿ ರೈಲು ವ್ಯಾಗನ್‌ಗಳನ್ನು ಒದಗಿಸಲು ರೈಲ್ವೆ ಇಲಾಖೆಗೆ ಕೇಳಲಾಗಿದೆ. ಗೋಧಿ ಸಾಗಣೆಗೆ ಆದ್ಯತೆ ನೀಡುವಂತೆ ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಾಣಿಜ್ಯ ಸಚಿವಾಲಯವು ಹೇಳಿದೆ. 

ಜಾಗತಿಕ ಬೇಡಿಕೆಗೆ ಅನುಗುಣವಾಗಿ ಭಾರತವು 10 ಮಿಲಿಯನ್ (ಒಂದು ಕೋಟಿ) ಟನ್ ಗೋಧಿ ರಫ್ತು ಮಾಡಬಹುದು ಎಂದು ಆಹಾರ ಸಚಿವಾಲಯ ತಿಳಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್