ಭಾರತದಿಂದ ರಫ್ತಾಗುವ ಕೃಷಿ ಉತ್ಪನ್ನಗಳ ಗುಣಮಟ್ಟದ ಕಳವಳ; ರಚನಾತ್ಮಕ ಬದಲಾವಣೆ ಅಗತ್ಯವಿದೆ ಎಂದ ತಜ್ಞರು

ದುರುಂ ಗೋಧಿಯಲ್ಲಿ ‘ರುಬೆಲ್ಲಾ’ ವೈರಸ್ ಇದೆ ಎಂದು ಆರೋಪಿಸಿ ಟರ್ಕಿ ಸಂಪೂರ್ಣ ಸರಕನ್ನು ಸ್ವೀಕರಿಸದೆ ಹಿಂದಕ್ಕೆ ಕಳುಹಿಸಿತ್ತು. ತಜ್ಞರ ಪ್ರಕಾರ ಗೋಧಿ ಬೆಳೆಯುವ ಪ್ರದೇಶದ ಮಣ್ಣು ಮತ್ತು ಬೀಜಕ್ಕೆ ಹಾನಿಯಾದಾಗ ರುಬೆಲ್ಲಾ ವೈರಸ್ ತಗಲುತ್ತದೆ. ಭಾರತೀಯ ಕೃಷಿ ಉತ್ಪನ್ನಗಳ ಬಗ್ಗೆ 2020-2021ರ ನಡುವೆ ಯುರೋಪಿಯನ್‌ ಒಕ್ಕೂಟ 489 ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿರುವುದೂ ಕಟುಸತ್ಯ.
Wheat India

ಭಾರತದಿಂದ ರಫ್ತಾಗಿರುವ 56000 ಟನ್‌ಗಳಷ್ಟು ಗೋಧಿ ಹಿಂದಕ್ಕೆ ಕಳುಹಿಸಿರುವ ಟರ್ಕಿ ದೇಶದ ನಿರ್ಧಾರದ ಬಗ್ಗೆ ತನಿಖೆ ನಡೆಸಿ ಗಮನಹರಿಸುವುದಾಗಿ ಶುಕ್ರವಾರ ಕೈಗಾರಿಕಾ ಸಚಿವ ಪೀಯುಶ್ ಗೋಯಲ್ ಹೇಳಿದ್ದಾರೆ. ದುರುಂ ಗೋಧಿಯಲ್ಲಿ ‘ರುಬೆಲ್ಲಾ’ ವೈರಸ್ ಇದೆ ಎಂದು ಆರೋಪಿಸಿ ಟರ್ಕಿ ಸಂಪೂರ್ಣ ಸರಕನ್ನು ಸ್ವೀಕರಿಸದೆ ಹಿಂದಕ್ಕೆ ಕಳುಹಿಸಿತ್ತು. 

“ಭಾರತೀಯ ಗೋಧಿಯನ್ನು ದೇಶವೊಂದು ಸ್ವೀಕರಿಸಲು ನಿರಾಕರಿಸಿದೆ ಮತ್ತು ಆ ಬಗ್ಗೆ ತನಿಖೆ ನಡೆಸಲು ನಾವು ಆರಂಭಿಸಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವ ಪ್ರಕಾರ ರಫ್ತಾದ ಗೋಧಿ ಐಟಿಸಿ ಲಿಮಿಟೆಡ್‌ಗೆ ಸೇರಿದ್ದೆಂದು ತಿಳಿದುಬಂದಿದೆ. ಐಟಿಸಿ ಸಂಸ್ಥೆ ಗುಣಮಟ್ಟದ ರಫ್ತಿಗೆ ಹೆಸರಾಗಿದೆ. ನೆದರ್‌ಲ್ಯಾಂಡ್‌ಗೆ ಕಳುಹಿಸಲು ಐಟಿಸಿ ಸಂಸ್ಥೆ ಈ ಗೋಧಿಯನ್ನು ರಫ್ತು ಮಾಡಿದೆ. ಆದರೆ ಟರ್ಕಿಗೆ ಸರಕು ಕಳುಹಿಸಬೇಕಾಗಿರುವ ಬಗ್ಗೆ ತಮಗೆ ತಿಳಿದಿರಲಿಲ್ಲವೆಂದು ಐಟಿಸಿ ಹೇಳಿದೆ” ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ. 

ಸರಕು ಸ್ವೀಕರಿಸಲು ನಿರಾಕರಿಸಿದ ಈಜಿಪ್ತ್

ಟರ್ಕಿ ನಿರಾಕರಿಸಿದ್ದ ದುರುಂ ಗೋಧಿಯನ್ನು ಈಜಿಪ್ತ್‌ಗೆ ಕಳುಹಿಸಲಾಗಿದ್ದು, ಆ ದೇಶ ಅದನ್ನು ಸ್ವೀಕರಿಸಿದೆ. ಭಾರತ ಮೇ 13ರಂದು ಗೋಧಿ ನಿಷೇಧ ಹೇರುವ ಮೊದಲೇ 56,000 ಟನ್‌ಗಳ ಗೋಧಿ ಸರಕನ್ನು ಟರ್ಕಿಗೆ ಕಳುಹಿಸಲಾಗಿತ್ತು. ಅದೀಗ ಈಜಿಪ್ತ್ ಸೇರಿದೆ ಎಂದು ವರದಿಯಾಗಿತ್ತು. ಆದರೆ ಇತ್ತೀಚೆಗಿನ ಮಾಧ್ಯಮ ವರದಿಗಳ ಪ್ರಕಾರ ಈಜಿಪ್ತ್ ಕೂಡ ಈ ಸರಕನ್ನು ಸ್ವೀಕರಿಸಲು ನಿರಾಕರಿಸಿದೆ. “ಟರ್ಕಿಗೆ ಹೋಗಬೇಕಾಗಿದ್ದ ಗೋಧಿಯ ಸರಕನ್ನು ಈಜಿಪ್ತ್‌ಗೆ ಪ್ರವೇಶಿಸುವುದನ್ನು ತಡೆಯಲಾಗಿದೆ” ಎಂದು ಈಜಿಪ್ತ್‌ನ ಕ್ವಾರಂಟೈನ್ ಮುಖ್ಯಸ್ಥ ಅಹಮದ್ ಎಲ್ ಅತ್ತಾರ್ ಶನಿವಾರ ಹೇಳಿದ್ದಾರೆ. ಅದಕ್ಕೆ ಬದಲಾಗಿ ಈಜಿಪ್ತ್‌ನ ಖಾಸಗಿ ಕ್ಷೇತ್ರ ಭಾರತದಿಂದ ಖರೀದಿಸಿರುವ ಗೋಧಿಯ ಪ್ರತ್ಯೇಕ ಸರಕನ್ನು ಸ್ವೀಕರಿಸುತ್ತಿರುವುದಾಗಿ ಅತ್ತಾರ್ ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಕಾರಣದಿಂದ ಬ್ರೆಡ್ ಸರಬರಾಜು ಕೊರತೆ ಎದುರಿಸುತ್ತಿದ್ದ ಈಜಿಪ್ತ್‌ಗೆ ಗೋಧಿ ಅಗತ್ಯವಿತ್ತು. ಅತ್ಯಧಿಕ ಪ್ರಮಾಣದಲ್ಲಿ ಗೋಧಿ ಆಮದು ಮಾಡಿಕೊಳ್ಳುವ ಈಜಿಪ್ತ್, ಭಾರತ ಸೇರಿದಂತೆ ಇತರ ದೇಶಗಳಿಂದ ಆಮದು ಮಾಡಿಕೊಂಡು ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿದೆ. ರಷ್ಯಾ- ಉಕ್ರೇನ್ ಯುದ್ಧದಿಂದಾಗಿ ಉತ್ತರ ಆಫ್ರಿಕಾ ದೇಶಗಳಿಂದ ಗೋಧಿ ಸರಬರಾಜಿಗೆ ಸಮಸ್ಯೆಯಾಗಿರುವ ಕಾರಣ ಏಪ್ರಿಲ್‌ನಲ್ಲಿ ಈಜಿಪ್ತ್ ಕೃಷಿ ಸಚಿವರು ಭಾರತದಿಂದ ಗೋಧಿ ಆಮದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಐದು ಲಕ್ಷ ಟನ್‌ಗಳನ್ನು ಗೋಧಿಯನ್ನು ಭಾರತದಿಂದ ನೇರವಾಗಿ ಖರೀದಿಸಲು ಅಲ್ಲಿನ ಸರ್ಕಾರ ಉದ್ದೇಶಿಸಿದೆ. ಆ ಬಗ್ಗೆ ಇನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಆದರೆ ಭಾರತದ ನಿಷೇಧದ ನಿರ್ಧಾರ ಒಪ್ಪಂದಕ್ಕೆ ಅಡ್ಡಿಯಾಗದು ಎಂದು ಈಜಿಪ್ತ್‌ನ ಸರಕು ಸರಬರಾಜು ಸಚಿವ ಅಲೈ ಮೋಸೆಲ್ಹೀ ಈಗಾಗಲೇ ಹೇಳಿದ್ದಾರೆ. ಭಾರತ ಸರ್ಕಾರವೂ ಈಜಿಪ್ತ್‌ಗೆ ಗೋಧಿ ಕಳುಹಿಸಲು ರಫ್ತಿಗೆ ಅವಕಾಶ ನೀಡುವುದಾಗಿ ತಿಳಿಸಿದೆ. 

ಈಜಿಪ್ತ್ ಈವರೆಗೆ 35 ಲಕ್ಷ ಟನ್‌ಗಳಷ್ಟು ಸ್ಥಳೀಯ ಗೋಧಿಯನ್ನು ಕೊಯ್ಲಿನ ಸಂದರ್ಭದಲ್ಲಿ ಭಾರತದಿಂದ ಪಡೆದಿದೆ. ಆಗಸ್ಟ್‌ನಲ್ಲಿ ಗೋಧಿ ಸಂಗ್ರಹದ ಅವಧಿ ಮುಗಿಯಲಿದೆ ಎಂದು ಶನಿವಾರ ಭಾರತೀಯ ಕೃಷಿ ಸಚಿವಾಲಯವು ಹೇಳಿದೆ. 

ಭಾರತ ಗೋಧಿ ರಫ್ತು ನಿಷೇಧ ಹೇರಿದ ನಂತರ ಐದು ದೇಶಗಳು ಅಧಿಕೃತವಾಗಿ ಗೋಧಿ ಆಮದಿಗೆ ಭಾರತವನ್ನು ಸಂಪರ್ಕಿಸಿವೆ. ಪ್ರತೀ ದೇಶದ ಜೊತೆಗೆ ಸರ್ಕಾರದಿಂದ ಸರ್ಕಾರದ ನಡುವೆ ಒಪ್ಪಂದದ ಮೂಲಕ ಗೋಧಿ ರಫ್ತು ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. 

ರುಬೆಲ್ಲಾ ವೈರಸ್ ಇರುವ ಕಳವಳ

ಟರ್ಕಿಗೆ ರವಾನೆಯಾದ ಗೋಧಿಯಲ್ಲಿ ರುಬೆಲ್ಲಾ ವೈರಸ್ ಇರುವ ಮಾಹಿತಿಯ ಬಗ್ಗೆ ತನಿಖೆ ನಡೆಸುವುದಾಗಿ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ. “ಭಾರತದಿಂದ ಹೋಗುವಾಗ ವೈರಸ್‌ಗಳ ಪರಿಶೀಲನೆ ನಡೆಸಿ ಕಳುಹಿಸಲಾಗಿತ್ತು. ಅಲ್ಲದೆ ಗೋಧಿ ಸ್ವೀಕರಿಸದೆ ಇರಲು ಟರ್ಕಿ ಇನ್ನೂ ಸೂಕ್ತ ಕಾರಣವನ್ನು ಭಾರತಕ್ಕೆ ನೀಡಿಲ್ಲ, ಐಟಿಸಿ ಲಿಮಿಟೆಡ್‌ಗೆ ಸೇರಿದ ಸರಕಿಗೆ ಸಂಬಂಧಿಸಿದ ಹಣಕಾಸು ವ್ಯವಹಾರ ಪೂರ್ಣಗೊಂಡಿದೆ. ಕಂಪನಿ ಸರಕನ್ನು ವಿದೇಶಿ ಸಂಸ್ಥೆಗೆ ಮಾರಿತ್ತು. ಅಲ್ಲಿಂದ ಅದನ್ನು ಟರ್ಕಿ ಮೂಲದ ಸಂಸ್ಥೆಗೆ ಮಾರಲಾಗಿದೆ” ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಗುರುವಾರ ಹೇಳಿದ್ದರು. 

ಸರಕಿನಲ್ಲಿ ರುಬೆಲ್ಲಾ ವೈರಸ್ ಇದೆ ಎಂದು ಪತ್ತೆಯಾದ ನಂತರ ಟರ್ಕಿ ಅದನ್ನು ಸ್ವೀಕರಿಸಲು ನಿರಾಕರಿಸಿದೆ ಎಂದು ಇಸ್ತಾನ್ಬುಲ್ ಮೂಲದ ವ್ಯಾಪಾರಿಗಳು ಹೇಳಿರುವುದಾಗಿ ‘ಮಿಂಟ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ಖರೀದಿದಾರ ಮತ್ತು ಮಾರಾಟಗಾರರಿಬ್ಬರೂ ಪರಿಶೀಲನೆ ನಂತರ ನೆದರ್‌ಲ್ಯಾಂಡ್‌ಗೆ ಗೋಧಿ ರಫ್ತಾಗಿದೆ” ಎಂದು ಐಟಿಸಿ ಹೇಳಿದೆ. ಈ ಬಗ್ಗೆ ಟರ್ಕಿ ಮತ್ತು ಈಜಿಪ್ತ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. 

ಸರಕುಗಳ ಪರಿಶೀಲನೆಯಲ್ಲಿ ಅಲಕ್ಷ್ಯ

ರಫ್ತುದಾರರ ಪ್ರಕಾರ ಭಾರತದಿಂದ ಟರ್ಕಿಗೆ ಗೋಧಿ ರವಾನೆಯಾಗಲು ಎರಡು ವಾರಗಳು ಬೇಕಾಗುತ್ತವೆ ಮತ್ತು ಉಷ್ಣತೆ ಮತ್ತು ತೇವಾಂಶದಲ್ಲಿನ ಬದಲಾವಣೆಗಳಿಂದ ರೋಗಾಣುಗಳು ಬೆಳೆಯುವ ಸಮಸ್ಯೆಯಾಗಿರಬಹುದು.

ಆದರೆ ಪರೀಕ್ಷಿಸಿ ಕಳುಹಿಸುವ ಗೋಧಿಗೆ ಸೋಂಕು ತಗಲುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ. “ರುಬೆಲ್ಲಾ ವೈರಸ್ ಬೆಳೆಯಲು ಬೀಜ ಅಥವಾ ಮಣ್ಣಿನ ಮಾಲಿನ್ಯಗಳು ಕಾರಣ. ಅವುಗಳನ್ನು ಸರಕು ರಫ್ತು ಮಾಡುವ ಮೊದಲೇ ಪತ್ತೆಹಚ್ಚಲಾಗುತ್ತದೆ. ಈಗಿನ ಪ್ರಕರಣದಲ್ಲಿ ಅಲಕ್ಷ್ಯ ಧೋರಣೆ ಕಂಡುಬರುತ್ತಿದೆ. ಇಂತಹ ವಿಷಯಗಳ ಬಗ್ಗೆ ಸಚಿವಾಲಯ ಗಮನಹರಿಸಿ ಪರೀಕ್ಷಾ ಪ್ರಯೋಗಾಲಯಗಳ ಗುಣಮಟ್ಟ ವೃದ್ಧಿಸಬೇಕು” ಎಂದು ಸರ್ಕಾರೇತರ ಆಹಾರ ಸಂಶೋಧನಾ ಸಂಸ್ಥೆಯೊಂದರ ತಜ್ಞರು ಹೇಳಿದ್ದಾಗಿ ‘ಮಿಂಟ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಿಂದ ಸಾಗಾಟವಾಗುವ ಸರಕುಗಳಲ್ಲಿ ರೋಗಾಣುಗಳ ಸಮಸ್ಯೆಯ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಇಂಡೋನೇಷ್ಯಾಗೆ ಕಳುಹಿಸಿದ ಸರಕುಗಳಲ್ಲೂ ರೋಗಾಣುಗಳ ಸಮಸ್ಯೆ ಕಂಡು ಬಂದು ಭಾರತೀಯ ಕೃಷಿ ತಜ್ಞರನ್ನು ಅಮಾನತುಗೊಳಿಸಲಾಗಿತ್ತು. ಆಹಾರ ಸುರಕ್ಷೆಯನ್ನು ಪರೀಕ್ಷಿಸಿ ಪ್ರಮಾಣಪತ್ರ ನೀಡುವ ಪ್ರಯೋಗಾಲಯಗಳನ್ನೂ ಭಾರತ ನೋಂದಾಯಿಸಿಕೊಂಡಿಲ್ಲ. ಇಂತಹ ಪ್ರಕರಣಗಳಿಂದ ಜಾಗತಿಕವಾಗಿ ಭಾರತದ ಸರಕುಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಕಳವಳವೂ ವ್ಯಕ್ತವಾಗಿದೆ. 

ಭಾರತೀಯ ಕೃಷಿ ಉತ್ಪನ್ನ ಗುಣಮಟ್ಟದ ಬಗ್ಗೆ ಕಳವಳ

ಪೀಯೂಶ್ ಗೋಯಲ್ ಅವರು ಸಮರ್ಥಿಸಿಕೊಂಡಿರುವ ಪ್ರಕಾರ, ನೆದರ್‌ಲ್ಯಾಂಡ್‌ನ ಅಗತ್ಯಗಳಿಗೆ ತಕ್ಕಂತೆ ಸರಕನ್ನು ಪರೀಕ್ಷಿಸಲಾಗಿದೆ. ಟರ್ಕಿ ಯಾಕೆ ಸರಕನ್ನು ನಿರಾಕರಿಸಿದೆ ಎನ್ನುವ ಬಗ್ಗೆಯೂ ತಮಗೆ ಸ್ಪಷ್ಟತೆಯಿಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳು ಭಾರತದ ಗೋಧಿ ನಿರಾಕರಿಸಲು ಟರ್ಕಿ ಮತ್ತು ಪಾಕಿಸ್ತಾನದ ಸ್ನೇಹ ರಾಜಕೀಯ ಕಾರಣ ಎಂದು ಆರೋಪಿಸಿದ್ದಾರೆ. “ಟರ್ಕಿ ಪಾಕಿಸ್ತಾನಕ್ಕೆ ಬೆಂಬಲಿಸುತ್ತಿರುವ ಕಾರಣ ಆ ದೇಶದ ಜೊತೆಗೆ ಭಾರತದ ಸಂಬಂಧ ಹದಗೆಟ್ಟಿದೆ. ಹೀಗಾಗಿ ಸರಕು ನಿರಾಕರಣೆಯಲ್ಲಿ ರಾಜಕೀಯ ಉದ್ದೇಶವೂ ಇರಬಹುದು. ಜಾಗತಿಕವಾಗಿ ಗೋಧಿಗೆ ಬಹಳ ಬೇಡಿಕೆಯಿದೆ. ಟರ್ಕಿಗೆ ಅದರ ಅಗತ್ಯವಿಲ್ಲದಿದ್ದರೆ, ಬೇರೆ ದೇಶಗಳಿಗೆ ಸಾಗಿಸಲಾಗುವುದು” ಎಂದು ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ‘ಮಿಂಟ್’ ವರದಿಯಲ್ಲಿ ಬರೆಯಲಾಗಿದೆ.

ಆದರೆ ವ್ಯಾಪಾರ ತಜ್ಞರು ಈ ಬಾರಿ ಟರ್ಕಿ ರಾಜಕೀಯ ಉದ್ದೇಶಕ್ಕಾಗಿ ಗೋಧಿ ನಿರಾಕರಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. “ಸರ್ಕಾರ ರಚನಾತ್ಮಕ ವಿಷಯಗಳತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಭಾರತೀಯ ಕೃಷಿ ಉತ್ಪನ್ನಗಳ ಬಗ್ಗೆ 2020-2021ರ ನಡುವೆ ಯುರೋಪಿಯನ್‌ ಒಕ್ಕೂಟ 489 ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದೆ. ಅದರ ಹಿಂದೆಯೂ ರಾಜಕೀಯ ಉದ್ದೇಶವಿದೆಯೆ?” ಎಂದು ವ್ಯಾಪಾರ ತಜ್ಞರು ಪ್ರಶ್ನಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಇಂಡೋನೇಷ್ಯಾದ ಕೃಷಿ ಕ್ವಾರಂಟೈನ್ ಸಂಸ್ಥೆ ಭಾರತದಿಂದ ರಫ್ತಾದ ಒಣಗಿದ ಮೆಣಸುಗಳಲ್ಲಿ ಐದು ಸಮಸ್ಯೆಗಳಿರುವುದನ್ನು ಮುಂದಿಟ್ಟಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್